ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಹೊರವಲಯದ ಚಿಕ್ಕೋನಹಳ್ಳಿ ವ್ಯಾಪ್ತಿಯಲ್ಲಿ ರೈತರ ಅನಧಿಕೃತ ಪಂಪ್ ಸೆಟ್‌ಗಳ ವಿದ್ಯುತ್ ಸಂಪರ್ಕ ಬಂದ್ ಮಾಡಲು ಮುಂದಾದ ಸೆಸ್ಕಾಂ ಸಿಬ್ಬಂದಿಗೆ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ನೇತೃತ್ವದಲ್ಲಿ ಪ್ರತಿರೋಧ ವ್ಯಕ್ತಪಡಿಸಿದ ರೈತರು, ವಿದ್ಯುತ್ ಸಂಪರ್ಕ ಬಂದ್ ಕಾರ್ಯಾಚರಣೆ ನಡೆಸದಂತೆ ಆಗ್ರಹಿಸಿದರು.
ಇಂಧನ ಇಲಾಖೆ ಆದೇಶದ ಮೇರೆಗೆ ತಾಲೂಕಿನಾದ್ಯಂತ ಸೆಸ್ಕಾಂ ಅನಧಿಕೃತ ವಿದ್ಯುತ್ ಸಂಪರ್ಕ ಬಂದ್ ಮಾಡುವ ಕಾರ್ಯಾಚರಣೆ ಆರಂಭಿಸಿ ಮೈಕ್ ಹಾಕಿಕೊಂಡು ಮಾಹಿತಿ ನೀಡುತ್ತಿರುವ ಸೆಸ್ಕಾಂ ಸಿಬ್ಬಂದಿ ರೈತರು ನಿಗದಿತ ಹಣ ಪಾವತಿಸಿ ತಮ್ಮ ಅಕ್ರಮ ಪಂಪ್ ಸೆಟ್‌ಗಳ ವಿದ್ಯುತ್ ಸಂಪರ್ಕವನ್ನು ಸಕ್ರಮಗೊಳಿಸಿಕೊಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.ವಿದ್ಯುತ್ ಸಂಪರ್ಕ ಕಡಿತದಿಂದ ಉಂಟಾಗುವ ಯಾವುದೇ ರೀತಿಯ ಬೆಳೆ ನಷ್ಟಕ್ಕೆ ವಿದ್ಯುತ್ ಇಲಾಖೆ ಜವಾಬ್ದಾರಿಯಲ್ಲ ಎನ್ನುವ ಎಚ್ಚರಿಕೆ ಸೂಚನೆ ನೀಡುತ್ತಿದ್ದಾರೆ. ಸರ್ಕಾರದ ನೂತನ ವಿದ್ಯುತ್ ನೀತಿ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ತನ್ನ ನೀತಿ ಜಾರಿಗೊಳಿಸುವ ಮುನ್ನ ಅದರ ಸಾಧಕ-ಬಾಧಕ ಯೋಚಿಸಬೇಕು. ಒಂದು ನೀರಾವರಿ ಯೋಜನೆ ಜಾರಿಗೊಳಿಸಲು ಸರ್ಕಾರಕ್ಕೆ ಸಾವಿರಾರು ಕೋಟಿ ಹಣ ಬೇಕು. ಆದರೆ, ರೈತರು ಸರ್ಕಾರದ ಅವಲಂಭನೆಯಿಲ್ಲದೆ ತಾವೇ ಲಕ್ಷಾಂತರ ರು. ವ್ಯಯಿಸಿ ಕೊಳವೆ ಬಾವಿ ತೋಡಿಸಿಕೊಂಡು ತಮ್ಮ ಭೂಮಿಗೆ ನೀರಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ ಎಂದು ದೂರಿದರು.
ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸಿ ರೈತರ ಬದುಕನ್ನು ಹಸನುಗೊಳಿಸಬೇಕಾದ ರಾಜ್ಯ ಸರ್ಕಾರ ರೈತರ ಹಿತಾಸಕ್ತಿಗೆ ವಿರುದ್ಧವಾದ ನೀತಿ ಜಾರಿಗೆತಂದು ರೈತರ ಮನೆಗಳನ್ನು ಲೂಟಿ ಮಾಡುವ ಕಾನೂನುಗಳನ್ನು ಜಾರಿಗೆ ತರುತ್ತಿದೆ. ಯಾವುದೇ ಕಾರಣಕ್ಕೂ ಹೆಚ್ಚುವರಿ ಹಣ ಪಾವತಿಸುವುದಿಲ್ಲ ಮತ್ತು ವಿದ್ಯುತ್ ಸಂಪರ್ಕ ಬಂದ್ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.