ಕನ್ನಡಪ್ರಭ ವಾರ್ತೆ ಮಂಡ್ಯ
ಮೈಷುಗರ್ ಕಾರ್ಖಾನೆಗೆ ಕೇಂದ್ರದಿಂದ ಆರ್ಥಿಕವಾಗಿ ಈವರೆಗೆ ನಯಾಪೈಸೆ ನೆರವು ಸಿಕ್ಕಿಲ್ಲ. ಎಥೆನಾಲ್ ಘಟಕ ಸ್ಥಾಪನೆಗೆ ಅನುಮೋದನೆಯನ್ನೂ ಕೊಟ್ಟಿಲ್ಲ. ಜಿಲ್ಲೆಗೆ ಯಾವುದೇ ಮಾದರಿಯ ಕೈಗಾರಿಕೆಗಳ ಸ್ಥಾಪನೆಗೆ ಒಲವನ್ನೂ ತೋರಿಲ್ಲ. ಕಳೆದ ಬಾರಿ ಕುಮಾರಸ್ವಾಮಿ ಅವರು ಸಂಸದರಾಗಿ ಆಯ್ಕೆಯಾಗಿ ಕ್ಯಾಬಿನೇಟ್ ದರ್ಜೆ ಸಚಿವ ಸ್ಥಾನದಲ್ಲಿದ್ದರೂ ಮಂಡ್ಯಕ್ಕೆ ಸಿಕ್ಕ ಕೊಡುಗೆ ಶೂನ್ಯವಾಗಿತ್ತು. ಇದು ಜಿಲ್ಲೆಯ ಜನರಲ್ಲಿ ತೀವ್ರ ನಿರಾಸೆ ಮೂಡಿಸಿತ್ತು. ಈ ಬಾರಿಯಾದರೂ ಕೇಂದ್ರದಿಂದ ಮಂಡ್ಯ ಜಿಲ್ಲೆಗೆ ಉದ್ಯೋಗಾಧಾರಿತ ಕೈಗಾರಿಕೆಗಳ ಸ್ಥಾಪನೆಗೆ ಎಚ್‌ಡಿಕೆ ಒಲವು ತೋರುವರೇ ಎಂಬ ನಿರೀಕ್ಷೆ ಹೊಂದಲಾಗಿದೆ.
ಎರಡು ದಶಕಗಳ ಹಿಂದಿನ ಹೆಜ್ಜಾಲ- ಚಾಮರಾಜನಗರ ರೈಲ್ವೆ ಯೋಜನೆಯನ್ನು ಬಜೆಟ್‌ಗೆ ಸೇರಿಸುವುದಾಗಿ ಕಳೆದ ವರ್ಷದ ಬಜೆಟ್ ಸಮಯದಲ್ಲೇ ಕುಮಾರಸ್ವಾಮಿ ಅವರಿಂದ ಭರವಸೆ ಸಿಕ್ಕಿತ್ತು. ಆನಂತರ ಆ ಯೋಜನೆ ಏನಾಯಿತೆಂಬುದೇ ಬಜೆಟ್ ನಲ್ಲಿ ಕಾಣಲಿಲ್ಲ. ಯೋಜನೆಗೆ ಹಣಕಾಸನ್ನೂ ಕಾಯ್ದಿರಿಸಲಿಲ್ಲ. ಹೀಗಾಗಿ ಜಿಲ್ಲೆಗೆ ಹೊಸ ರೈಲು ಮಾರ್ಗದ ಕನಸು ಕನಸಾಗಿಯೇ ಉಳಿದಿದೆ. ಈ ರೈಲು ಮಾರ್ಗಕ್ಕೆ ಶನಿವಾರ (ಫೆ.1) ಮಂಡನೆಯಾಗುವ ಬಜೆಟ್‌ನಲ್ಲಿ ಹಸಿರು ನಿಶಾನೆ ಸಿಗಬಹುದೇ ಎಂಬ ಆಶಾಭಾವನೆ ಇದೆ.ಉದ್ಯೋಗ ಸೃಷ್ಟಿಗೆ ಪೂರಕವಾಗಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಜಿಲ್ಲೆಯಲ್ಲಿ ಸಾಕಷ್ಟು ಅವಕಾಶಗಳಿವೆ. ಕೆ.ಆರ್.ಪೇಟೆ, ನಾಗಮಂಗಲ, ಮಳವಳ್ಳಿ, ಮದ್ದೂರು ಸೇರಿದಂತೆ ಹಲವೆಡೆ ಜಾಗಗಳೂ ಇವೆ. ಚುನಾವಣೆಯಲ್ಲಿ ಗೆದ್ದ ಬಳಿಕ ಜಿಲ್ಲೆಯಲ್ಲಿ ಯಾವ ಯಾವ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶವಿದೆ ಎಂಬ ಕುರಿತಂತೆ ಅಧಿಕಾರಿಗಳಿಂದ ಕುಮಾರಸ್ವಾಮಿ ಅವರು ಮಾಹಿತಿಯನ್ನೂ ಪಡೆದುಕೊಂಡಿದ್ದಾರೆ. ಅದನ್ನು ಆಧರಿಸಿ ಉದ್ಯೋಗಾಧಾರಿತ ಕೈಗಾರಿಕೆಗಳ ಸ್ಥಾಪನೆಯಾದರೆ ಸಾವಿರಾರು ಯುವಕ- ಯುವತಿಯರು ನಗರ ಪ್ರದೇಶಗಳಿಗೆ ಉದ್ಯೋಗವನ್ನರಸಿ ವಲಸೆ ಹೋಗುವುದು ತಪ್ಪಲಿದೆ ಎಂಬುದು ಈ ಭಾಗದ ಜನರ ಅನಿಸಿಕೆಯಾಗಿದೆ.
ಕಾವೇರಿ ಜಲವಿವಾದಕ್ಕೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಮೇಕೆದಾಟು ಅಣೆಕಟ್ಟೆಗೆ ಸರ್ಕಾರದಿಂದ ಅನುಮತಿ ದೊರಕಿಸುವುದು ಕುಮಾರಸ್ವಾಮಿ ಅವರ ಜವಾಬ್ದಾರಿಯಾಗಿದೆ. ಕಳೆದ ಲೋಕಸಭಾ ಚುನಾವಣಾ ಸಮಯದಲ್ಲಿ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸುವ ಭರವಸೆ ನೀಡಿದ್ದರು. ಮೇಕೆದಾಟು ಅಣೆಕಟ್ಟೆಗೆ ಮೋದಿ ಅವರಿಂದ ಅನುಮತಿ ದೊರಕಿಸಲು ಬದ್ಧ ಎಂದಿದ್ದರು. ಚುನಾವಣಾ ಆವೇಶದಲ್ಲಿ ಆಡಿದ ಮಾತುಗಳಿಗೆ ಕುಮಾರಸ್ವಾಮಿ ಬದ್ಧರಾಗಿ ನಿಲ್ಲಬೇಕಿದೆ ಎನ್ನುವುದು ಹಲವರ ಅಭಿಪ್ರಾಯವಾಗಿದೆ.
ಸುಮಾರು 2.85 ಲಕ್ಷ ಮತಗಳ ಅಂತರದಿಂದ ಲೋಕಸಭೆಗೆ ಆಯ್ಕೆಯಾದ ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಆಸಕ್ತಿ, ಬದ್ಧತೆಯನ್ನು ಪ್ರದರ್ಶಿಸಬೇಕಿದೆ. ಅಭಿವೃದ್ಧಿ ದೃಷ್ಟಿಯಿಂದ ಮಂಡ್ಯ ಜಿಲ್ಲೆ ತೀವ್ರವಾಗಿ ಕಡೆಗಣಿಸಲ್ಪಟ್ಟಿದೆ. ನಟಿ ರಮ್ಯಾ ಅವರು ಕೇವಲ 6 ತಿಂಗಳ ಸಂಸದೆಯಾಗಿದ್ದರೂ ಕೇಂದ್ರೀಯ ವಿದ್ಯಾಲಯ, 45 ಕೋಟಿ ರು. ವೆಚ್ಚದ ಫೆರಿಫೆರಲ್ ಕ್ಯಾನ್ಸರ್ ಆಸ್ಪತ್ರೆ, ಮೈಷುಗರ್ ಕಾರ್ಖಾನೆ ಪುನಶ್ಚೇತನಕ್ಕೆ ಪ್ರಯತ್ನಿಸುವುದರೊಂದಿಗೆ ಎಲ್ಲರ ಗಮನಸೆಳೆದಿದ್ದರು. ಸಾಮಾನ್ಯ ಸಂಸದೆಯಾಗಿ ಅತಿ ಕಡಿಮೆ ಅವಧಿಯಲ್ಲಿ ಅಭಿವೃದ್ಧಿ ಬಗ್ಗೆ ತೋರಿದ ಇಚ್ಛಾಶಕ್ತಿ, ಬದ್ಧತೆಯನ್ನು ನಂತರ ಬಂದವರು ಪ್ರದರ್ಶಿಸಲಿಲ್ಲ.