ಮುಗಿಯದ ಹೆದ್ದಾರಿ ಕಾಮಗಾರಿ, ಜನರಿಗೆ ಕಿರಿಕಿರಿ

KannadaprabhaNewsNetwork |  
Published : Oct 22, 2026, 02:30 AM IST
ರಸ್ತೆಗೆ ಕಡಿ ಹಾಕಿದ್ದು, ಧೂಳಿನಿಂದ ಸಾರ್ವಜನಿಕರು ತೊಂದರೆ ಅನುಭವಿಸುಂತಾಗಿದೆ. | Kannada Prabha

ಸಾರಾಂಶ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗುತ್ತಿಗೆದಾರರು ಎಲ್ಲೆಂದರಲ್ಲಿ ಅರ್ಧಂಬರ್ಧ ಕಾಮಗಾರಿ ಮಾಡಿ ಮಳೆಗಾಲ ಬಂತೆಂದು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ ಹೋಗಿದ್ದಾರೆ.

ಶಂಕರ ಜಾವೂರ ಶಿರಸಿ: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಶಿರಸಿ- ಹಾವೇರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಧೂಳಿನಿಂದ ಪ್ರತಿನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.ಶಿರಸಿ - ಹಾವೇರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಸಾಗರಮಾಲಾ ಯೋಜನೆಯಡಿ 2021ರ ಡಿ. 2ರಂದು ಚಾಲನೆ ನೀಡಲಾಗಿತ್ತು. ಆದರೆ ಅರಣ್ಯ ಇಲಾಖೆಯ ಭೂಮಿ ಹಸ್ತಾಂತರ ಹಾಗೂ ಇನ್ನಿತರ ತಾಂತ್ರಿಕ ಕಾರಣಗಳಿಂದಾಗಿ ಕಾಮಗಾರಿ 2022ರ ಮಾ. 8ರಂದು ಅಧಿಕೃತವಾಗಿ ಪ್ರಾರಂಭವಾಯಿತು. ಅಂದಿನಿಂದ ಇಂದಿನವರೆಗೂ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ.ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗುತ್ತಿಗೆದಾರರು ಎಲ್ಲೆಂದರಲ್ಲಿ ಅರ್ಧಂಬರ್ಧ ಕಾಮಗಾರಿ ಮಾಡಿ ಮಳೆಗಾಲ ಬಂತೆಂದು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ ಹೋಗಿದ್ದಾರೆ. ಮಳೆ ನಿಂತು ಒಂದೂವರೆ ತಿಂಗಳು ಕಳೆದರೂ ಪುನಃ ಕಾಮಗಾರಿ ಪ್ರಾರಂಭ ಮಾಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಪ್ರತಿನಿತ್ಯ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ಇದರಿಂದ ರಸ್ತೆಯ ಅಕ್ಕಪಕ್ಕದಲ್ಲಿರುವ ಮನೆಗಳು ಧೂಳಿನಿಂದ ಆವೃತವಾಗಿವೆ. ಧೂಳಿನಿಂದ ಅನೇಕ ಸಾಂಕ್ರಾಮಿಕ ರೋಗಗಳು ಎದುರಾಗುವ ಭೀತಿ ಒಂದು ಕಡೆಯಾದರೆ ಸಾರ್ವಜನಿಕರು ಮತ್ತು ವಾಹನ ಸವಾರರು ಜೀವಭಯದಲ್ಲಿಯೇ ವಾಹನ ಚಲಾಯಿಸುವ ಪರಿಸ್ಥಿತಿ ಎದುರಾಗಿದೆ.ರಾಷ್ಟ್ರೀಯ ಹೆದ್ದಾರಿ ಅಕ್ಕ ಪಕ್ಕದಲ್ಲಿರುವ ಮನೆಯ ನಿವಾಸಿಗಳು ಮತ್ತು ವ್ಯಾಪಾರಸ್ಥರು ತಮ್ಮ ಅಂಗಡಿಗೆ ಮತ್ತು ಮನೆಗಳಿಗೆ ಧೂಳು ಬರಬಾರದೆಂದು ಮುನ್ನೆಚ್ಚರಿಕೆ ಕ್ರಮವಾಗಿ ಪ್ಲಾಸ್ಟಿಕ್ ತಾಡಪತ್ರಿಯನ್ನು ಕಟ್ಟಿಕೊಂಡಿದ್ದಾರೆ.ರಾಷ್ಟ್ರೀಯ ಹೆದ್ದಾರಿಯ ರಸ್ತೆ ಹಾಳಾದ ಕಾರಣ ಗುಂಡಿ ಬಿದ್ದ ಸ್ಥಳಗಳಲ್ಲಿ ಕಡಿ ಹಾಕಿರುವುದರಿಂದ ಭಾರಿ ಪ್ರಮಾಣದ ಧೂಳು ಏಳುತ್ತಿದೆ. ಅಷ್ಟಾದರೂ ಸಂಬಂಧಿಸಿದ ಗುತ್ತಿಗೆದಾರರು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಧೂಳನ್ನು ನಿಯಂತ್ರಿಸಲು ಒಂದು ಹನಿ ನೀರನ್ನು ರಸ್ತೆಗೆ ಸಿಂಪಡಿಸುತ್ತಿಲ್ಲ. ಇದರಿಂದ ಸಾರ್ವಜನಿಕರು ರೋಸಿ ಹೋಗಿದ್ದಾರೆ.ಅನೇಕರಿಗೆ ಧೂಳಿನಿಂದ ಅಸ್ತಮಾ, ದಮ್ಮು, ಕೆಮ್ಮು, ಮೈ ಕೆರೆಕದಂಥ ಕಾಯಿಲೆಗಳಿಗೆ ಬಲಿಯಾಗುವ ಪರಿಸ್ಥಿತಿ ಎದುರಾಗಿದೆ. ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕರ ಪ್ರಾಣಕ್ಕೆ ಕುತ್ತು ತರುವುದು ಖಂಡಿತ. ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಹಾಗೂ ಗುತ್ತಿಗೆದಾರರು ಮಾತು ಸ್ಥಳೀಯ ಸಂಸದರು ಎಚ್ಚೆತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಪ್ರಾರಂಭಿಸಿ ಪೂರ್ಣಗೊಳಿಸಬೇಕು ಎಂದು ಸ್ಥಳೀಯ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬೃಹತ್ ಪ್ರತಿಭಟನೆ: ಶಿರಸಿ- ಹಾವೇರಿ ಹೆದ್ದಾರಿ ಕಾಮಗಾರಿ ನ. 11ರೊಳಗಾಗಿ ಪೂರ್ಣಗೊಳ್ಳದಿದ್ದರೆ ಇಲ್ಲಿನ ಇಸಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಸೇರಿಕೊಂಡು ಚಿಪಗಿ ರಸ್ತೆಯಲ್ಲಿರುವ ದಮನ್ ಬೈಲ್ ಸರ್ಕಾರಿ ಶಾಲೆ ಎದುರು ರಸ್ತೆ ತಡೆದು ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಜಿಲ್ಲಾ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ತಿಳಿಸಿದರು.

ಕಾಮಗಾರಿ ಆರಂಭವಾಗಿಲ್ಲ: ದಸರಾ ಹಬ್ಬ ಇರುವ ಕಾರಣ ಶಿರಸಿ- ಹಾವೇರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭವಾಗಿಲ್ಲ. ಈಗಾಗಲೇ ಆರ್.ಎನ್. ಶೆಟ್ಟಿ ಕಂಪನಿಯ ಗುತ್ತಿಗೆದಾರರು ಅಲ್ಲಲ್ಲಿ ಪ್ರಾಥಮಿಕ ಕಾಮಗಾರಿಯನ್ನು ಮಾಡುತ್ತಿದ್ದಾರೆ. ದಸರಾ ಮುಗಿದು ಒಂದೆರಡು ದಿನದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿವಕುಮಾರ್ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಹನ ನಿಲ್ದಾಣ ಮೇಲ್ಛಾವಣಿ ಶೀಘ್ರ ಲೋಕಾರ್ಪಣೆ: ಮಂತರ್ ಗೌಡ
ಸೋಮವಾರಪೇಟೆ: ದಸರಾ ಜನೋತ್ಸವ ಸಂಭ್ರಮ