ಕನ್ನಡಪ್ರಭ ವಾರ್ತೆ ಮದ್ದೂರು
ಸಾಲ ಬಾಧೆಯಿಂದ ರೈತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ವಳಗೆರೆಹಳ್ಳಿಯಲ್ಲಿ ನಡೆದಿದೆ.ಗ್ರಾಮದ ಲೇ.ಮೂಗಪ್ಪರ ಪುತ್ರ ವಿ.ಎಂ.ರೂಪೇಶ್ (45) ಆತ್ಮಹತ್ಯೆ ಮಾಡಿಕೊಂಡವರು.
ತನ್ನ ತಾಯಿ ತಾಯಮ್ಮರ ಹೆಸರಿನಲ್ಲಿ ಒಂದು ಎಕರೆ ಹದಿನಾರು ಗುಂಟೆ ವಿಸ್ತೀರ್ಣದ ಕೃಷಿ ಜಮೀನಿನಲ್ಲಿ ಭತ್ತ, ರಾಗಿ, ರೇಷ್ಮೆ ಬೆಳೆ ಬೆಳೆಯುತ್ತಿದ್ದರು. ಬೇಸಾಯ ಮಾಡುವ ಉದ್ದೇಶದಿಂದ ತಾಯಿ ತಾಯಮ್ಮರ ಹೆಸರಿನಲ್ಲಿ ಎಸ್‌ಬಿಐ ಬ್ಯಾಂಕ್‌ನಲ್ಲಿ 48 ಸಾವಿರ ರು., ವಳಗೆರೆಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 37 ಸಾವಿರ ಹಾಗೂ ರೂಪೇಶ್ ಅವರ ಹೆಸರಿನಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ 72 ಸಾವಿರ ರು. ಚಿನ್ನಾಭರಣಗಳ ಸಾಲ, ಪತ್ನಿ ಸುಶ್ಮಿತರ ಹೆಸರಿನಲ್ಲಿ ಮೈಕ್ರೋ ಪೈನಾನ್ಸ್ ಮತ್ತು ಸಂಘ ಸಂಸ್ಥೆಗಳಿಂದ 4,72,500 ರು. ಕೃಷಿ ಸಾಲ ಮಾಡಿದ್ದರು.ನಾಲೆಗಳಲ್ಲಿ ನೀರಿಲ್ಲದೆ ಮತ್ತು ಮಳೆ ಇಲ್ಲದ ಕಾರಣ ಬೆಳೆ ಒಣಗಿ ನಷ್ಟ ಹೊಂದಿದ ಕಾರಣ ಬೆಳೆ ಬೆಳೆಯುವ ಉದ್ದೇಶದಿಂದ ಪಡೆದಿದ್ದ ಸಾಲ ತೀರಿಸಲಾಗದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ರೈತನಿಗೆ ತಾಯಿ ತಾಯಮ್ಮ, ಪತ್ನಿ ಸುಶ್ಮಿತಾ, ಪುತ್ರರಾದ ಪವನ್ ಗೌಡ ಮತ್ತು ಹರೀಶ್ ಗೌಡ ಇದ್ದಾರೆ. ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ರೈತನ ಮರಣೋತ್ತರ ಪರೀಕ್ಷೆ ವೇಳೆ ಮದ್ದೂರು ಸರ್ಕಾರಿ ಆಸ್ಪತ್ರೆಗೆ ತಹಸೀಲ್ದಾರ್ ಸೋಮಶೇಖರ್ ಭೇಟಿ ನೀಡಿ ಸಂಬಂಧಿಕರಿಗೆ ಸಾಂತ್ವನ ಹೇಳಿದರು.
ದೊರೆಯದ ವಿಮೆ, ಬರ ಪರಿಹಾರ:ಕೆಆರ್‌ಎಸ್‌ನಿಂದ ನಾಲೆಗಳಿಗೆ ನೀರು ಹರಿಸದೆ ಮತ್ತು ಮದ್ದೂರು ಬರ ಪೀಡಿತ ತಾಲೂಕು ಪ್ರದೇಶವೆಂದು ಘೋಷಣೆಯಾಗಿದ್ದರೂ ಸಹ ಬೆಳೆ ವಿಮೆ ಮತ್ತು ಬರ ಪರಿಹಾರ ದೊರಕದ ಕಾರಣ ರೈತರು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಜಿಲ್ಲಾ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ವಿ.ಸಿ.ಉಮಾಶಂಕರ್ ಒತ್ತಾಯಿಸಿದ್ದಾರೆ.