ಕನ್ನಡಪ್ರಭ ವಾರ್ತೆ ಪಾವಗಡ
ಮಹರ್ಷಿ ವಾಲ್ಮೀಕಿ ರಚನೆಯ ರಾಮಾಯಣವನ್ನು ಪ್ರತಿಯೊಬ್ಬರು ಅರ್ಥೈಸಿಕೊಳ್ಳುವ ಮೂಲಕ ಅವರ ತತ್ವಾದರ್ಶಗಳನ್ನು ಪಾಲಿಸುವಂತೆ ತಹಸೀಲ್ದಾರ್ ವೈ.ರವಿ ಕರೆ ನೀಡಿದರು.ತಾಲೂಕು ಆಡಳಿತದಿಂದ ಮಂಗಳವಾರ ಪಟ್ಟಣದ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ವಾಲ್ಮೀಕಿ ಮಹರ್ಷಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ರಾಮಾಯಣದಲ್ಲಿ ಧರ್ಮ ಪಾಲನೆ ಹಾಗೂ ಇತರೆ ಅನೇಕ ಸಂದೇಶಗಳಿವೆ. ವಾಲ್ಮೀಕಿ ರಾಮಾಯಣದ ಸಾರಂಶ ತಿಳಿದುಕೊಳ್ಳುವ ಮೂಲಕ ಸತ್ಯ ನ್ಯಾಯ ಧರ್ಮ ಪಾಲನೆಯ ಉತ್ತಮ ಮಾರ್ಗದಲ್ಲಿ ನಾವೆಲ್ಲ ಮುನ್ನಡೆಯಬೇಕೆಂದರು.
ತಾಪಂ ಇಒ ಬಿ.ಕೆ.ಉತ್ತಮ್ ಮಾತನಾಡಿ, ಸಮಾಜದ ಒಳತಿಗಾಗಿ ವಾಲ್ಮೀಕಿ ಮಹರ್ಷಿ ರಾಮಾಯಣದ ಮೂಲಕ ಅನೇಕ ಸಂದೇಶ ಕಟ್ಟಿಕೊಟ್ಟಿದ್ದು ಅವರನ್ನು ಪ್ರತಿಯೊಬ್ಬರು ಪೂಜಿಸಲ್ಪಡುವ ಮಹಾನ್ ಚಿಂತಕರು. ನಾನು ವಿದ್ಯಾಭ್ಯಾಸ ಮಾಡುತ್ತಿದ್ದ ವೇಳೆ ವಾಲ್ಮೀಕಿ ಮಹರ್ಷಿ ಬಗ್ಗೆ ಬರೆದ ಪ್ರಬಂಧಕ್ಕೆ ಶಾಲಾ ಶಿಕ್ಷಕರಿಂದ 51ರು.ಗಳ ಬಹುಮಾನ ಹಾಗೂ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಿದ್ದರು. ಮಹರ್ಷಿಯ ತತ್ವ ಸಿದ್ದಾಂತಗಳು ಪ್ರತಿಯೊಬ್ಬರು ಪಾಲಿಸುವಂತೆ ಕರೆ ನೀಡಿದರು. ಸರ್ಕಾರಿ ಮಹಿಳಾ ಕಾಲೇಜಿನ ಉಪನ್ಯಾಸಕ ಮಾರಪ್ಪ ತಮ್ಮ ಪ್ರಧಾನ ಭಾಷಣದಲ್ಲಿ ಮಾತನಾಡಿ, ಸತ್ಯದ ಮಾರ್ಗದಲ್ಲಿ ಧರ್ಮ ಸಂದೇಶ ಸಾರಿದ ಕೀರ್ತಿ ಅವರಿಗೆ ಸಲ್ಲಬೇಕಿದೆ. ರಾಮಾಯಣದಲ್ಲಿ ಅನೇಕ ಅಂಶಗಳನ್ನು ವಿವರಿಸುವ ಮೂಲಕ ಮಾನವನ ಉತ್ತಮ ಬದುಕಿಗೆ ದಾರಿ ದೀಪವಾಗಿದ್ದಾರೆ. ಮಹರ್ಷಿಯ ವಾಲ್ಮೀಕಿ ರಾಮಾಯಣ, ವ್ಯಾಸರ ಮಹಾಭಾರತ ಹಾಗೂ ಅಂಬೇಡ್ಕರ್ ಸಂವಿಧಾನ ತಳಸಮುದಾಯದಿಂದ ಬಂದ ಮಹನ್ ವ್ಯಕ್ತಿಗಳು ಬರೆದ ಬಗ್ಗೆ ಹೆಮ್ಮೆ ಇದೆ ಎಂದರು.ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಲೊಕೇಶ್ ಪಾಳೇಗಾರ ಮಾತನಾಡಿದರು. ಈ ವೇಳೆ ಪುರಸಭೆ ಅಧ್ಯಕ್ಷ ಸುದೇಶ್‌ಬಾಬು,ಸಿಪಿಐ ಸುರೇಶ್, ಡಾ.ಓಂಕಾರನಾಯಕ, ಜ್ಞಾನೇಶಬಾಬು,ನರಸಿಂಹಕೃಷ್ಣ, ಪುರಸಭೆ ಸದಸ್ಯರಾದ ಬಾಲಸುಬ್ರಮಣ್ಯಂ, ಗುಟ್ಟಹಳ್ಳಿ ಅಂಜಿನಪ್ಪ, ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ, ಷಾಬಾಬು, ಕಿರಣ್ ಕುಮಾರ್, ಪ್ರಕಾಶ್ ನಾಯಕ, ದಲಿತ ಮುಖಂಡರಾದ ಸಿ.ಕೆ.ತಿಪ್ಪೇಸ್ವಾಮಿ, ಬಿ.ಪಿ.ಪೆದ್ದನ್ನ, ರಂಗಮ್ಮ, ಅಂಬಿಕಾ, ನಾಗರಾಜು ಇತರರಿದ್ದರು.