ಸಿಟಿ ಟ್ಯಾಕ್ಸಿಗಳು ಪ್ರಯಾಣಿಕರಿಂದ ಮಾಡುತ್ತಿರುವ ಸುಲಿಗೆಯನ್ನು ತಪ್ಪಿಸಲು ಸಾರಿಗೆ ಇಲಾಖೆ ಕಳೆದ ಫೆಬ್ರವರಿಯಲ್ಲಿ ‘ಒನ್ ಸಿಟಿ ಒನ್ ರೇಟ್’ ಅಡಿಯಲ್ಲಿ ಎಲ್ಲ ರೀತಿಯ ಟ್ಯಾಕ್ಸಿಗಳು ಏಕರೂಪ ದರ ಪಡೆಯುವಂತೆ ಆದೇಶಿಸಿತ್ತು. ಆದರೆ, ಪ್ರಯಾಣಿಕರ ಸುಲಿಗೆ ಹಾಗೆಯೇ ಮುಂದುವರಿಯುವಂತಾಗಿದೆ.
ಗಿರೀಶ್ ಗರಗ
ಬೆಂಗಳೂರು : ಸಿಟಿ ಟ್ಯಾಕ್ಸಿಗಳು ಪ್ರಯಾಣಿಕರಿಂದ ಮಾಡುತ್ತಿರುವ ಸುಲಿಗೆಯನ್ನು ತಪ್ಪಿಸಲು ಸಾರಿಗೆ ಇಲಾಖೆ ಕಳೆದ ಫೆಬ್ರವರಿಯಲ್ಲಿ ‘ಒನ್ ಸಿಟಿ ಒನ್ ರೇಟ್’ (ಒಂದು ನಗರ ಒಂದು ದರ) ಅಡಿಯಲ್ಲಿ ಎಲ್ಲ ರೀತಿಯ ಟ್ಯಾಕ್ಸಿಗಳು ಏಕರೂಪ ದರ ಪಡೆಯುವಂತೆ ಆದೇಶಿಸಿತ್ತು. ಆದರೆ, ಈ ಆದೇಶವನ್ನು ಜಾರಿ ಮಾಡಲು ಸಾರಿಗೆ ಇಲಾಖೆ ಮುಂದಾಗದ ಕಾರಣ ಪ್ರಯಾಣಿಕರ ಸುಲಿಗೆ ಹಾಗೆಯೇ ಮುಂದುವರಿಯುವಂತಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ನಗರಗಳ ವ್ಯಾಪ್ತಿಯಲ್ಲಿ ಸಾರಿಗೆ ಸೇವೆ ನೀಡುವ ಆ್ಯಪ್ ಆಧಾರಿತ ಸಿಟಿ ಟ್ಯಾಕ್ಸಿಗಳು ಬೇಕಾಬಿಟ್ಟಿಯಾಗಿ ದರ ವಸೂಲಿಯನ್ನು ತಡೆಯುವ ಸಲುವಾಗಿ ಸಾರಿಗೆ ಇಲಾಖೆ ಕಳೆದ ಫೆ.3ರಂದು ಒನ್ ಸಿಟಿ ಒನ್ ರೇಟ್ ಅಡಿಯಲ್ಲಿ ದರ ನಿಗದಿ ಮಾಡಿ ಆದೇಶಿಸಿದೆ. ಈ ಆದೇಶದಂತೆ ನಗರ ವ್ಯಾಪ್ತಿಯಲ್ಲಿ ಮಾಮೂಲಿ ಸೇವೆ ನೀಡುವ ಟ್ಯಾಕ್ಸಿಗಳು, ಆ್ಯಪ್ ಆಧಾರದಲ್ಲಿ ಸೇವೆ ನೀಡುವ ಅಗ್ರಿಗೇಟರ್‌ಗಳು ಸೇರಿದಂತೆ ಎಲ್ಲರೂ ಪ್ರಯಾಣಿಕರಿಂದ ಒಂದೇ ರೀತಿಯ ದರ ವಸೂಲಿ ಮಾಡಬೇಕು ಎಂದು ತಿಳಿಸಲಾಗಿದೆ. ಆದರೆ, ಈ ಆದೇಶ ಮಾಡಿ 100 ದಿನಗಳಾದರೂ ಅದನ್ನು ಜಾರಿ ಮಾಡಲು ಸಾರಿಗೆ ಇಲಾಖೆ ಮುಂದಾಗಿಲ್ಲ. ಹೀಗಾಗಿ ಕೆಲ ಆ್ಯಪ್ ಆಧಾರಿತ ಅಗ್ರಿಗೇಟರ್‌ಗಳು ಸಮಯಕ್ಕೆ ತಕ್ಕಂತೆ ವಿಭಿನ್ನ ದರ ವಸೂಲಿ ಮಾಡುತ್ತಾ ಪ್ರಯಾಣಿಕರನ್ನು ಸುಲಿಗೆ ಮಾಡುವುದು ಮುಂದುವರಿದಿದೆ.
ಪ್ರಯಾಣಿಕರ ಒತ್ತಡ ಆಧರಿಸಿ ದರ ವಸೂಲಿ:
ಸದ್ಯ ನಗರದಲ್ಲಿ ಸೇವೆ ನೀಡುವ ಟ್ಯಾಕ್ಸಿಗಳಿಗೆ ಯಾವುದೇ ರೀತಿಯ ನಿಗದಿತ ದರವಿಲ್ಲ. ಬೆಂಗಳೂರಿನಲ್ಲಿ ವಿಮಾನ ನಿಲ್ದಾಣಕ್ಕೆ ಸೇವೆ ನೀಡುವ ಟ್ಯಾಕ್ಸಿಗಳನ್ನು ಹೊರತುಪಡಿಸಿ ಉಳಿದ ಆ್ಯಪ್ ಆಧಾರಿತ ಸೇವೆ ನೀಡುವ ಟ್ಯಾಕ್ಸಿಗಳು ತಮಗೆ ಇಷ್ಟ ಬಂದಂತೆ ಸೇವೆ ನೀಡುತ್ತವೆ. ಅದರಲ್ಲೂ ಪ್ರಯಾಣಿಕರ ಒತ್ತಡ ಹೆಚ್ಚಿರುವ ವೇಳೆ, ಮಳೆಗಾಲದ ಸಂದರ್ಭದಲ್ಲಿ ತಮ್ಮ ದರವನ್ನು ಏಕಾಏಕಿ ಹೆಚ್ಚಿಸಿಕೊಳ್ಳುತ್ತವೆ.
ಪ್ರಯಾಣಿಕರ ಒತ್ತಡ ಹೆಚ್ಚಿರುವ ಸಂದರ್ಭದಲ್ಲಿ ಪ್ರತಿ ಕಿಮೀಗೆ 40ರಿಂದ 50 ರು.ವರೆಗೆ ಪ್ರಯಾಣ ದರ ವಸೂಲಿ ಮಾಡಲಾಗುತ್ತಿದೆ. ಹೀಗೆ ವಸೂಲಿ ಮಾಡುವ ಹೆಚ್ಚಿನ ಹಣವನ್ನು ಟ್ಯಾಕ್ಸಿ ಚಾಲಕ ಅಥವಾ ಮಾಲೀಕರಿಗೂ ನೀಡುವುದಿಲ್ಲ. ಬದಲಿಗೆ ಅಗ್ರಿಗೇಟರ್‌ಗಳೇ ಅದನ್ನು ಇಟ್ಟುಕೊಳ್ಳುತ್ತವೆ. ಇದಕ್ಕೆ ಕಡಿವಾಣ ಹಾಕಲೆಂದೇ ಒನ್ ಸಿಟಿ, ಒನ್ ರೇಟ್ ಆದೇಶಿಸಲಾಗಿತ್ತು. ಆದರೆ, ಆ ಆದೇಶ ಕಾಗದಕ್ಕೆ ಮಾತ್ರ ಸೀಮಿತವಾಗಿದೆ.ಈ ತಿಂಗಳಾಂತ್ಯಕ್ಕೆ ಜಾರಿ?
ಒನ್ ಸಿಟಿ ಒನ್ ರೇಟ್ ಜಾರಿಯಾಗದ ಕುರಿತಂತೆ ಸಾರಿಗೆ ಇಲಾಖೆ ಅಧಿಕಾರಿಗಳನ್ನು ಕೇಳಿದರೆ, ಕೆಲ ಆ್ಯಪ್ ಆಧಾರಿತ ಸೇವೆ ನೀಡುತ್ತಿರುವ ಅಗ್ರಿಗೇಟರ್‌ಗಳಿಗೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯದಲ್ಲಿವೆ. ಹೀಗಾಗಿ ಒನ್ ಸಿಟಿ ಒನ್ ರೇಟ್ ಸಮರ್ಪಕ ಜಾರಿ ಸಾಧ್ಯವಾಗುತ್ತಿಲ್ಲ. ಆದರೂ, ಈ ತಿಂಗಳ ಅಂತ್ಯದೊಳಗೆ ಒನ್ ಸಿಟಿ ಒನ್ ರೇಟ್ ಸಮರ್ಪಕ ಜಾರಿಗೆ ಕ್ರಮ ವಹಿಸಲಾಗುವುದು. ಜತೆಗೆ ಒನ್ ಸಿಟಿ ಒನ್ ರೇಟ್ ಅಡಿಯಲ್ಲಿ ದರ ವಸೂಲಿ ಮಾಡದವರ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬುದನ್ನೂ ನಿರ್ಧರಿಸಲಾಗುವುದು ಎಂದು ಹೇಳುತ್ತಾರೆ.
------
ಸರ್ಕಾರ ನಿಗದಿಪಡಿಸಿದ ದರ
ವಾಹನ ಮಾದರಿನಿಗದಿತ ದರ (ಮೊದಲ 4 ಕಿಮೀ)ಪ್ರತಿ ಕಿಮೀಗೆ
10 ಲಕ್ಷ ರು. ಮೌಲ್ಯದ ವಾಹನ100 ರು.24 ರು.
10ರಿಂದ 15 ಲಕ್ಷ ರು. ಮೌಲ್ಯದ ವಾಹನ115 ರು.28 ರು.
15 ಲಕ್ಷ ರು.ಗಿಂತ ಹೆಚ್ಚಿನ ಮೌಲ್ಯದ ವಾಹನ130 ರು.32 ರು.
ನಗರ ಟ್ಯಾಕ್ಸಿಗಳು ಪ್ರಯಾಣಿಕರಿಂದ ಹೆಚ್ಚಿನ ದರ ವಸೂಲಿ ಮಾಡುವುದನ್ನು ತಡೆಯಲು ಸಾರಿಗೆ ಇಲಾಖೆ ಒನ್ ಸಿಟಿ ಒನ್ ರೇಟ್ ಆದೇಶಿಸಿದೆ. ಆದರೆ, ಆ ಆದೇಶ ಮಾಡಿ 100 ದಿನಗಳಾದರೂ ಅದನ್ನು ಜಾರಿಗೊಳಿಸಿಲ್ಲ. ಈ ಬಗ್ಗೆ ಸಾರಿಗೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಹೀಗಾಗಿ ಆ್ಯಪ್ ಆಧಾರಿತ ಸೇವೆ ನೀಡುವ ಅಗ್ರಿಗೇಟರ್‌ಗಳು ಪ್ರಯಾಣಿಕರಿಂದ ಬೇಕಾಬಿಟ್ಟಿಯಾಗಿ ದರ ವಸೂಲಿ ಮಾಡುತ್ತಿದ್ದಾರೆ. ಇದನ್ನು ತಡೆಯಲು ಶೀಘ್ರದಲ್ಲಿ ಒನ್ ಸಿಟಿ ಒನ್ ರೇಟ್ ಜಾರಿಗೊಳಿಸಬೇಕು.
ಜಯಣ್ಣ, ಭಾರತ್ ಸಾರಿಗೆ ಸಂಘ ಸಮೂಹದ ಅಧ್ಯಕ್ಷ
-----------------
10 ಲಕ್ಷಕ್ಕೂ ಹೆಚ್ಚಿನ ಟ್ಯಾಕ್ಸಿಗಳಿಗೆ ಅನ್ವಯ:ರಾಜ್ಯದಲ್ಲಿ ಮಾರ್ಚ್ ಅಂತ್ಯಕ್ಕೆ 46.49 ಲಕ್ಷ ಕಾರುಗಳಿವೆ. ಅವುಗಳಲ್ಲಿ ಶೇ.40ಕ್ಕಿಂತ ಹೆಚ್ಚಿನ ಕಾರುಗಳು ವಾಣಿಜ್ಯ ಸೇವೆಗೆ ಬಳಕೆಯಾಗುತ್ತಿವೆ. ಅಲ್ಲದೆ, ಆ ವಾಣಿಜ್ಯ ಸೇವೆ ನೀಡುವ ಕಾರುಗಳ ಪೈಕಿ ಬಹುತೇಕ ಬೆಂಗಳೂರು ಸೇರಿದಂತೆ ಇನ್ನಿತರ ನಗರಗಳಲ್ಲಿ ಸಿಟಿ ಟ್ಯಾಕ್ಸಿಯಾಗಿ ಸೇವೆ ನೀಡುತ್ತಿವೆ. ಸಾರಿಗೆ ಇಲಾಖೆ ಫೆಬ್ರವರಿಯಲ್ಲಿ ಮಾಡಿದ ಆದೇಶವು 10 ಲಕ್ಷಕ್ಕೂ ಹೆಚ್ಚಿನ ಸಿಟಿ ಟ್ಯಾಕ್ಸಿಗಳಿಗೆ ಅನ್ವಯವಾಗುವಂತಹದ್ದಾಗಿದೆ.