ಅವಿಭಜಿತ ದ.ಕ. ಪರಿಷತ್‌ ಉಪ ಚುನಾವಣೆ: ಮತದಾನ ಅವಕಾಶ ವಂಚಿತ ಇಬ್ಬರು ಶಾಸಕರು!

KannadaprabhaNewsNetwork | Published : Oct 20, 2024 1:45 AM

ಸಾರಾಂಶ

ಅವಿಭಜಿತ ದ.ಕ. ಜಿಲ್ಲೆಗಳ ಸ್ಥಳೀಯಾಡಳಿತ ಸಂಸ್ಥೆಗಳ ಪೈಕಿ ಮಂಗಳೂರು ಪಾಲಿಕೆಯಲ್ಲಿ ಗರಿಷ್ಠ ಮತದಾರರಿದ್ದಾರೆ. ಒಟ್ಟು 60 ಕಾರ್ಪೋರೇಟರ್‌ಗಳು, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರು ಸೇರಿ ಒಟ್ಟು 65 ಮಂದಿ ಇಲ್ಲಿ ಮತ ಚಲಾಯಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಸ್ಥಳೀಯಾಡಳಿತ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಿಂದ ಲೋಕಸಭಾ ಸದಸ್ಯರ ವರೆಗೆ ಎಲ್ಲ ಚುನಾಯಿತ ಪ್ರತಿನಿಧಿಗಳಿಗೆ ಮತದಾನ ಮಾಡುವ ಅವಕಾಶವಿದೆ. ಅವಿಭಜಿತ ದ.ಕ.ಜಿಲ್ಲೆಯಲ್ಲಿ ಅ.21ರಂದು ವಿಧಾನ ಪರಿಷತ್‌ ಉಪ ಚುನಾವಣೆಯಲ್ಲಿ ಈ ಬಾರಿ ಇಬ್ಬರು ವಿಧಾನ ಪರಿಷತ್‌ ಸದಸ್ಯರು ಮತದಾನದಿಂದ ವಂಚಿತಗೊಳ್ಳುತ್ತಿದ್ದಾರೆ. ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮತ್ತು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರಿಗೆ ಮತದಾನದ ಅವಕಾಶವಿಲ್ಲ.

ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ತಮ್ಮ ಕ್ಷೇತ್ರ ವ್ಯಾಪ್ತಿಯ ಯಾವುದೇ ಒಂದು ಸ್ಥಳೀಯಾಡಳಿತ ಸಂಸ್ಥೆಯನ್ನು ಪ್ರತಿನಿಧಿಸಿದರೆ ಮಾತ್ರ ಪರಿಷತ್ ಚುನಾವಣೆಗೆ ಮತದಾನ ಅವಕಾಶ ಪಡೆಯುತ್ತಾರೆ. ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್ ಅವರು ಬೆಳ್ತಂಗಡಿ ಗ್ರಾಮಾಂತರ ಪ್ರದೇಶದ ಮತದಾರರಾಗಿರುವ ಕಾರಣ ಬೆಳ್ತಂಗಡಿ ಪಟ್ಟಣ ಪಂಚಾಯಿತಿಯನ್ನು ಪ್ರತಿನಿಧಿಸುತ್ತಿಲ್ಲ. ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದರೂ ಅಲ್ಲಿ ಚುನಾವಣೆ ನಡೆದಿಲ್ಲ. ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗೂ ಚುನಾವಣೆಯಾಗಿಲ್ಲ. ಹಾಗಾಗಿ ಶಾಸಕ ಗುರುರಾಜ್ ಗಂಟಿಹೊಳೆ ಸದ್ಯ ಸ್ಥಳೀಯಾಡಳಿತ ಸಂಸ್ಥೆಯನ್ನು ಪ್ರತಿನಿಧಿಸುತ್ತಿಲ್ಲ. ಹಾಗಾಗಿ ಇವರಿಬ್ಬರು ಹೆಸರು ಸ್ಥಳೀಯಾಡಳಿತ ಸಂಸ್ಥೆಗಳ ಮತದಾರರ ಪಟ್ಟಿಯಲ್ಲಿ ಇಲ್ಲ.ಪಾಲಿಕೆಯಲ್ಲಿ ಗರಿಷ್ಠ ಮತದಾರರು: ಅವಿಭಜಿತ ದ.ಕ. ಜಿಲ್ಲೆಗಳ ಸ್ಥಳೀಯಾಡಳಿತ ಸಂಸ್ಥೆಗಳ ಪೈಕಿ ಮಂಗಳೂರು ಪಾಲಿಕೆಯಲ್ಲಿ ಗರಿಷ್ಠ ಮತದಾರರಿದ್ದಾರೆ. ಒಟ್ಟು 60 ಕಾರ್ಪೋರೇಟರ್‌ಗಳು, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರು ಸೇರಿ ಒಟ್ಟು 65 ಮಂದಿ ಇಲ್ಲಿ ಮತ ಚಲಾಯಿಸಲಿದ್ದಾರೆ. ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೆಸರು ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಮತದಾರ ಪಟ್ಟಿಯಲ್ಲಿ ನಮೂದಿಸಲಾಗಿದೆ.ಮತಗಟ್ಟೆ ಆಯ್ಕೆ ಅವಕಾಶ:

ಇಬ್ಬರು ಸಂಸದರು, 12 ಶಾಸಕರು ಮತ್ತು ಇಬ್ಬರು ವಿಧಾನ ಪರಿಷತ್ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿದೆ. ಶಾಸಕರ ಹೆಸರು ಆಯಾ ತಾಲೂಕಿನ ನಗರ ಸ್ಥಳೀಯಾಡಳಿತ ಸಂಸ್ಥೆಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಸಂಸದರು ತಾವು ಮತ ಚಲಾಯಿಸಲು ಆಯ್ಕೆ ಮಾಡುವ ಮತಗಟ್ಟೆಯನ್ನು ತಿಳಿಸಲು ಅವಕಾಶವಿದೆ. ಶಾಸಕರ ಕ್ಷೇತ್ರದಲ್ಲೂ ಒಂದಕ್ಕಿಂತ ಹೆಚ್ಚು ನಗರ ಸ್ಥಳೀಯಾಡಳಿತ ಸಂಸ್ಥೆ ಇದ್ದರೆ ಮತಗಟ್ಟೆ ಆಯ್ಕೆಗೆ ಅವಕಾಶ ಕಲ್ಪಿಸಲಾಗಿದೆ.

ಒಟ್ಟು 33 ಸ್ಥಾನಗಳು ಖಾಲಿ

ದ.ಕ.ಜಿಲ್ಲೆಯಲ್ಲಿ 1 ಪುರಸಭಾ ಸ್ಥಾನ ಹಾಗೂ 28 ಗ್ರಾ.ಪಂ. ಸ್ಥಾನ ಹಾಗೂ ಉಡುಪಿ ಜಿಲ್ಲೆಯಲ್ಲಿ 4 ಗ್ರಾ.ಪಂ. ಸ್ಥಾನ ವಿವಿಧ ಕಾರಣಗಳಿಂದ ಖಾಲಿ ಇದೆ. ಜಿಪಂ, ತಾ.ಪಂ. ಚುನಾವಣೆ ನಡೆಯದ ಕಾರಣ ಸುಮಾರು 276 ಮತಗಳು ಕಡಿಮೆಯಾಗಿವೆ. ಕಡಬ, ಬಜ್ಪೆ, ಕಿನ್ನಿಗೋಳಿ ಮತ್ತು ಬೈಂದೂರು ಪಟ್ಟಣ ಪಂಚಾಯಿತಿ ಆಗಿ ಘೋಷಣೆಯಾಗಿದ್ದರೂ ಚುನಾವಣೆ ನಡೆದಿಲ್ಲ.

Share this article