ಉಣಕಲ್‌ ರೈತರಿಂದ ನಿತ್ಯ ಎತ್ತುಗಳ ಕೃಷಿ ಜಾಗೃತಿ!

KannadaprabhaNewsNetwork |  
Published : Apr 30, 2025, 12:36 AM IST
29ಎಚ್‌ಯುಬಿ25ರೈತರಿಗೆ ಎತ್ತಗಳ ಕುರಿತಂತೆ ಜಾಗೃತಿ ಮೂಡಿಸುತ್ತಿರುವ ರೈತ ಮುಖಂಡ ಈರಪ್ಪ ವಾಲಿಕಾರ | Kannada Prabha

ಸಾರಾಂಶ

ಏ. 30ರಂದು ಬಸವ ಜಯಂತಿಗೆ ಗ್ರಾಮೀಣದಲ್ಲಿ ಎತ್ತುಗಳಿಗೆ ಪೂಜಿಸಿ ಗ್ರಾಮಸ್ಥರೆಲ್ಲ ಎತ್ತುಗಳ ಮೆರವಣಿಗೆ ಮಾಡುತ್ತಾರೆ. ಆದರೆ, ಮಹಾನಗರ ವ್ಯಾಪ್ತಿಯಲ್ಲೇ ರೈತರು ನಿರಂತರ ಜಾಗೃತಿ ಮೂಡಿಸುತ್ತಿರುವುದು ಹರ್ಷ ಮೂಡಿಸಿದೆ.

ಮಹಮ್ಮದ ರಫೀಕ್ ಬೀಳಗಿ ಹುಬ್ಬಳ್ಳಿ

ಹೊಲಗಳಲ್ಲಿ ಟ್ರ್ಯಾಕ್ಟರ್‌ಗಳ ಸದ್ದು ಹೆಚ್ಚಾದ ಮೇಲೆ ರೈತರ ಮನೆಯಿಂದ ಎತ್ತುಗಳು ಕಣ್ಮರೆಯಾಗುತ್ತಿರುವ ಆತಂಕದ ಮಧ್ಯೆಯೇ ಹುಬ್ಬಳ್ಳಿಯ ಮಹಾನಗರ ವ್ಯಾಪ್ತಿಯ ಉಣಕಲ್‌ನಲ್ಲಿ ರೈತರ ಗುಂಪೊಂದು ಕೃಷಿಯಲ್ಲಿ ಎತ್ತುಗಳ ಮಹತ್ವದ ಕುರಿತು ಸದ್ದಿಲ್ಲದೇ ಜಾಗೃತಿ ಮೂಡಿಸುತ್ತಿದೆ.

ಏ. 30ರಂದು ಬಸವ ಜಯಂತಿಗೆ ಗ್ರಾಮೀಣದಲ್ಲಿ ಎತ್ತುಗಳಿಗೆ ಪೂಜಿಸಿ ಗ್ರಾಮಸ್ಥರೆಲ್ಲ ಎತ್ತುಗಳ ಮೆರವಣಿಗೆ ಮಾಡುತ್ತಾರೆ. ಆದರೆ, ಮಹಾನಗರ ವ್ಯಾಪ್ತಿಯಲ್ಲೇ ರೈತರು ನಿರಂತರ ಜಾಗೃತಿ ಮೂಡಿಸುತ್ತಿರುವುದು ಹರ್ಷ ಮೂಡಿಸಿದೆ.

ವ್ಯವಸಾಯದಲ್ಲಿಂದು ಚಿಕ್ಕಪುಟ್ಟ ಯಂತ್ರಗಳಿಂದ ಹಿಡಿದು ದೊಡ್ಡಮಟ್ಟದ ಯಂತ್ರಗಳ ಬಳಕೆ ಕಂಡುಬರುತ್ತಿದೆ. ಬಹುತೇಕ ರೈತರು ಇಳುವರಿ ಹೆಚ್ಚಳದ ಬೆನ್ನಿಗೆ ಬಿದ್ದಿದ್ದು, ಸಾಂಪ್ರಾದಾಯಿಕ ಕೃಷಿ ಮಾಯವಾಗುತ್ತಿದೆ. ಪರಿಣಾಮ ಎತ್ತುಗಳ ಸಾಕುವವರೇ ಇಲ್ಲವಾಗಿದ್ದಾರೆ.

ಆಧುನಿಕತೆ ನೆಪದಲ್ಲಿ ನೈಸರ್ಗಿಕ ಕೃಷಿ ಬಿಟ್ಟು ರಾಸಾಯನಿಕ ಗೊಬ್ಬರ, ಕೀಟನಾಶಕದ ಮೊರೆ ಹೋಗಿದ್ದಾರೆ. ಇದರಿಂದ ಆಹಾರವಿಂದು ವಿಷವಾಗಿದೆ. ಕೃಷಿಕರು ಜಾನುವಾರು ಸಾಕಾಣಿಕೆ ಬಿಟ್ಟು ಟ್ರ್ಯಾಕ್ಟರ್‌ ಸೇರಿ ಇತರ ಯಂತ್ರಗಳ ಮೊರೆ ಹೋಗಿದ್ದಾರೆ. ಇದು ಬದಲಾಗಬೇಕು ಮತ್ತೆ ಸಾಂಪ್ರದಾಯಿಕ ಕೃಷಿಗೆ ಒತ್ತು ನೀಡಬೇಕು ಎಂಬುದು ಜಾಗೃತಿಯ ಉದ್ದೇಶವಾಗಿದೆ.

15 ವರ್ಷಗಳ ಹಿಂದೆ ಶೇ. 90ರಷ್ಟು ರೈತರು ಎತ್ತುಗಳ ಮೂಲಕ ಕೃಷಿ ಚಟುವಟಿಕೆ ನಡೆಸುತ್ತಿದ್ದರು. ನೇಗಿಲು ಹೊಡೆಯುವುದು, ಕುಂಟೆ, ಬಿತ್ತನೆ, ಒಕ್ಕಣಿಕೆ ಹೀಗೆ ಪ್ರತಿಯೊಂದು ಕೆಲಸವನ್ನು ಎತ್ತುಗಳ ಮೂಲಕ ಮಾಡುತ್ತಿದ್ದರು. ಪ್ರತಿಯೊಂದು ರೈತರ ಮನೆಯಲ್ಲಿ ಎರಡು ಎತ್ತುಗಳು ಹಾಗೂ ಕೃಷಿ ಪರಿಕರಗಳು ಕಂಡು ಬರುತ್ತಿದ್ದವು. ಆದರೆ ಇಂದು ಅವೆಲ್ಲವೂ ಮಾಯವಾಗಿವೆ.

ಕೃಷಿಯಲ್ಲಿ ಇತ್ತೀಚಿಗೆ ಯಂತ್ರಗಳ ಬಳಕೆ ಹೆಚ್ಚಿದೆ. ಭೂಮಿ ಹದ ಮಾಡಲು, ಬಿತ್ತನೆ, ರೆಂಟೆ, ಎಡೆ ಕುಂಟಿ ಹೊಡೆಯಲು ಇಂದು ಬಹುತೇಕ ರೈತರು ಟ್ರ್ಯಾಕ್ಟರ್‌ ಸೇರಿ ಇತರ ಯಂತ್ರಗಳ ಬಳಸುತ್ತಿದ್ದಾರೆ. ಇದರಿಂದಾಗಿ ಫಲವತ್ತೆತೆ ಕಡಿಮೆಯಾಗಿ ಭೂಮಿ ಬರಡಾಗುವ ಸಾಧ್ಯತೆ. ಇದನ್ನು ಕಂಡು ಕಳವಳಗೊಂಡ ಉಣಕಲ್‌ನ ಈ ರೈತರ ಗುಂಪು ಜಾಗೃತಿ ಕಾರ್ಯಕ್ಕೆ ಮುಂದಾಗಿದೆ.

ಚಕ್ಕಡಿಗಳಲ್ಲೇ ಉಳವಿ ಜಾತ್ರೆಗೆ: ಶಿಶುನಾಳ ಶರೀಫರ ಜಾತ್ರೆ, ಗರಗ ಮಡಿವಾಳೇಶ್ವರ, ಉ‍ಳವಿ ಚನ್ನಬಸವೇಶ್ವರ ಸೇರಿ ಇತರೆಡೆ ಜಾತ್ರೆಗೆ ತೆರಳುವ ಈ ರೈತರ ಗುಂಪು ಅಲ್ಲಿ ಜಾತ್ರೆಗೆಂದೇ ಎತ್ತುಗಳನ್ನು ಖರೀದಿಸಿ ತಂದು ಬಳಿಕ ಮಾರಾಟ ಮಾಡುವ ಯುವಕರಿಗೆ ತಿಳಿಹೇಳುವ ಕಾರ್ಯ ಮಾಡುತ್ತಿದೆ. ಅಲ್ಲದೆ, ಹುಬ್ಬಳ್ಳಿ ಸುತ್ತಲಿನ ಗ್ರಾಮಗಳಾದ ಹೆಬ್ಬಳ್ಳಿ, ವನಹಳ್ಳಿ, ಶಿವಳ್ಳಿ, ಸುಳ್ಳ ಬ್ಯಾಹಟ್ಟಿ, ಕುಸುಗಲ್‌ ಸೇರಿ ಎಲ್ಲೆಲ್ಲೆ ಜಾತ್ರೆಗಳು ನಡೆಯುತ್ತವೆಯೋ ಅಲ್ಲಿ ರೈತರಿಗೆ ಜಾಗೃತಿ ಮೂಡಿಸುತ್ತಿದೆ. ಇವರಿಂದ ಪ್ರೇರಣೆಯಿಂದ ಅನೇಕರು ಈಗ ಎತ್ತುಗಳನ್ನು ಖರೀದಿಸಿ ಅವುಗಳ ಸೇವೆ ಮಾಡುತ್ತಿದ್ದಾರೆ. ಉದ್ಯಮಿಗಳು, ಉತ್ತಮ ಸೇವೆಯಲ್ಲಿರುವ ನೌಕರರೂ ಈಗ ಎತ್ತುಗಳ ಸಾಕಾಣಿಕೆ ಮಾಡುತ್ತಿದ್ದಾರೆ.

ಶೋಕಿಗಾಗಿ ಎತ್ತುಗಳನ್ನು ಕೊಳ್ಳದೇ ಅವುಗಳ ಸೇವೆ ಮಾಡುವ ಉದ್ದೇಶದಿಂದ ಖರೀದಿಸಿ. ಎತ್ತುಗಳನ್ನು ಸಾಕಿದರೆ ರೈತರ ಪ್ರತಿಯೊಂದು ಕಾರ್ಯದಲ್ಲಿ ಅವುಗಳು ಸಹಕಾರಿಯಾಗುತ್ತವೆ. ರೈತರ ಹೆಗಲಿಗೆ ಹೆಗಲುಕೊಟ್ಟು ದುಡಿಯುವುದರಿಂದ ರೈತರ ಬಾಳು ಸುಭೀಕ್ಷೆಯಿಂದ ಕೂಡುತ್ತದೆ ಎನ್ನುತ್ತಾರೆ ಈ ಗುಂಪಿನ ರೈತರು.

ಎತ್ತು, ಜಾನುವಾರು ಸಾಕಾಣಿಕೆಯಿಂದ ಸೆಗಣಿಯಿಂದ ಕೃಷಿಗೆ ಸಾವಯವ ಗೊಬ್ಬರ ದೊರೆತು ಉತ್ತಮ ಇಳುವಳಿಯನ್ನೂ ಪಡೆಯಬಹುದು ಎಂದು ರೈತರಾದ ಕಲ್ಲಪ್ಪ ವಾಲಿಕಾರ, ಉಳವಪ್ಪ, ಈಶ್ವರ ಬೆಂಗೇರಿ, ರಂಗನಗೌಡ ಚಿಕ್ಕನಗೌಡ್ರ, ಗುರುನಾಥಗೌಡ ಪಾಟೀಲ, ನಿತಿನ್ ಇಂಡಿ ಸೇರಿದಂತೆ ಅನೇಕರು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.ರೈತರಲ್ಲಿ ಎತ್ತುಗಳ ಸಾಕಾಣಿಕೆ ಕುರಿತಂತೆ ಜಾಗೃತಿ ಮೂಡಿಸಲೆಂದೇ ಬಸವ ಜಯಂತಿ ಪ್ರಯುಕ್ತ ಏ. 3ರಂದು ಖಾಲಿ ಗಾಡಾ ಓಡಿಸುವ ಸ್ಪರ್ಧೆ ಏರ್ಪಡಿಸಲಾಗಿದೆ. ಸ್ಪರ್ಧೆಗೆ ಬರುವ ಎತ್ತುಗಳನ್ನು ನೋಡಿ ಮತ್ತಷ್ಟು ಜನರಲ್ಲಿ ಸಾಕಾಣಿಕೆ ಮಾಡುವ ಯೋಚನೆ ಬರಲೆಂದೇ ಈ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಉಣಕಲ್ಲ ರೈತ ಈರಪ್ಪ ವಾಲಿಕಾರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ