ಕನ್ನಡಪ್ರಭ ವಾರ್ತೆ ಸುರಪುರ
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ, ಉನ್ನತ ಶಿಕ್ಷಣ ಇಲಾಖೆ, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ 2026-27ನೇ ಸಾಲಿನ ತಾಲೂಕುಮಟ್ಟದ ಯುವ ಸಂಸತ್ತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ಬೋಧಿಸುವ ಮೂಲಕ ಗಣ್ಯರು ಹಾಗೂ ವಿದ್ಯಾರ್ಥಿಗಳು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಸ್ಮರಿಸಿದರು. ಕಾನೂನು ವಿದ್ಯಾರ್ಥಿ ಸಚಿನಕುಮಾರ ನಾಯಕ ಸಭಾಪತಿ ಪಾತ್ರ ವಹಿಸಿದ್ದರು. ತಾಲೂಕಿನ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಶಾಸಕರು ಹಾಗೂ ವಿರೋಧ ಪಕ್ಷದ ನಾಯಕರ ಪಾತ್ರಗಳ ನಿರ್ವಹಿಸುವುದರ ಮೂಲಕ ಅಣಕು ಸಂಸತ್ತಿನ ಕಲಾಪಗಳನ್ನು ನಡೆಸಿಕೊಟ್ಟರು.ನೈಜ ಸಂಸತ್ತಿನ ಮಾದರಿಯಲ್ಲಿ ನಡೆದ ಕಲಾಪದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮತ್ತು ಯುವ ಜನತೆಯ ಭವಿಷ್ಯ, ಜಲಸಂರಕ್ಷಣೆ, ಗುಣಮಟ್ಟದ ಶಿಕ್ಷಣ ಹಾಗೂ ಕಲಿಕಾ ಫಲಿತಾಂಶ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ, ಪ್ರಶ್ನೋತ್ತರ ಹಾಗೂ ಸಂವಾದ ನಡೆಸಲಾಯಿತು. ಈ ಮೂಲಕ ವಿದ್ಯಾರ್ಥಿಗಳು ಸಂಸದೀಯ ವ್ಯವಸ್ಥೆ, ಆಡಳಿತ ಕಾರ್ಯವೈಖರಿ ಕುರಿತು ಪ್ರಾಯೋಗಿಕ ಅರಿವು ಪಡೆದುಕೊಂಡರು.