ರಾಮಮೂರ್ತಿ ನವಲಿ
ಅಂಜನಾದ್ರಿಯ ಸನಿಹದಲ್ಲಿರುವ ಸಣಾಪುರ ಸಮಾತೋಲನ ಜಲಾಶಯ, ಹಳೇ ಪ್ರವಾಸಿ ಮಂದಿರ ಹತ್ತಿರವಿರುವ ತುಂಗಭದ್ರಾ ನದಿ ಮತ್ತು ಋಷಿ ಪರ್ವತದಲ್ಲಿರುವ ನದಿಯಲ್ಲಿ ಸುಮಾರು 65ರಿಂದ 70 ತೆಪ್ಪ (ಹರಿಗೋಲು) ಸಂಚರಿಸುತ್ತಿವೆ. ಈ ಸಂಚಾರಕ್ಕೆ ಯಾವುದೇ ಇಲಾಖೆಯ ಅನುಮತಿ ಇಲ್ಲ. ರಾಜಾರೋಷವಾಗಿ ತೆಪ್ಪಗಳನ್ನು ಹಾಕುತ್ತಿದ್ದಾರೆ.ನದಿ, ಜಲಾಶಯಗಳಲ್ಲಿ ಅನಧಿಕೃತವಾಗಿ ತೆಪ್ಪ ಹಾಕಬಾರದೆಂದು ನ್ಯಾಯಾಲಯ, ಜಿಲ್ಲಾಡಳಿತ ಸ್ಪಷ್ಟ ಆದೇಶ ನೀಡಿದ್ದರೂ ತೆಪ್ಪ ಮಾಲೀಕರು ಸರ್ಕಾರದ ಸೂಚನೆಗೆ ಕ್ಯಾರೇ ಎನ್ನದೇ ತೆಪ್ಪಗಳನ್ನು ಹಾಕುತ್ತಿದ್ದಾರೆ. ಈ ಹಿಂದೆ ತೆಪ್ಪಗಳ ಸಂಚಾರ ಸಂದರ್ಭದಲ್ಲಿ ಎಷ್ಟೋ ಬಾರಿ ಅವಘಡ ಸಂಭವಿಸಿದ ನಿದರ್ಶನಗಳಿವೆ.ಪ್ರವಾಸಿಗರಿಂದ ಅಧಿಕ ಹಣ ವಸೂಲಿ: ಅಂಜನಾದ್ರಿ ಬೆಟ್ಟ, ಪಂಪಾ ಸರೋವರ ಸೇರಿದಂತೆ ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸಲು ಆಗಮಿಸಿದ್ದ ಪ್ರವಾಸಿಗರಿಗೆ ತೆಪ್ಪದಲ್ಲಿ ಸಂಚರಿಸಿ ಪ್ರಕೃತಿ ಸೌಂದರ್ಯ ವೀಕ್ಷಿಸುವ ಆಮಿಷ ಒಡ್ಡಿ ಅವರಿಂದ ಅಧಿಕ ಹಣ ವಸೂಲಿ ಮಾಡುತ್ತಿದ್ದಾರೆಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ. ಒಬ್ಬರಿಂದ ₹500-800ವರೆಗೆ ವಸೂಲಿ ಮಾಡುತ್ತಿದ್ದಾರೆ.ಜೀವದ ಹಂಗಿಲ್ಲದೇ ಬರುತ್ತಿರುವ ಪ್ರವಾಸಿಗರು: ವಿದೇಶಿ ಪ್ರವಾಸಿಗರು ಸೇರಿದಂತೆ ವಿವಿಧ ರಾಜ್ಯಗಳಿಂದ ಬರುವ ಪ್ರವಾಸಿಗರನ್ನು ತೆಪ್ಪಗಳಲ್ಲಿ ಕರೆದೊಯ್ಯುತ್ತಿದ್ದಾರೆ. ಐತಿಹಾಸಿಕ ಸ್ಥಳಗಳಲ್ಲಿ ತೆಪ್ಪಗಳ ಏಜೆಂಟರುಗಳಿದ್ದು, ಇವರೆಲ್ಲ ಪ್ರವಾಸಿಗರನ್ನು ಕರೆ ತರುತ್ತಾರೆ. ಹೀಗೆ ಅಕ್ರಮವಾಗಿ ತೆಪ್ಪ ಸಂಚಾರ ನಡೆಯುತ್ತಿವೆ.ಪ್ರೀ ವೆಡ್ಡಿಂಗ್ ಚಿತ್ರೀಕರಣದ ತಾಣ: ಮದುವೆ ಪೂರ್ವ ಚಿತ್ರೀಕರಣಕ್ಕೆ ಜೋಡಿಗಳು ಆಗಮಿಸುತ್ತಿದ್ದು, ಇವರಿಂದ ₹5000ದಿಂದ ₹10 ಸಾವಿರವರೆಗೆ ನಿಗದಿ ಪಡಿಸಿದ್ದಾರೆ. ಜಲಾಶಯದಲ್ಲಿ ಪ್ರಮುಖ ಶೂಟಿಂಗ್ ಸ್ಥಳಗಳನ್ನು ತೋರಿಸುವ ತೆಪ್ಪದ ಮಾಲಿಕರು ಸಂಜೆ ಸಮಯದಲ್ಲಿಯೂ ದಂಧೆಯನ್ನು ಎಗ್ಗಿಲ್ಲದೇ ನಡೆಸುತ್ತಿದ್ದಾರೆ.ಜಿಲ್ಲಾಧಿಕಾರಿ ಆದೇಶಕ್ಕೆ ನಿರ್ಲಕ್ಷ್ಯ: ಅನಧಿಕೃತ ತೆಪ್ಪಗಳನ್ನು ಹಾಕಬಾರದೆಂದು ಜಿಲ್ಲಾಧಿಕಾರಿ ಕಳೆದ ನಾಲ್ಕು ವರ್ಷಗಳ ಹಿಂದೆ ಆದೇಶ ಹೊರಡಿಸಿದ್ದರು. ಆದರೆ ತೆಪ್ಪ ಮಾಲೀಕರು ಜಿಲ್ಲಾಧಿಕಾರಿ ಆದೇಶವನ್ನು ಗಾಳಿಗೆ ತೂರಿ ನಿರಂತರವಾಗಿ ತೆಪ್ಪಗಳನ್ನು ಹಾಕುತ್ತಿದ್ದಾರೆ. ಈ ಹಿಂದೆ ತೆಪ್ಪಗಳನ್ನು ಜಪ್ತಿ ಮಾಡಿದ್ದರೂ ರಾತ್ರೋ ರಾತ್ರಿ ತೆಪ್ಪಗಳನ್ನು ತೆಗೆದುಕೊಂಡು ದಂಧೆಯಲ್ಲಿ ನಿರತರಾಗುತ್ತಿದ್ದಾರೆ.ಪ್ರವಾಸಿಗರಿಗೆ ಒಂದು ಕಡೆ ಮೋಜು ಸಿಗುವುದೇನೋ ಸತ್ಯ. ಆದರೆ ಸುರಕ್ಷತಾ ವ್ಯವಸ್ಥೆ ಇಲ್ಲದೇ ತೆಪ್ಪ ಸಂಚಾರ ನಡೆಸುತ್ತಿರುವುದು ಅಪಾಯಕಾರಿಯಾಗಿದೆ. ಈ ಬಗ್ಗೆ ಜಿಲ್ಲಾಡಳಿತ ನಿಗಾವಹಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.ಸಾಣಾಪುರ ತುಂಗಾಭದ್ರಾ ಸಮಾನಂತರ ಜಲಾಶಯದಲ್ಲಿ ನಿರಂತರವಾಗಿ ಅನಧಿಕೃತ ತೆಪ್ಪ ಸಂಚಾರ ನಡೆಯುತ್ತಿದೆ. ತೆಪ್ಪಗಳನ್ನು ಹಾಕಲು ಪೈಪೋಟಿ ನಡೆದಿದೆ. ಈ ಹಿಂದೆ ಜಿಲ್ಲಾಧಿಕಾರಿ ನಿರ್ಬಂಧಿಸಿದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ ಸಾಣಾಪುರ ಪಿಡಿಒ ವತ್ಸಲಾ.