ಸೀತೂರು ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಸಭೆ
ನರೇಗ ಯೋಜನೆಯಡಿ ಗ್ರಾಮ ಪಂಚಾಯಿತಿ ಮೂಲಕ ರೈತರು ಅತಿ ಹೆಚ್ಚು ಸೌಲಭ್ಯಗಳನ್ನು ಪಡೆಬಹುದು ಎಂದು ಗ್ರಾಮ ಸಭೆಯ ನೋಡಲ್ ಅಧಿಕಾರಿ ಹಾಗೂ ತಾಲೂಕು ಪಂಚಾಯಿತಿ ನರೇಗ ಯೋಜನೆಯ ಸಹಾಯಕ ನಿರ್ದೇಶಕ ಮನೀಶ್ ಸಲಹೆ ನೀಡಿದರು.
ಮಂಗಳವಾರ ವಿಎಸ್‌ಎಸ್ ಸಭಾಂಗಣದಲ್ಲಿ ನಡೆದ ಸೀತೂರು ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಮಾತನಾಡಿ ದರು. ರೈತರು ನರೇಗ ಯೋಜನೆಯಡಿ ವೈಯ್ಯಕ್ತಿಕ ಹಾಗೂ ಸಾಮೂಹಿಕ ಕಾಮಗಾರಿ ಮಾಡಬಹುದು. ದನದ ಕೊಟ್ಟಿಗೆ, ಕೃಷಿ ಹೊಂಡ, ಕೆರೆ, ಕಾಲುವೆ ಮುಂತಾದ ಕಾಮಗಾರಿ ಮಾಡಬಹುದು ಎಂದರು.ಸಭೆಯಲ್ಲಿ ಭಾಗವಹಿಸಿದ್ದ ಪ್ರಗತಿಪರ ಕೃಷಿಕ ಪಿ.ಕೆ.ಬಸವರಾಜ್ ಮಾತನಾಡಿ, ತಾಲೂಕಿನ 8 ಇಲಾಖೆಗಳ ಅಧಿಕಾರಿಗಳು ಗ್ರಾಮ ಸಭೆಗೆ ಆಗಮಿಸಿಲ್ಲ. ಕೆಲವು ಸರ್ಕಾರಿ ಇಲಾಖೆಗಳಲ್ಲಿ ಮಧ್ಯವರ್ತಿಗಳ ಹಾವಳಿ ಜಾಸ್ತಿಯಾಗಿದೆ. ರೈತರು ತಮ್ಮ ಕೆಲಸಗಳಿಗಾಗಿ ತಾಲೂಕು ಕಚೇರಿ ಹಾಗೂ ವಿವಿಧ ಇಲಾಖೆಗಳಿಗೆ ಅಲೆಯಬೇಕಾಗಿದೆ ಎಂದು ದೂರಿದರು.
ಬೆಳ್ಳೂರು ಸಮುದಾಯ ಆರೋಗ್ಯ ಅಧಿಕಾರಿ ಕೆ.ಎಚ್.ನಾಗವೇಣಿ ಮಾತನಾಡಿ, ಈ ವರ್ಷ ಮಳೆ ಪ್ರಮಾಣ ಜಾಸ್ತಿ ಗಿರುವುದರಿಂದ ನಿಂತ ನೀರಿನಲ್ಲಿ ಸೊಳ್ಳೆ ಉತ್ಪತ್ತಿಯಾಗಿ ಡೆಂಘೀ ಖಾಯಿಲೆ ಹರಡುವ ಸಾಧ್ಯತೆ ಇದೆ. ಗ್ರಾಮಸ್ಥರು ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಾಮ ಸಭೆಯಲ್ಲಿ ಕೃಷಿ ಇಲಾಖೆ, ಆರೋಗ್ಯ ಇಲಾಖೆ, ಕಂದಾಯ,ತೋಟಗಾರಿಕೆ,ಸಾಮಾಜಿಕ ಅರಣ್ಯ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದು ತಮ್ಮ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ವಿವರಿಸಿದರು.