ಹೊಸಪೇಟೆ: ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ನಿಷ್ಕ್ರಿಯತೆ ಜಾಸ್ತಿಯಾಗುತ್ತಿದೆ. ಸಂಶೋಧನೆಗೊಂಡ ಕೃತಕ ಬುದ್ಧಿಮತ್ತೆಯಿಂದ ಆ ನಿಷ್ಕ್ರಿಯತೆ ಇನ್ನಷ್ಟು ಹೆಚ್ಚುವ ಅಪಾಯ ಎದುರಾಗಿದೆ. ಇದನ್ನು ಸಮರ್ಥವಾಗಿ ಎದುರಿಸಬೇಕಾದರೆ ನಾವು ಸದಾ ಕ್ರಿಯಾಶೀಲರಾಗಿರಬೇಕಾದರೆ ಗೀತೆಯ ತತ್ವ ಅರಿತು ಅದರಂತೆ ನಡೆಯುವ ಅಗತ್ಯ ಇದೆ ಎಂದು ಸೋಂದಾ ಸ್ವರ್ಣವಲ್ಲೀ ಸಂಸ್ಥಾನ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ಭಗವದ್ಗೀತೆ ದೇಶದ ಅಸ್ಮಿತೆ. ಅದನ್ನು ಅರ್ಥ ಮಾಡಿಕೊಂಡರೆ ವ್ಯಕ್ತಿತ್ವ ವಿಕಸನ, ನೈತಿಕತೆಯ ಪುನರುತ್ಥಾನ, ಸಾಮಾಜಿಕ ಸಾಮರಸ್ಯ ಹಾಗೂ ರಾಷ್ಟ್ರೀಯ ಭಾವೈಕ್ಯ ಸಾಧ್ಯ. ಇಂದಿನ ಮಾನಸಿಕ ಒತ್ತಡ ಮತ್ತು ಆದರಿಂದ ಉಂಟಾಗುವ ಮಧುಮೇಹದಂತಹ ಕಾಯಿಲೆ ನಿವಾರಿಸಲು ಗೀತೆ ಬಹಳಷ್ಟು ಪ್ರಯೋಜನಕಾರಿ ಎಂಬುದು ಈಗಾಗಲೇ ಸಾಬೀತಾಗಿದೆ ಎಂದರು.
ಭಗವದ್ಗೀತೆ ಏಕೆ ಭಾರತದ ಅಸ್ಮಿತೆ ಎಂಬುದನ್ನು ವಿವರಿಸಿದ ಶ್ರೀಗಳು, ಕ್ರಿಸ್ತಪೂರ್ವ ಕಾಲದಲ್ಲೇ ಮೊಬೈಲ್, ಇಂಟರ್‌ನೆಟ್ ಇಲ್ಲದ ಸಮಯದಲ್ಲೇ ಗ್ರೀಕ್ ದೇಶದಲ್ಲಿ ಭಾರತದ ಭಗವದ್ಗೀತೆ ಬಗ್ಗೆ ಅಲ್ಲಿನ ಮೇಧಾವಿಗಳಿಗೆ ಆಗಲೇ ತಿಳಿದಿತ್ತು. ಇತ್ತೀಚಿನ ಯುವಕರು ಸೇರಿದಂತೆ ಮನೆಯವರೆಲ್ಲ ಗೀತೆ ಓದುವ, ಅದು ಸಾರುವ ಅರ್ಥ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.ವಿಜಯನಗರ ಜಿಲ್ಲೆಯಲ್ಲಿ ಗೀತಾ ಅಭಿಯಾನ ಆರಂಭಕ್ಕೆ ಮೊದಲೇ ಬಹಳಷ್ಟು ತಯಾರಿ ನಡೆಸಲಾಗಿದೆ. ಈಗಾಗಲೇ 34 ಉಪನ್ಯಾಸ ಕಾರ್ಯಕ್ರಮಗಳು ನಡೆದಿವೆ. 41 ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಗೀತಾಪಾರಾಯಣಕ್ಕೆ ತಯಾರು ಮಾಡಲಾಗಿದೆ. 17 ಕಡೆ ಶಿಕ್ಷಕರಿಗೆ ತರಬೇತಿ ನೀಡಲಾಗಿದ್ದು, 300 ಶಿಕ್ಷಕರು ಸಿದ್ಧರಾಗಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಈ ಅಭಿಯಾನ ಬಹಳ ಯಶಸ್ವಿಯಾಗಿ ನಡೆಯುವ ವಿಶ್ವಾಸ ಇದೆ. ಡಿ.19ರಂದು ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಬರುವ ಗೀತಾ ಅಭಿಮಾನಿಗಳ ಸಮ್ಮುಖದಲ್ಲಿ ಮಹಾಸಪರ್ಪಣೆ ನಡೆಯಲಿದೆ ಎಂದು ಹೇಳಿದರು.
ಹಂಸಾಂಬಾ ಶಾರದಾಶ್ರಮದ ಪ್ರಮೋದಾಮಯಿ ಮಾತಾಜಿ ಆಶೀರ್ವಚನ ನೀಡಿದರು. ಶಾಸಕ ಎಚ್.ಆರ್. ಗವಿಯಪ್ಪ, ನಗರಸಭೆ ಅಧ್ಯಕ್ಷ ಎನ್. ರೂಪೇಶ್ ಕುಮಾರ್, ಅಭಿಯಾನದ ಜಿಲ್ಲಾಧ್ಯಕ್ಷ ಪಿ.ಡಿ. ಗೌತಮ್ ಸಭೆಯಲ್ಲಿ ಮಾತನಾಡಿದರು.
ಸ್ವರ್ಣವಲ್ಲೀ ಶ್ರೀಗಳು, ವಿದ್ಯಾರ್ಥಿಗಳು, ಮಹಿಳೆಯರು, ಪುರುಷರು ಒಟ್ಟಾಗಿ ಗೀತೆಯ 2ನೇ ಅಧ್ಯಾಯ ಪಠಿಸಿದರು. ಏಕಕಂಠದಲ್ಲಿ ಸುಶ್ರಾವ್ಯವಾಗಿ ಮೂಡಿ ಬಂದ ಈ ಪಠಣ ವಿದ್ಯುತ್ ಸಂಚಾರವಾದ ಅನುಭವ ನೀಡಿತು.