ಎ.ಜಿ. ಕಾರಟಗಿ
ಕಾರಟಗಿ:ಅಧಿಕಾರಿಗಳ ಬೇಜಾಬ್ದಾರಿಯಿಂದ ಪಟ್ಟಣ ಸೇರಿ ತಾಲೂಕಿನ ೨೭ ಗ್ರಾಮಗಳಿಗೆ ಕಳೆದ ಐದಾರು ತಿಂಗಳಿಂದ ನಿತ್ಯ ಅಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಕೆಲ ಗ್ರಾಮಗಳು ನಮಗೆ ನೀರು ಪೂರೈಕೆ ಮಾಡುವುದನ್ನೇ ನಿಲ್ಲಿಸಿ ಎಂದು ಪಂಚಾಯಿತಿಗಳಿಗೆ ಒತ್ತಾಯಿಸಿದ್ದಾರೆ. ಪಂಚಾಯಿತಿ ಸಹ ಜನರ ಒತ್ತಡಕ್ಕೆ ಮಣಿದು ಮೇಲಧಿಕಾರಿಗಳಿಗೆ ಪತ್ರ ಬರೆಯತ್ತಿದ್ದರೂ ಅಶುದ್ಧ ನೀರು ಪೂರೈಕೆ ಮಾತ್ರ ಸ್ಥಗಿತವಾಗಿಲ್ಲ.
ಪಟ್ಟಣ ಸೇರಿದಂತೆ ತಾಲೂಕಿನ ೨೭ ಹಳ್ಳಿಗೆ ತಾಲೂಕಿನ ನಾಗನಕಲ್ ಬಳಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಈ ಪೂರೈಕೆ ಮಾಡಲಾಗುತ್ತಿದೆ. ಆದರೆ, ಫಿಲ್ಟರ್ ಮಾಡದೇ ಹಾಗೇಯೆ ಅಶುದ್ಧ ನೀರನ್ನೇ ಪೂರೈಸುವ ಮೂಲಕ ಮೂಲ ಉದ್ದೇಶವೇ ಬುಡಮೇಲಾಗಿದ್ದು, ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ನಿರ್ಮಿಸಿದ ಯೋಜನೆ ಹಳ್ಳ ಹಿಡಿದಿದೆ.ನೀರು ಪೂರೈಕೆ ನಿಲ್ಲಿಸಿ:
ಚೆಳ್ಳೂರು ಗ್ರಾಪಂ ತಮಗೆ ನೀರು ಪೂರೈಸದಂತೆ ತಾಲೂಕು ಪಂಚಾಯಿತಿಗೆ ಪತ್ರ ಬರೆದಿದೆ. ತನ್ನ ಪಂಚಾಯಿತಿ ಸುತ್ತಲಿನ ಚೆಳ್ಳೂರು ಕ್ಯಾಂಪ್, ಹಗೇದಾಳ, ತೊಂಡಿಹಾಳ, ಸೋಮನಾಳ, ಮೈಲಾಪೂರ, ನಾಗನಕಲ್ ಮತ್ತು ಹುಳ್ಕಿಹಾಳ ಗ್ರಾಮಗಳ ಜನರು ಪಿಲ್ಟರ್ ಮಾಡದ ಅಶುದ್ಧ ನೀರನ್ನು ಹಲವು ದಿನಗಳಿಂದ ಅನಿವಾರ್ಯವಾಗಿ ಕುಡಿಯಬೇಕಾಗಿದೆ.ಪಂಚಾಯಿತಿಗೆ ನೀರು:
ಚೆಳ್ಳೂರು ಗ್ರಾಮಸ್ಥರು ನಲ್ಲಿಯಲ್ಲಿ ಬರುವ ನೀರನ್ನು ಬಾಟಲಿಯಲ್ಲಿ ಹಿಡಿದುಕೊಂಡು ಪಂಚಾಯಿತಿಗೆ ತಂದು ಪಿಡಿಒಗೆ ನೀಡಿದ್ದಾರೆ. ಈ ನೀರು ಹೇಗೆ ಕುಡಿಯಬೇಕೆಂದು ಪ್ರಶ್ನಿಸಿದ್ದಾರೆ. ಆಗ ಪಿಡಿಒ ತಾಪಂ ಇಒಗೆ ಪತ್ರ ಬರೆದು, ಜಾನುವಾರು ಕುಡಿಯಲು ಸಹ ಈ ನೀರು ಯೋಗ್ಯವಾಗಿಲ್ಲ. ಹೀಗಾಗಿ ನಾಗನಕಲ್ ಬಳಿಯ ಕುಡಿಯುವ ನೀರಿನ ಯೋಜನೆಯಿಂದ ನೀರು ಸರಬರಾಜು ಮಾಡುವುದನ್ನು ನಿಲ್ಲಿಸಿ ಕೆರೆಯ ನೀರನ್ನು ಶುದ್ಧೀಕರಿಸಿ ಸರಬರಾಜು ಮಾಡುವ ಕ್ರಮಕೈಗೊಳ್ಳಬೇಕೆಂದು ಪತ್ರ ಬರೆದಿದ್ದಾರೆ. ಈ ಪತ್ರ ಕನ್ನಡಪ್ರಭಕ್ಕೆ ಲಭ್ಯವಾಗಿದೆ.ಅಧಿಕಾರಿಗಳ ಭೇಟಿ:
ಸಚಿವ ಶಿವರಾಜ ತಂಗಡಗಿ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಸಿಇಒ ವರ್ಣಿತ ನೇಗಿ ಅವರು ಈ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೂ ಈ ವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಜನತೆ ಬೇಸರ ವ್ಯಕ್ತಪಡಿಸುತ್ತಾರೆ.ಸಚಿವರ ತರಾಟೆ
ಜೂ.17ರಂದು ಗಂಗಾವತಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ನಾಗನಕಲ್ ಬಹುಗ್ರಾಮ ಕುಡಿಯುವ ನೀರಿನ ಘಟಕದಿಂದ ನೀರು ಶುದ್ಧೀಕರಿಸದೆ ಹಾಗೇ ಪೂರೈಸುತ್ತಿರುವ ಫೋಟೋ ಪ್ರದರ್ಶಿಸಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಆರ್‌ಡಬ್ಲ್ಯೂಎಸ್ ಅಧಿಕಾರಿ ದೇವಪ್ಪ ಕಟ್ಟಿ ಸೇರಿದಂತೆ ಪಿಡಿಒಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ನನ್ನ ಕ್ಷೇತ್ರದಲ್ಲಿಯೇ ಇಂಥ ಪರಿಸ್ಥಿತಿ ಇದೆ ಎಂದರೆ ಏನರ್ಥ? ಕೂಡಲೇ ಸಮಸ್ಯೆ ಬಗೆಹರಿಸಿ ಎಂದು ಸೂಚಿಸಿದ್ದರು. ಆದರೆ, ಈ ವರೆಗೂ ಅಧಿಕಾರಿಗಳು ಯಾಔಉದೇ ಕ್ರಮಕೈಕೊಂಡಿಲ್ಲ.