ಹಾವೇರಿ: ಪದವಿ ಪೂರ್ವ ಹಂತ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಮಹತ್ವದ ಕಾಲಘಟ್ಟ. ಆ ವಿದ್ಯಾರ್ಥಿಗಳಿಗೆ ಸಂಸ್ಕೃತಿ ಪರಂಪರೆಯನ್ನು ಮನವರಿಕೆ ಮಾಡುವ ಮೂಲಕ ಜೀವನ ಮೌಲ್ಯಗಳನ್ನು ಕಲಿಸುವ ಅಗತ್ಯವಿದೆ ಎಂದು ನಿವೃತ್ತ ಉಪನಿರ್ದೇಶಕ ಆನಂದ ಮುದಕಮ್ಮನವರ ಹೇಳಿದರು.ಇಲ್ಲಿಯ ದಾನೇಶ್ವರಿ ನಗರದ ಪದವಿ ಪೂರ್ವ ನೌಕರರ ಭವನದಲ್ಲಿ ಪದವಿಪೂರ್ವ ಕಾಲೇಜುಗಳ ಕನ್ನಡ ವೇದಿಕೆಯ ಆಶ್ರಯದಲ್ಲಿ ಜರುಗಿದ ಕನ್ನಡ ಉಪನ್ಯಾಸಕರ ಶೈಕ್ಷಣಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ವಿಷಯವನ್ನು ಬೋಸುವ ಅಧ್ಯಾಪಕರುಗಳ ಮೇಲೆ ಗುರುತರವಾದ ಜವಾಬ್ದಾರಿ ಇದೆ. ಮಕ್ಕಳಿಗೆ ಜೀವನದ ಪಾಠ ಕಲಿಸುವ ಮೂಲಕ ಸಾಮಾಜಿಕ ಜವಾಬ್ದಾರಿಯ ಬದುಕನ್ನು ರೂಪಿಸಬೇಕು ಎಂದು ಅಭಿಪ್ರಾಯಪಟ್ಟರು.ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷ ಡಾ. ನಾಗರಾಜ ದ್ಯಾಮನಕೊಪ್ಪ, ಜಿಲ್ಲಾದ್ಯಂತ 170ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡ ವಿಷಯದಲ್ಲಿ ಪ್ರತಿಶತ ನೂರರಷ್ಟು ಅಂಕ ಪಡೆದಿರುವುದು 50ಕ್ಕೂ ಹೆಚ್ಚು ಕಾಲೇಜಿನ ಕನ್ನಡ ವಿಷಯದ ಫಲಿತಾಂಶ ಪ್ರತಿಶತ ನೂರರಷ್ಟಾಗಿರುವುದು ಹೆಮ್ಮೆಯ ಸಂಗತಿ. ಬದುಕಿನ ಭಾಷೆಯಾದ ಕನ್ನಡದ ಪ್ರೀತಿ ಹಾಗೂ ಅಭಿಮಾನವನ್ನು ಬೆಳೆಸುವ ನಿಟ್ಟಿನಲ್ಲಿ ಅಧ್ಯಾಪಕರು ಬೋಧನೆ ಮಾಡಬೇಕೆಂದು ಕಿವಿಮಾತು ಹೇಳಿದರು.ಧಾರವಾಡದ ಶಶಿಧರ ತೋಡಕರ ಕಾವ್ಯಾವಲೋಕನ ಗೋಷ್ಠಿಯಲ್ಲಿ ದ್ವಿತೀಯ ಪಿಯುಸಿ ಪಠ್ಯದಲ್ಲಿ ಅಳವಡಿಸಲಾದ ಕಾವ್ಯಗಳ ಗುಣಾತ್ಮಕ ಮೌಲ್ಯಗಳ ಬಗ್ಗೆ ಮಾತನಾಡಿದರು. ರಾಜ್ಯ ಸಂಪನ್ಮೂಲ ವ್ಯಕ್ತಿ ಶ್ರೀಧರ ಹೆಗಡೆ ಭದ್ರನ್ ಅವರು ಗದ್ಯಗಳಲ್ಲಿ ಅಳವಡಿಸಲಾದ ವ್ಯಕ್ತಿತ್ವ ವಿಕಸನದ ಅಂಶಗಳ ಕುರಿತು ಮನೋಜ್ಞವಾಗಿ ಪಾಠ ಮಾಡುವ ಬಗೆಯನ್ನು ತಿಳಿಸಿದರೆ, ಮೋಟೆಬೆನ್ನೂರಿನ ಉದಯಕುಮಾರ ಅಡೇಮನೆ ಅವರು ಪೂರ್ಣಚಂದ್ರ ತೇಜಸ್ವಿಯವರ ಕೃಷ್ಣೇಗೌಡನ ಆನೆಯಲ್ಲಿನ ಅಭಿವೃದ್ಧಿಗೆ ಪೂರಕವಾದ ಅಂಶಗಳನ್ನು ಎಳೆ ಎಳೆಯಾಗಿ ಚಿತ್ರಿಸಿದರು.ಕನ್ನಡ ವೇದಿಕೆಯ ಅಧ್ಯಕ್ಷ ಪ್ರಾಚಾರ್ಯ ಶಿವನಗೌಡ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನುದಾನಿತ ನೌಕರರ ಸಂಘದ ಜಿಲ್ಲಾಧ್ಯಕ್ಷ ಪರಶುರಾಮ ಗಚ್ಚಿನಮನಿ, ಕನ್ನಡ ವೇದಿಕೆಯ ಕೋಶಾಧ್ಯಕ್ಷ ಎಸ್.ವಿ. ಕುಲಕರ್ಣಿ ಮುಂತಾದವರು ಇದ್ದರು. ಇದೇ ಸಂದರ್ಭದಲ್ಲಿ ಕಳೆದ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರತಿಶತ ನೂರರಷ್ಟು ಅಂಕ ಪಡೆದ 170ಕ್ಕೂ ಅಧಿಕ ವಿದ್ಯಾರ್ಥಿಗಳನ್ನು, ಕನ್ನಡ ವಿಷಯದಲ್ಲಿ ಪ್ರತಿಶತ ನೂರರಷ್ಟು ಫಲಿತಾಂಶ ಪಡೆದ 50ಕ್ಕೂ ಹೆಚ್ಚು ಕಾಲೇಜಿನ ಕನ್ನಡ ಉಪನ್ಯಾಸಕರನ್ನು ಹಾಗೂ ಕಳೆದ ವರ್ಷ ನಿವೃತ್ತರಾದ ಕನ್ನಡ ವಿಷಯದ ಉಪನ್ಯಾಸಕರು ಮತ್ತು ಪ್ರಾಚಾರ್ಯರನ್ನು ಸನ್ಮಾನಿಸಲಾಯಿತು.ಪ್ರಾರಂಭದಲ್ಲಿ ಉಪನ್ಯಾಸಕಿ ಭಾರತಿ ಪವಾಡಿ ವಚನ ಪ್ರಾರ್ಥನೆ ಹಾಡಿದರು. ರವಿ ಜಡೇಗೊಂಡ ಸ್ವಾಗತಿಸಿದರು. ಎಸ್.ಎಸ್ ಪಾಣಿಗಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಶಶಿಕಲಾ ಕಮ್ಮಾರ ವಂದಿಸಿದರು.