ಕನ್ನಡಪ್ರಭ ವಾರ್ತೆ ಮೈಸೂರು
ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಯಾಗದಿದ್ದರೆ ದೇಶದಲ್ಲಿ ದೊಡ್ಡ ಮಟ್ಟದ ನಿರುದ್ಯೋಗ ಸಮಸ್ಯೆ ತಾಂಡವವಾಡಲಿದೆ. ಇದಕ್ಕೆ ಮೊದಲ ಬಲಿಪಶುಗಳಾಗುವುದು ದಲಿತರು ಎಂದು ಚಿಂತಕ ದಿನೇಶ್ ಅಮೀನ್ ಮಟ್ಟು ಹೇಳಿದರು.ನಗರದ ಮಹಾರಾಜ ಕಾಲೇಜು ಶತವಾನೋತ್ಸವ ಭವನದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಪರಿ ನಿಬ್ಬಾಣ ದಿನದ ಅಂಗವಾಗಿ ಶನಿವಾರ ನಡೆದ ಬಹುತ್ವದ ಭಾರತವನ್ನು ಅಸ್ಥಿರಗೊಳಿಸುತ್ತಿರುವ ಧರ್ಮಂಧ ರಾಜಕಾರಣದ ವಿರುದ್ಧ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ವಲಯದಲ್ಲಿ ಶೇ.2 ರಷ್ಟು ಮಾತ್ರ ಉದ್ಯೋಗಗಳಿವೆ. ಈ ಪೈಕಿ ಶೇ. 1ರಷ್ಟು ಮೀಸಲಾತಿಗಾಗಿ ಪರಿಶಿಷ್ಟರು, ಹಿಂದುಳಿದ ವರ್ಗದವರು ಸೇರಿದಂತೆ ಎಲ್ಲರೂ ಪೈಪೋಟಿ ನಡೆಸಬೇಕಿದೆ. ಉಳಿದ ಶೇ.1 ರಷ್ಟು ಮೀಸಲಾತಿ ಸಾಮಾನ್ಯ ವರ್ಗಕ್ಕೆ ಸೀಮಿತವಾಗಿದೆ. ದೊಡ್ಡ ಉದ್ಯೋಗ ಅವಕಾಶಗಳಿರುವ ಖಾಸಗಿ ವಲಯದಲ್ಲಿ ಮೀಸಲಾತಿ ಇನ್ನೂ ಜಾರಿಗೆ ಬಂದಿಲ್ಲ ಎಂದರು.ಶೇ.4ರಷ್ಟಿರುವ ಮೇಲ್ವರ್ಗದವರಿಗೆ ಶೇ.10 ರಷ್ಟು ಮೀಸಲಾತಿ ಕೊಟ್ಟಾಗ ಯಾವುದೇ ದಲಿತ ಜನಪ್ರತಿನಿಧಿಗಳು ವಿರೋಧಿಸಲಿಲ್ಲ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಆಕ್ಷೇಪಿಸಲಿಲ್ಲ. ಹೀಗೆ ಅನೇಕ ವಿಷಯಗಳಲ್ಲೂ ಇದೆ ಆಗಿದೆ. ಆದ್ದರಿಂದ ಮೀಸಲು ಕ್ಷೇತ್ರಕ್ಕಿಂತ ಪ್ರತ್ಯೇಕ ಮತ ಕ್ಷೇತ್ರದಿಂದ ದಲಿತ ಹಿತರಕ್ಷಣೆ ಸಾಧ್ಯವಾಗಲಿದೆ ಎಂದರು.
ರಿಯಾಯ್ತಿ ದರದಲ್ಲಿ ಭೂಮಿ, ವಿದ್ಯುತ್, ನೀರು, ತೆರಿಗೆ ವಿನಾಯಿತಿ ಸೇರಿದಂತೆ ವಿವಿಧ ಸರ್ಕಾರಿ ಸೌಲಭ್ಯ ಪಡೆದುಕೊಂಡಿರುವ ಖಾಸಗಿ ಕಾರ್ಪೋರೇಟ್ ಕಂಪನಿಗಳು ದಲಿತರಿಗೆ ಉದ್ಯೋಗ ಕೊಡುತ್ತಿಲ್ಲ. ಅವುಗಳೆಲ್ಲ ಮೇಲ್ವರ್ಗದವರ ಪಾಲಾಗಿವೆ. ಇದು ಅವುಗಳ ಉದ್ಯೋಗಿಗಳ ಪಟ್ಟಿ ಗಮನಿಸಿದರೆ ಗೊತ್ತಾಗುತ್ತಿದೆ ಎಂದರು.ಮೀಸಲಾತಿ ಕ್ಷೇತ್ರದಿಂದ ಹಾರಿಸಿ ಬರುವ ಜನಪ್ರತಿನಿಧಿಗಳು ದಲಿತರ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿಲ್ಲ. ಏಕೆಂದರೆ ಅವರಿಗೆ ಮೇಲ್ವರ್ಗದ ಮತಗಳು ಮುಖ್ಯ. ಹೀಗಾಗಿಯೇ ದಲಿತ ಮತದಾರರು ಕೇವಲ ತಮ್ಮ ಸಮುದಾಯದ ಅಭ್ಯರ್ಥಿಗಳನ್ನು ಮಾತ್ರ ಆರಿಸಲು ಅವಕಾಶವಿರುವ ಪ್ರತ್ಯೇಕ ಮತ ಕ್ಷೇತ್ರಗಾಗಿ ಡಾ.ಬಿ.ಆರ್. ಅಂಬೇಡ್ಕರ್ ಒತ್ತಾಯಿಸಿದ್ದರು. ಆಗ ಗಾಂಧೀಜಿ ವಿರೋಧಿಸಿದರು. ಈ ಕಾರಣಕ್ಕೆ ಇದು ಜಾರಿಗೆ ಬರಲಿಲ್ಲ. ಈಗಿನ ಸಂದರ್ಭದಲ್ಲಿ ಈ ಪರಿಕಲ್ಪನೆ ಜಾರಿಗೆ ಸೂಕ್ತ ಕಾಲ ಎಂದರು.
ಪ್ರತ್ಯೇಕ ಮತ ಕ್ಷೇತ್ರ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಗೆ ದಲಿತ ಸಂಘಟನೆಗಳು, ದಲಿತರು ಹೋರಾಟ ರೂಪಿಸುವ ಮೂಲಕ ತಮ್ಮ ಹಿತಾಸಕ್ತಿ ಕಾಪಾಡಬೇಕಿದೆ ಎಂದರು.ದಲಿತರಿಗೆ ಪ್ರತ್ಯೇಕ ಮತ ಕ್ಷೇತ್ರ ಸ್ಥಾಪನೆ ಮತ್ತು ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಜಾರಿಗೆ ದೊಡ್ಡಮಟ್ಟದ ಹೋರಾಟ ರೂಪಿಸುವ ತುರ್ತು ಅಗತ್ಯವಿದೆ. ಬಹುತ್ವದ ಭಾರತವನ್ನು ಮನುಸ್ಮತಿ ಆಧಾರಿತ ಧರ್ಮ ರಾಜಕಾರಣ ನುಂಗಿ ಹಾಕಿದೆ ಎಂದು ಬಾಬಾ ಸಾಹೇಬರಿಗೆ ಮೊದಲೆ ಗೊತ್ತಿತ್ತು. ಹೀಗಾಗಿಯೇ ಮನುಸ್ಮತಿ ಸುಟ್ಟು ಧರ್ಮ ರಾಜಕಾರಣಕ್ಕೆ ಪ್ರತಿರೋಧ ಆರಂಭಿಸಿದರು. ಆದರೆ, ನಾವು ಅದನ್ನು ಮುಂದುವರಿಸುವಲ್ಲಿ ವಿಫಲವಾಗಿದ್ದೇವೆ ಎಂದರು.
ಅಂದು ಸುಟ್ಟಾ ಮನುಸ್ಮತಿಯ ಬೂದಿಯ ಅಲೆ ಎದ್ದು ಬಂದು ನಮ್ಮ ಮುಂದೆ ನಿಂತು ಕೇಕೆ ಹಾಕಿ ನಗುತ್ತಿದೆ. ಸಂವಿಧಾನದ ಆಶಯವನ್ನು ಬಹಳಷ್ಟು ದಲಿತರೇ ಮೈಗೂಡಿಸಿಕೊಂಡಿಲ್ಲ. ನಾಟಕವಾಡುವ ಸ್ವಾಮೀಜಿಗಳು, ದೇವಮಾನವರ ಮೊರೆಹೋಗುತ್ತಿದ್ದಾರೆ. ದಲಿತರು ಈಗಲಾದರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಅಂಬೇಡ್ಕರ್ ದಾರಿ ಸಾಗುತ್ತಿದೆವೆಯೇ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಿದೆ ಎಂದರು.ಸಂವಿಧಾನವನ್ನು ಬದಲಾವಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಅದನ್ನು ಒಳಗೊಳಗೆ ಕೊರೆದು ಮೂಲ ಆಶಯ ದುರ್ಬಲಗೊಳಿಸುತ್ತಾರೆ. ಆದರ ನಂತರ ಸಂವಿಧಾನ ಇರುತ್ತದೆಯೋ ಇಲ್ಲವೋ ಗೊತ್ತಿಲ್ಲ. ಜನರ ರಕ್ಷಣಾ ಕವಚವಾಗಬೇಕಿದ್ದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳು ದುರ್ಬಲಗೊಂಡಿವೆ. ಮೀಸಲಾತಿಯನ್ನು ಅಸೂಹೆಯಿಂದ ಅಣಕಿಸಲಾಗುತ್ತಿದೆ. ಚುನಾವಣೆ ಆಯೋಗ ಒಂದು ಪಕ್ಷದ ಶಾಖೆಯಂತೆ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯಕೋಟೆ ಮಾತನಾಡಿ, ಕೋಮುವಾದ ವಿಜೃಂಭಿಸುತ್ತಿದೆ. ನೂರು ವರ್ಷ ಪೂರೈಸಿದ ಒಂದು ಸಂಘಟನೆ ದೇಶದಲ್ಲಿನ ಜಾತಿ ನಿರ್ಮೂಲನೆ ಹೋರಾಟ ನಡೆಸಲಿಲ್ಲ. ಮಹಿಳೆ, ರೈತರು, ಕಾರ್ಮಿಕರ ಹಕ್ಕುಗಳ ಪರವಾಗಿ ಹೋರಾಟ ಮಾಡಲಿಲ್ಲ. ಮಸೀದಿ ಹೊಡೆದು ದೇವಸ್ಥಾನ ಕಟ್ಟಬೇಕು ಎಂದು ಜಾತಿ-ಧರ್ಮಗಳ ಎತ್ತಿ ಕಟ್ಟಿ ಹೊಡೆದಾಟಕ್ಕೆ ಒತ್ತು ಕೊಡುತ್ತಿದ್ದು, ಈ ಹುನ್ನಾರವನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದರು.ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್‌ಕೆರಗೂಡು ಮಾತನಾಡಿ, ಭಗವದ್ಗೀತೆಯನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಮೊಮ್ಮಕ್ಕಳಿಗೆ ಬೋದಿಸಿಕೊಳ್ಳಲಿ. ಸಂವಿಧಾನ ಶ್ರೇಷ್ಠ ಗ್ರಂಥ ಎಂಬುದನ್ನು ಅವರು ಮರೆಯಬಾರದು ಎಂದರು.
ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಅನಿಲ್ ಚಿಕ್ಕಮಾದು ಮಾತನಾಡಿದರು. ಕರ್ನಾಟಕ ವಸತಿ ನಿಲಯಗಳ ಸಂಸ್ಥೆಗಳ ಸಂಘದ ಸಲಹೆಗಾರ ಡಾ.ಎಸ್. ತುಕಾರಾಂ, ಜಿಲ್ಲಾ ಸಂಚಾಲಕರಾದ ಶಂಭುಲಿಂಗಸ್ವಾಮಿ, ಶಿವಕುಮಾರ್ ಆಲ್ಗೂಡು, ಮೈಸೂರು ವಿವಿ ಸಂಶೋಧಕ ಸಂಘದ ಅಧ್ಯಕ್ಷ ವರಹಳ್ಳಿ ಆನಂದ, ಗೌರವಾಧ್ಯಕ್ಷ ಕಲ್ಲಳ್ಳಿ ಕುಮಾರ್, ದಸಂಸದ ನಿಂಗರಾಜು, ಸೋಮಣ್ಣ ಮೊದಲಾದವರು ಇದ್ದರು.ಹಿಂದು ಧರ್ಮ ಎಲ್ಲಿದೆ?ಹಿಂದೂ ಧರ್ಮ ಎಂಬುದು ಎಲ್ಲಿದೆ? ಹಿಂದೂ ಧರ್ಮ ಎಂದರೆ ಏನು? ಹಿಂದೂ ಧರ್ಮ ಎನ್ನುವುದೆ ಇಲ್ಲ. ಅದೊಂದು ಜಾತಿಗಳ ಒಕ್ಕೂಟ ಎಂದು ಬಾಬಾಸಾಹೇಬರು ಹೇಳಿದ್ದಾರೆ. ಹಿಂದೂ ಧರ್ಮ ಎನ್ನುವುದು ಶಬ್ದವಷ್ಟೆ. ವೇದಾ, ಪುರಾಣಗಳಲ್ಲಿ ಎಹಿಂದೂ ಧರ್ಮದ ಎಂದು ಉಲ್ಲೇಖವಿದ್ದರೆ ತೋರಿಸಲಿ ನಾನು ಅವರ ಕಾಲಿಗೆ ಬೀಳುತ್ತೇನೆ. 5ನೇ ತರಗತಿ ವಿದ್ಯಾರ್ಥಿಗಳ ವೈಜ್ಞಾನಿಕ ತಿಳಿವಳಿಕೆ ಇಲ್ಲದವ ಪ್ರಧಾನಿಯಾಗಿದ್ದಾರೆ ಎಂದು ಚಿಂತಕ ದಿನೇಶ್ ಅಮೀನ್ ಮಟ್ಟು ಲೇವಡಿಯಾಡಿದರು.