ಕನ್ನಡಪ್ರಭ ವಾರ್ತೆ ಕೋಲಾರಕೆಸಿ ವ್ಯಾಲಿ ಯೋಜನೆಯ ಅಧಿಕಾರಿಗಳು ದಾಳಿ ನಡೆಸಿ ಪಂಪು ಸೆಟ್ಟುಗಳನ್ನು ವಶಕ್ಕೆ ಪಡಿಸಿಕೊಂಡರೂ ಸಹ ರೈತರು ಮತ್ತೆ ಮತ್ತೆ ಅನಧಿಕೃತವಾಗಿ ನೀರನ್ನು ಕೃಷಿಗೆ ಬಳಕೆ ಮಾಡಿಕೊಳ್ಳುತ್ತಿದ್ಧಾರೆ. ಜಲ ಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಬುಧವಾರ ಮತ್ತೆ ದಾಳಿ ನಡೆಸಿ ಅನಧಿಕೃತ ಪಂಪುಸೆಟ್ಟುಗಳನ್ನು ವಶ ಪಡಿಸಿಕೊಂಡಿದ್ದಾರೆ.ಕೆಸಿ ವ್ಯಾಲಿ ನೀರು ಹರಿಯುವ ಕಾಲುವೆ ಸಮೀಪವಿರುವ ರೈತರು ತಮ್ಮ ಕೃಷಿ ಚಟುವಟಿಕೆ ಹಾಗೂ ಬೆಳೆಗಳಿಗೆ ನೀರು ಹಾಯಿಸಲು ಅನಧಿಕೃತವಾಗಿ ಅಳವಡಿಸಿಕೊಂಡಿದ್ದ ಎರಡು ಪಂಪು, ಎರಡು ಪ್ಯಾನಲ್ ಬೋರ್ಡ್ ಸೇರಿದಂತೆ ೧೨ ಪೈಪುಗಳನ್ನು ವಶಕ್ಕೆ ಪಡೆದ ಕೆಸಿ ವ್ಯಾಲಿ ಯೋಜನೆಯ ಟಾಸ್ಕ್ ಫೋರ್ಸ್ ತಂಡ ಅಧಿಕಾರಿಗಳು ರೈತರಿಗೆ ಎಚ್ಚರಿಕೆ ನೀಡಿದ್ದಾರೆ. ಅಂತರ್ಜಲ ವೃದ್ಧಿ ಉದ್ದೇಶ
ಜಲ ಸಂಪನ್ಮೂಲ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂ. ಕೃಷ್ಣ ಮಾತನಾಡಿ ಕೆಸಿ ವ್ಯಾಲಿ ಯೋಜನೆಯ ಮೂಲ ಉದ್ದೇಶ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ವೃದ್ದಿಗಾಗಿ ಅನುಷ್ಠಾನಗೊಳಿಸಲಾಗಿದೆ. ಕೆರೆಗಳಲ್ಲಿ ಶೇಖರಣೆ ಯಾಗಿರುವ ನೀರು ಹಾಗೂ ಕೆರೆಗಳಿಗೆ ಹರಿಯುತ್ತಿರುವ ಕೆಸಿ ವ್ಯಾಲಿ ನೀರನ್ನು ರೈತರು ಅನಧಿಕೃತವಾಗಿ ಪಂಪು ಮೋಟಾರ್ ಅಳವಡಿಸಿಕೊಂಡು ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಇದನ್ನು ತಡೆಗಟ್ಟು ಸಲುವಾಗಿ ಜಿಲ್ಲೆಯಲ್ಲಿ ಟಾಸ್ಕ್ ಪೋರ್ಸ್ ತಂಡವನ್ನು ರಚಿಸಲಾಗಿದೆ ಎಂದು ತಿಳಿಸಿದರು. ಕೆರೆಗಳಿಗೆ ನೀರು ತಲುಪುತ್ತಿಲ್ಲ
ಕೆಸಿ ವ್ಯಾಲಿ ಯೋಜನೆಗೆ ಒಳಪಡುವ ಕೆರೆಗಳ ಹಾಗೂ ಕಾಲುವೆಗಳ ಮೂಲಕ ಕೆಸಿ ವ್ಯಾಲಿ ನೀರು ಹರಿದು ಅಂತಿಮ ಕೆರೆ ತಲುಪದೇ ಯೋಜನೆಯು ಫಲಕಾರಿಯಾಗದೆ ವಿಫಲಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ರೈತರು ಯಾರು ಸಹ ಕೆಸಿ ವ್ಯಾಲಿ ನೀರನ್ನು ಅನಧಿಕೃತವಾಗಿ ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಬಾರದು. ಇದನ್ನು ತಡೆಗಟ್ಟಲೆಂದೇ ಟಾಸ್ಕ್ ಪೋರ್ಸ್ ರಚಿಸಿದ್ದು ಅದು ಸಕ್ರಿಯವಾಗಿದೆ. ಅದರಂತೆ ಟಾಸ್ಕ್ ಪೋರ್ಸ್ ತಂಡ ಕಾರ್ಯಾಚರಣೆ ನಡೆಸಿ ಅನಧಿಕೃತವಾಗಿ ಕೆಸಿ ವ್ಯಾಲಿ ನೀರನ್ನು ಎತ್ತುವಳಿ ಮಾಡಿಕೊಳ್ಳುತ್ತಿರುವ ರೈತರಿಗೆ ನೋಟಿಸ್ ನೀಡಲಾಗಿದೆ ಎಂದು ಅವರು ತಿಳಿಸಿದರು. ಕಾರ್ಯಾಚರಣೆಯಲ್ಲಿ ಸಹಾಯಕ ಇಂಜಿನಿಯರ್ಗಳಾದ ಶಶಿಕುಮಾರ್, ಕಾವ್ಯಲತ, ಕಂದಾಯ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು.