ಕನ್ನಡಪ್ರಭ ವಾರ್ತೆ, ತುಮಕೂರು
ತುಮಕೂರು ವಿವಿಯ ಸ್ನಾತಕೋತ್ತರ ಡಿವಿಜಿ ಕನ್ನಡ ಅಧ್ಯಯನ ಕೇಂದ್ರ ಹಾಗೂ ಇಂಗ್ಲಿಷ್ ಸಾಹಿತ್ಯ ಅಧ್ಯಯನ ವಿಭಾಗವು ಜಂಟಿಯಾಗಿ ಆಯೋಜಿಸಿದ್ದ ‘ಕಲೆಯ ಮೂಲಕ ಲೋಕಗ್ರಹಿಕೆ’ ಎಂಬ ಪರಿಕಲ್ಪನೆಯಲ್ಲಿ ‘ಸಹಿತ’ ಸಾಹಿತ್ಯೋತ್ಸವವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಅರ್ಥವಾಗದೇ ಇರುವ ಅರ್ಥವಾಗಬೇಕಿರುವ ವಿಷಯವೇ ಲೋಕಗ್ರಹಿಕೆ. ಕಲೆಯ ಸಂಗತಿ ಚಲನೆಯಾಗಿದೆ. ಮಾತಿನಿಂದ, ಹಕ್ಕಿಯ ಸ್ವರದಿಂದ, ಅಥವಾ ಯಾವುದರಿಂದಲಾದರೂ ಒಂದು ಚಲನೆ ಉಂಟಾಗಲಿದೆ. ಅದುವೇ ಜೀವ ಕಲೆ-ಕಳೆ. ಅನುಭವದಿಂದ ಬಾಗುವ, ಹೊಸ ಅರ್ಥದ ಸಂಚಾರವೇ ಕಲೆಯಾಗಿದೆ ಎಂದರು.ನೆಮ್ಮದಿಯ ಕಾಲದಲ್ಲಿ ಉಂಟಾಗದ ಜಾಗೃತಿಯು ಕಷ್ಟ, ಸಂಕಟಗಳಲ್ಲಿ ಮೂಡುತ್ತದೆ. ಸಂಕಟದಲ್ಲಿ ಉಂಟಾದ ಜಾಗೃತಿಯೇ ಕಲೆಯ ನಿಯಮ. ಕಷ್ಟಕಾಲದಲ್ಲಿಯೇ ರಾಮಾಯಣ, ಮಹಾಭಾರತ ಗ್ರಂಥಗಳು ವರ್ಣಿತವಾದದ್ದು, ಚಿತ್ರಿತವಾದದ್ದು. ಕಲೆಯ ಅನಾವರಣದಿಂದ ಕಾಲ ಈ ರೀತಿ ಇರಬಾರದು ಎಂದು ತೋರಿಸುತ್ತದೆ. ಲೋಕಕ್ಕೆ ಕಟ್ಟೆ ಇರಬಾರದು ಎಂಬುದನ್ನು ಪ್ರಸ್ತುತ ಪಡಿಸುತ್ತದೆ ಕಲೆ ಎಂದು ತಿಳಿಸಿದರು.
ಪ್ರಾಚೀನಗ್ರಂಥ, ಉಪನಿಷತ್ತುಗಳಲ್ಲಿ ‘ಹೀಗಲ್ಲ, ಇದಲ್ಲ. ನಾನು ಬಯಸಿದ್ದು ಇದನ್ನಲ್ಲ’ ಎನ್ನುವ ಮಾತಿದೆ. ನಿರಾಕರಣೆಯ ಸಂದರ್ಭ ಮನಸಿನಲ್ಲಿ ಉಂಟಾದಾಗ ನಮಗೆ ಗೊತ್ತಿರುವುದನ್ನೇ ಕೇಳಲು ಬಯಸುತ್ತಿವೆಯೇ ಹೊರತು ಹೊಸದನ್ನು ಸ್ವೀಕರಿಸಲು ಬಯಸುವುದಿಲ್ಲ. ನಮಗೆ ತಿಳಿಯದ ಬೇರೆಯೇ ಒಂದು ವಿಷಯವಿದೆ ಎಂದು ತಿಳಿಯುವುದು ಕಲೆಯೊಂದಿಗೆ ಮಿಳಿತವಾದಾಗ ಮಾತ್ರ ಎಂದು ತಿಳಿಸಿದರು.
ಲೋಕವನ್ನು ಮೀರಿದ ಭಾವಸಂಗತಿ ಅಂತರ್ಯದಲ್ಲಿ ಮೀಟಿದರೆ ಕಲೆಯ ಸೃಷ್ಟಿಯಾಗಲಿದೆ. ಭಾಷೆ ಅಂತರಂಗದ ಪ್ರಪಂಚವನ್ನು ತೋರಬೇಕಾದರೆ ಕಲೆಯ ಮಾಯೆಯೊಳಗೆ ಒಳಗಾಗಬೇಕು. ಜಡಭಾಷೆಯನ್ನು ಬಳಸಿಕೊಂಡು ಭಾವನೆಯನ್ನು ಸೃಷ್ಟಿಸುವುದೇ ಕಲೆ. ವಚನಕಾರರು ಬಳಸಿದ್ದು ಲೋಕವನ್ನು ‘ಬಯಲು’ ಎಂದು. ಅಧ್ಯಾತ್ಮ ಲೋಕದ ಸಾಧಕರು ತೋರಿದ್ದು ‘ಲೋಕ ಇರಬೇಕಾದದ್ದು ಹೀಗಲ್ಲ’ ವೆಂದು. ಗ್ರಹಿಕೆಯ ಆಳವನ್ನು ವಿಭಿನ್ನವಾಗಿಸುವುದೇ ಕಲೆಯಾಗಿದೆ ಎಂದರು.
ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಮಾತನಾಡಿ, ವಿದ್ಯಾರ್ಥಿಗಳಿಗೆ ಸಾಹಿತ್ಯದ ಕೊರತೆಯಿರಬಾರದು. ಕಲೆ ಸಾಹಿತ್ಯಗಳಿಂದ ಮನಸ್ಸು ಅರಳುತ್ತದೆ. ಜ್ಞಾನಗ್ರಹಿಕೆ-ಲೋಕಗ್ರಹಿಕೆಗಾಗಿಯೇ ವಿಶ್ವವಿದ್ಯಾನಿಲಯಗಳು ಇರುವುದು ಎಂದರು.
ಸಾಹಿತ್ಯೋತ್ಸವದ ಸಂಘಟಕರಾದ ಪ್ರೊ.ಎಚ್.ಕೆ. ಶಿವಲಿಂಗಸ್ವಾಮಿ ಸ್ವಾಗತಿಸಿದರು. ಪ್ರೊ. ನಿತ್ಯಾನಂದ ಬಿ. ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಗೀತಾ ವಸಂತ ನಿರೂಪಿಸಿದರು.