ದಾಖಲೆಗಳಿಲ್ಲದ ಅಕ್ಕಿ ಮೂಟೆ, ನಗದು, ಮದ್ಯ ವಶ

KannadaprabhaNewsNetwork | Published : Mar 20, 2024 1:19 AM

ಸಾರಾಂಶ

ಜಿಲ್ಲೆಯ ಹಲವು ಕಡೆ ಅನುಮತಿ ಹಾಗೂ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ೨.೭೮.೫೦೦ ರೂ.ಗಳ ನಗದನ್ನು ತಪಾಸಣಾ ತಂಡಗಳು ವಶಕ್ಕೆ ಪಡೆದಿದ್ದು, ಈ ಸಂಬಂಧ ೧೨ ಆರೋಪಿಗಳನ್ನು ಬಂಧಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರ

ಕೇಂದ್ರ ಚುನಾವಣಾ ಆಯೋಗವು ನೀತಿ ಸಂಹಿತೆ ಘೋಷಿಸಿದ ತಕ್ಷಣದಿಂದ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ೨೪ ಗಂಟೆಯೊಳಗೆ ಒಟ್ಟು ೪೦ ತಂಡಗಳು ಕಾರ್ಯಚರಣೆಗೊಳಿಸಿ ಸರ್ಕಾರಿ ಜಾಗದಲ್ಲಿ ಆನಧಿಕೃತವಾಗಿ ಅಳವಡಿಸಲಾಗಿದ್ದ, ೨೩೯ ಗೋಡೆ ಬರಹಗಳು, ೩೯೩ ಪೋಸ್ಟರ್, ೪೨೪ ಬ್ಯಾನರ್ ಹಾಗೂ ಇತರೆ ೧೮೧ ಪ್ರಕರಣಗಳು ಸೇರಿದಂತೆ ಒಟ್ಟು ೧೨೩೭ ಪ್ರಕರಣಗಳನ್ನು ನಿಯಮಾನುಸಾರ ತೆರವುಗೊಳಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅಕ್ರಂಪಾಷ ತಿಳಿಸಿದ್ದಾರೆ.

ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ೪೮ ಗಂಟೆಯೊಳಗೆ ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟು ೪೪ ತಂಡಗಳು ಕಾರ್ಯಾಚರಣೆಗೊಳಿಸಿ ಗೋಡೆ ಬರಹಗಳು ೭೮, ಪೋಸ್ಟರ್-೨೨೧, ಬ್ಯಾನರ್ ೨೧೪, ಇತರೆ-೯೪ ಸೇರಿದಂತೆ ಒಟ್ಟು ೬೦೮ ಪ್ರಕರಣಗಳನ್ನು ನಿಯಮಾನುಸಾರವಾಗಿ ತೆರವುಗೊಳಿಸಿ, ಒಂದು ದೂರನ್ನು ದಾಖಲಿಸಲಾಗಿದೆ.

ಅಕ್ಕಿ ಮೂಟೆಗಳ ವಶ:

ಬಂಗಾರಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯ ದಿಂಬ ಚೆಕ್ ಪೋಸ್ಟ್‌ನಲ್ಲಿ ಮಾ.೧೮ರಂದು ರಾತ್ರಿ ೯ ಗಂಟೆ ಸಮಯದಲ್ಲಿ ಅನುಮತಿಯಿಲ್ಲದೆ ಹಾಗೂ ಸೂಕ್ತ ದಾಖಲೆಗಳಿಲ್ಲದೆ ಟೆಂಪೋ ವಾಹನದಲ್ಲಿ ಅಂದಾಜು ೬೦.೦೦೦ ರೂ.ಗಳ ಮೌಲ್ಯದ ೫೦ ಕೆಜಿ. ತೂಕದ ೪೦ ಅಕ್ಕಿ ಮೂಟೆಗಳು ಮತ್ತು ಮತ್ತೊಂದು ಈಚರ್ ವಾಹನದಲ್ಲಿ ಅಂದಾಜು ೩.೦೦.೦೦೦ ರೂ.ಗಳ ಮೌಲ್ಯದ ೫೦ ಕೆ.ಜಿ ತೂಕದ ೨೪೦ ಅಕ್ಕಿ ಮೂಟೆಗಳು ಸೇರಿದಂತೆ ಒಟ್ಟಾರೆ ೪.೨೦.೦೦೦ ರೂ. ಮೌಲ್ಯದ ೨೮೦ ಅಕ್ಕಿ ಮೂಟೆಗಳನ್ನು ವಶಕ್ಕೆ ಪಡೆದು ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಲಾಗಿದೆ.

ಕೋಲಾರ ತಾಲ್ಲೂಕು ವೇಮಗಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಾ.೧೮ರಂದು ಅನುಮತಿಯಿಲ್ಲದೆ ಹಾಗೂ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ೧.೯೦.೦೦೦ ರೂ.ಗಳ ನಗದನ್ನು ವಶಕ್ಕೆ ಪಡೆಯಲಾಗಿದೆ. ವಿವಿಧ ತಂಡಗಳು ಜಿಲ್ಲೆಯ ಹಲವು ಕಡೆ ಅನುಮತಿ ಹಾಗೂ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ೨.೭೮.೫೦೦ ರೂ.ಗಳ ನಗದನ್ನು ವಶಕ್ಕೆ ಪಡೆಯಲಾಗಿದ್ದು, ಈ ಸಂಬಂಧ ೧೨ ಆರೋಪಿಗಳನ್ನು ಬಂಧಿಸಲಾಗಿದೆ.

ಜಿಲ್ಲಾ ಅಬಕಾರಿ ಇಲಾಖೆಯು ಅಂದಾಜು ೪೮,೦೬,೭೬೯ ರೂ. ಮೌಲ್ಯದ ೧೭,೯೮೬ ಲೀಟರ್ ಅನಧಿಕೃತ ಮದ್ಯವನ್ನು ವಶಕ್ಕೆ ಪಡೆದು ನಾಶಪಡಿಸಲಾಗಿದ್ದು, ಈ ಸಂಬಂಧ ೧೮ ಪ್ರಕರಣಗಳನ್ನು ದಾಖಲಾಗಿದೆ.

Share this article