ಕೇಂದ್ರ ಬಜೆಟ್: ಮಂಡ್ಯ ಜಿಲ್ಲೆಗೆ ಕೈಗಾರಿಕೆ ಮರೀಚಿಕೆ

KannadaprabhaNewsNetwork |  
Published : Jul 24, 2024, 12:17 AM IST
ಎಚ್‌ಡಿಕೆ | Kannada Prabha

ಸಾರಾಂಶ

ಮೈಷುಗರ್ ಕಾರ್ಖಾನೆಗೆ ಕೇಂದ್ರದಿಂದ ಆರ್ಥಿಕ ನೆರವೂ ಇಲ್ಲ, ಎಥೆನಾಲ್ ಘಟಕ ಸ್ಥಾಪನೆಯಂತಹ ಯೋಜನೆಗಳೂ ಸಿಕ್ಕಿಲ್ಲ. ಜಿಲ್ಲೆಗೆ ಯಾವುದೇ ಮಾದರಿಯ ಕೈಗಾರಿಕೆಗಳ ಸ್ಥಾಪನೆಯ ಚಕಾರವನ್ನೇ ಎತ್ತಿಲ್ಲ. ಹಾಗಾಗಿ ಕುಮಾರಸ್ವಾಮಿ ಅವರು ಸಂಸದರಾಗಿ, ಕ್ಯಾಬಿನೇಟ್ ದರ್ಜೆ ಸಚಿವ ಸ್ಥಾನದಲ್ಲಿದ್ದರೂ ಮಂಡ್ಯಕ್ಕೆ ಸಿಕ್ಕ ಕೊಡುಗೆ ಶೂನ್ಯವಾಗಿದೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಸಂಸದರೂ ಆಗಿರುವ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಂದ ಕೇಂದ್ರ ಬಜೆಟ್‌ನಲ್ಲಿ ಮಂಡ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಏನಾದರೂ ಮಹತ್ವದ ಕೊಡುಗೆ ಸಿಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ.

ಮೈಷುಗರ್ ಕಾರ್ಖಾನೆಗೆ ಕೇಂದ್ರದಿಂದ ಆರ್ಥಿಕ ನೆರವೂ ಇಲ್ಲ, ಎಥೆನಾಲ್ ಘಟಕ ಸ್ಥಾಪನೆಯಂತಹ ಯೋಜನೆಗಳೂ ಸಿಕ್ಕಿಲ್ಲ. ಜಿಲ್ಲೆಗೆ ಯಾವುದೇ ಮಾದರಿಯ ಕೈಗಾರಿಕೆಗಳ ಸ್ಥಾಪನೆಯ ಚಕಾರವನ್ನೇ ಎತ್ತಿಲ್ಲ. ಹಾಗಾಗಿ ಕುಮಾರಸ್ವಾಮಿ ಅವರು ಸಂಸದರಾಗಿ, ಕ್ಯಾಬಿನೇಟ್ ದರ್ಜೆ ಸಚಿವ ಸ್ಥಾನದಲ್ಲಿದ್ದರೂ ಮಂಡ್ಯಕ್ಕೆ ಸಿಕ್ಕ ಕೊಡುಗೆ ಶೂನ್ಯವಾಗಿದೆ.

ಎರಡು ದಶಕ ಹಿಂದಿನ ಹೆಜ್ಜಾಲ- ಚಾಮರಾಜನಗರ ರೈಲ್ವೆ ಯೋಜನೆಯನ್ನು ಬಜೆಟ್‌ಗೆ ಸೇರಿಸುವುದಾಗಿ ಭರವಸೆ ಸಿಕ್ಕಿತ್ತು. ಆ ಯೋಜನೆ ಏನಾಯಿತೆಂಬುದೇ ಬಜೆಜ್‌ನಲ್ಲಿ ಕಾಣುತ್ತಿಲ್ಲ. ಆ ಯೋಜನೆಗೆ ಹಣಕಾಸನ್ನೂ ಕಾಯ್ದಿರಿಸಿಲ್ಲ. ಉದ್ಯೋಗ ಸೃಷ್ಟಿಗೆ ಪೂರಕವಾಗಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೂ ಒಲವನ್ನು ತೋರಿಲ್ಲ. ಹಾಗಾದರೆ ಚುನಾವಣೆಯಲ್ಲಿ ಗೆದ್ದ ಬಳಿಕ ಜಿಲ್ಲೆಯಲ್ಲಿ ಯಾವ ಯಾವ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶವಿದೆ ಎಂಬ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದು ಏಕೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಪ್ರಶ್ನೆಯಾಗಿದೆ.

ಶ್ರೀರಂಗಪಟ್ಟಣ- ಅರಸೀಕೆರೆ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸುವುದು, ಪಾಂಡವಪುರ - ಚನ್ನರಾಯಪಟ್ಟಣ ರೈಲು ಮಾರ್ಗ ನಿರ್ಮಾಣ, ಕಬ್ಬು ತೋಟಗಾರಿಕೆ ಬೆಳೆಯಾಗಿದ್ದು, ಕಬ್ಬು ಬೆಳೆಗಾರರನ್ನು ನರೇಗಾ ವ್ಯಾಪ್ತಿಗೆ ತರುವುದು ಹಾಗೂ ಉದ್ದಿಮೆಗಳ ಸ್ಥಾಪನೆಗೆ ಜಿಲ್ಲೆಯ ಹಲವೆಡೆ ಜಮೀನುಗಳನ್ನು ಕಾಯ್ದಿರಿಸಿ ಸಾವಿರಾರು ಯುವಕ-ಯುವತಿಯರಿಗೆ ಉದ್ಯೋಗ ಸೃಷ್ಟಿಯಾಗಬಹುದೆಂಬ ನಿರೀಕ್ಷೆ ಬಜೆಟ್ ಮೇಲೆ ಇರಿಸಲಾಗಿತ್ತು. ಆದರೆ, ಜಿಲ್ಲೆಯ ಈ ಎಲ್ಲಾ ಜನರ ಆಕಾಂಕ್ಷೆಗಳಿಗೆ ಬಜೆಟ್‌ನಲ್ಲಿ ಕವಡೆ ಕಾಸಿನ ಕಿಮ್ಮತ್ತು ಸಿಗದಿರುವುದು ತೀವ್ರ ನಿರಾಸೆ ಉಂಟುಮಾಡಿದೆ.

ಎಚ್.ಡಿ.ಕುಮಾರಸ್ವಾಮಿ ಅವರು ಎನ್‌ಡಿಎ ಒಕ್ಕೂಟದ ಸದಸ್ಯರಾಗಿದ್ದು, ಉತ್ತಮವಾದ ಖಾತೆಯನ್ನು ಹೊಂದಿದ್ದರೂ ಮಂಡ್ಯ ಲೋಕಸಭಾ ಕ್ಷೇತ್ರದ ಮೈಷುಗರ್ ಕಾರ್ಖಾನೆಗೆ ಆರ್ಥಿಕ ನೆರವು ದೊರಕಿಸುವಲ್ಲಿ ಹಾಗೂ ಜಿಲ್ಲೆಯಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾಗುವಂತೆ ಏನಾದರೊಂದು ಕೊಡುಗೆ ದೊರಕಿಸಿಕೊಡಲಾಗದಷ್ಟು ದುರ್ಬಲರಾದರೇ ಎಂಬ ಅನುಮಾನ ಜಿಲ್ಲೆಯ ಜನರನ್ನು ಕಾಡಲಾರಂಭಿಸಿದೆ.

ಕಾವೇರಿ ಜಲವಿವಾದಕ್ಕೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಮೇಕೆದಾಟು ಅಣೆಕಟ್ಟೆಗೆ ಸರ್ಕಾರದಿಂದ ಅನುಮೋದನೆ ದೊರಕಿಸುವುದಕ್ಕೂ ಸಾಧ್ಯವಾಗಿಲ್ಲ. ಪ್ರಸಕ್ತ ವರ್ಷ ಕೆಆರ್‌ಎಸ್ ಜಲಾಶಯ ಭರ್ತಿಯ ಹಂತದಲ್ಲಿದ್ದು ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಈ ನೀರನ್ನು ಸಂಗ್ರಹಿಸಿಟ್ಟುಕೊಂಡು ಸಂಕಷ್ಟ ಕಾಲದಲ್ಲಿ ತಮಿಳುನಾಡಿಗೆ ಹರಿಸುವುದಕ್ಕೆ ಮೇಕೆದಾಟು ಯೋಜನೆ ಅನುಕೂಲಕರವಾಗಿದ್ದರೂ, ಅದರ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸದಿರುವುದು ಅಣೆಕಟ್ಟು ಯೋಜನೆ ಮರೀಚಿಕೆಯಾಗಿ ಉಳಿದಂತಾಗಿದೆ. ಕನಿಷ್ಠ ಪಕ್ಷ ವ್ಯರ್ಥವಾಗಿ ಹರಿದುಹೋಗುವ ನೀರನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ಕಾವೇರಿ ಕಣಿವೆ ಪ್ರದೇಶದಲ್ಲಿ ಏನಾದರೊಂದು ಕಾರ್ಯ ಯೋಜನೆಯನ್ನು ಕೇಂದ್ರ ಸರ್ಕಾರದಿಂದ ಮಂಜೂರು ಮಾಡಿಸುವಲ್ಲೂ ಕುಮಾರಸ್ವಾಮಿ ಅವರು ವಿಫಲರಾಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಸೋಮನಹಳ್ಳಿ, ಗೆಜ್ಜಲಗೆರೆ, ತೂಬಿನಕೆರೆ ಕೈಗಾರಿಕಾ ಪ್ರದೇಶಗಳ ಮಾದರಿಯಲ್ಲಿ ಜಿಲ್ಲೆಯ ವಿವಿಧೆಡೆ ಕೈಗಾರಿಕಾ ಪ್ರದೇಶಗಳ ಸ್ಥಾಪನೆಗೆ ಆಸಕ್ತಿ ತೋರಿಸಬಹುದಿತ್ತು. ಕೃಷಿಗೆ ಪೂರಕವಾಗುವಂತೆ ಉದ್ದಿಮೆಗಳ ಸ್ಥಾಪನೆಗೆ ಪ್ರೋತ್ಸಾಹ ನೀಡುವುದರೊಂದಿಗೆ ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸಿ ಮಂಡ್ಯ ಜಿಲ್ಲೆಯ ಬೆಳವಣಿಗೆಗೆ ಹೊಸ ರೂಪ ನೀಡಬಹುದಿತ್ತು. ಸುಮಾರು 2.85 ಲಕ್ಷ ಮತಗಳ ಅಂತರದಿಂದ ಲೋಕಕಸಭೆಗೆ ಆಯ್ಕೆಯಾದ ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಆಸಕ್ತಿ, ಬದ್ಧತೆ ಪ್ರದರ್ಶಿಸಬೇಕಿತ್ತು ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಈ ಮೊದಲು 5 ಲಕ್ಷ ರು.ವರೆಗೆ ಯಾವುದೇ ತೆರಿಗೆ ಇರಲಿಲ್ಲ. ಈ ಮಿತಿಯನ್ನು 7 ಅಥವಾ 10 ಲಕ್ಷ ರು.ವರೆಗೆ ಹೆಚ್ಚಿಸಬಹುದೆಂದು ನಿರೀಕ್ಷಿಸಲಾಗಿತ್ತು. ಜನರ ನಿರೀಕ್ಷೆ ಬಜೆಟ್‌ನಲ್ಲಿ ತಲೆಕೆಳಗಾಗಿದೆ. ತೆರಿಗೆ ಮಿತಿಯನ್ನು 3 ಲಕ್ಷಕ್ಕೆ ಸೀಮಿತಗೊಳಿಸಿದ್ದು, 3೩ ಲಕ್ಷ ರು.ನಿಂದ ಹೆಚ್ಚಿನ ಆದಾಯ ಹೊಂದಿದ್ದರೆ ಶೇ.5ರಷ್ಟು ತೆರಿಗೆ ಪಾವತಿಸಬೇಕಿದೆ. ಇದು ಸಣ್ಣ ಪುಟ್ಟ ವ್ಯಾಪಾರಿಗಳು, ವೇತನದಾರರು, ತೆರಿಗೆದಾರರ ಮೇಲೆ ಹೊರೆ ಹಾಕಿರುವ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.

5 ಲಕ್ಷ ರು.ವರೆಗೆ ಯಾವುದೇ ತೆರಿಗೆ ಮಿತಿ ಇಲ್ಲದ ಸಂದರ್ಭದಲ್ಲಿ ತೆರಿಗೆ ಪಾವತಿದಾರರು ಕೇಂದ್ರ ಸರ್ಕಾರ ನಿರೀಕ್ಷಿಸಿದಷ್ಟು ತೆರಿಗೆ ಪಾವತಿಸಿದ್ದರು. ಅವರಿಗೆ ವಿನಾಯ್ತಿ ನೀಡಿ ಹೊರೆಯನ್ನು ತಪ್ಪಿಸಬಹುದಿತ್ತು. ಆದರೆ, ತೆರಿಗೆ ಮಿತಿಯನ್ನು 3 ಲಕ್ಷ ರು.ಗೆ ಇಳಿಸಿರುವುದರಿಂದ ಮಧ್ಯಮ ವರ್ಗದವರಿಗೆ ಸಾಕಷ್ಟು ನಿರಾಸೆಯಾಗಿದೆ.ವಿಕಸಿತ ಭಾರತಕ್ಕೆ ಶಕ್ತಿ

ವಿಕಸಿತ ಭಾರತ ನಿರ್ಮಾಣಕ್ಕೆ ಶಕ್ತಿ ತುಂಬುವ, ಮಹಿಳೆಯರಿಗೆ ಅತಿಹೆಚ್ಚು ಅನುಕೂಲ ಮಾಡಿಕೊಡುವ ನಾರಿಶಕ್ತಿ ಬಜೆಟ್ ಇದಾಗಿದೆ. 9 ಆದ್ಯತಾ ವಲಯಗಳನ್ನು ಗುರುತಿಸಲಾಗಿದೆ. ಆ ಪೈಕಿ ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯಕ್ಕೆ 1.48 ಲಕ್ಷ ಕೋಟಿ ರು. ಅನುದಾನ ನೀಡಿ 4 ಕೋಟಿ ರು. ಉದ್ಯೋಗ ಸೃಷ್ಟಿಸುವ ಗುರಿ ಮಾನವ ಸಂಪನ್ಮೂಲ ಸದ್ಬಳಕೆಗೆ ಆದ್ಯತೆ ಕೊಡಲಾಗಿದೆ. ಉದ್ಯೋಗ ಸೃಷ್ಟಿಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಣ್ಣ, ಮಧ್ಯಮ ಗಾತ್ರದ ಕೈಗಾರಿಗಳಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಉಪಕ್ರಮ ಈ ಬಜೆಟ್‌ನಲ್ಲಿದೆ.

- ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ

ನಿರಾಶಾದಾಯಕ ಬಜೆಟ್

ತೆರಿಗೆ ಮಿತಿಯನ್ನು 3 ಲಕ್ಷ ರು.ಗೆ ಇಳಿಸಿರುವುದು ವೇತನದಾರರು ಹಾಗೂ ಮಧ್ಯಮವರ್ಗದವರಿಗೆ ಆರ್ಥಿಕ ಹೊರೆಯಾಗಿದೆ. ಈ ತೆರಿಗೆ ಮಿತಿಯನ್ನು 5 ಲಕ್ಷ ರು.ನಿಂದ ಕನಿಷ್ಠ 7 ಲಕ್ಷ ರು. ಗರಿಷ್ಠ 10 ಲಕ್ಷ ರು.ವರೆಗೆ ವಿನಾಯ್ತಿ ನೀಡಬಹುದೆಂದು ನಿರೀಕ್ಷಿಸಲಾಗಿತ್ತು. ಕಳೆದ ಸಾಲಿನಲ್ಲಿ ಕೇಂದ್ರದ ನಿರೀಕ್ಷೆಗೆ ಅನುಗುಣವಾಗಿ ತೆರಿಗೆದಾರರು ತೆರಿಗೆ ಪಾವತಿ ಮಾಡಿದ್ದರು. ಈಗ ತೆರಿಗೆ ಮಿತಿಯನ್ನು 3 ಲಕ್ಷ ರು.ಗೆ ಇಳಿಸಿರುವುದು ನಿರಾಸೆ ಉಂಟುಮಾಡಿದೆ.

- ಆರ್.ರಾಮಪ್ರಸಾದ್, ಲೆಕ್ಕ ಪರಿಶೋಧಕರು

ನಿರೀಕ್ಷೆ -ಫಲಿಸಿಲ್ಲ

ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿಯನ್ನು ಆದ್ಯತಾ ವಲಯವಾಗಿ ಪರಿಗಣಿಸಿಲ್ಲ. 50 ವರ್ಷದವರೆಗೆ ರಾಜ್ಯಗಳಿಗೆ ಬಡ್ಡಿರಹಿತ ಸಾಲ ನೀಡುವುದಾಗಿ ಹೇಳಿದ್ದು ಅದು ಹೇಗೆ ಎಂಬ ವಿವರಣೆ ಇಲ್ಲ. ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ ರು. ಹಣ ನಿಗದಿಪಡಿಸಿರುವುದು ಕಡಿಮೆಯಾಗಿದೆ. ರಾಜ್ಯಗಳಲ್ಲಿ ಮಳೆ ಬಿದ್ದು ವ್ಯರ್ಥವಾಗಿ ಹರಿದುಹೋಗುವ ನೀರಿಗೆ ಯೋಜನೆಗಳನ್ನು ರೂಪಿಸಿರುವಂತೆ ಕಂಡುಬರುತ್ತಿಲ್ಲ. ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಮಂಡ್ಯಕ್ಕೆ ಮಹತ್ವದ ಕೊಡುಗೆ ಸಿಗಬಹುದೆಂಬ ನಿರೀಕ್ಷೆ ಫಲಿಸಿಲ್ಲ.

-ಸುನಂದಾ ಜಯರಾಂ, ರೈತ ನಾಯಕಿ

ಆತ್ಮಹತ್ಯೆಗೆ ದೂಡುವ ಯತ್ನ

ರೈತರ ಸಾಲಮನ್ನಾ ಮಾಡುವ ವಿಚಾರ ಹಾಗೂ ಡಾ.ಸ್ವಾಮಿನಾಥನ್ ಆಯೋಗದ ವರದಿಯಂತೆ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿ ಪಡಿಸುವ ವಿಷಯವಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಿಲ್ಲ. ವಿದೇಶಿ ಕಾರ್ಪೊರೇಟ್ ಕಂಪನಿಗಳಿಗೆ ತೆರಿಗೆಯಲ್ಲಿ ರಿಯಾಯ್ತಿ ನೀಡಿದ್ದಾರೆ. ಆದರೆ, ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ನೀಡಿಲ್ಲ. ಉಚಿತವಾಗಿ ಉನ್ನತ ಶಿಕ್ಷಣ ನೀಡುವ ಬದಲು ಸಾಲ ಮಾಡಿ ಶಿಕ್ಷಣ ಪಡೆಯುವ ಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಸಾಲದ ಸುಳಿಯಲ್ಲಿ ಸಿಕ್ಕಿ ನರಳವುದನ್ನು ತಪ್ಪಿಸಲು ಉದ್ಯೋಗ ನೀಡಬೇಕು. ನಿರುದ್ಯೋಗಿಗಳು ಆತ್ಮಹತ್ಯೆಗೆ ದೂಡುವ ಯತ್ನ ನಿಲ್ಲಬೇಕು. ಕಾರ್ಮಿಕರಿಗೆ ಉದ್ಯೋಗದ ರಕ್ಷಣೆ ಮತ್ತು ದುಡಿಮೆಯ ಅವಧಿ ಹೆಚ್ಚಿಸಿದ್ದಾರೆ. ಇದೊಂದು ವರ್ಣಮಯ ಘೋಷಣೆ ಹೊರತು ಇದರಲ್ಲಿ ಬದುಕಿನ ಭದ್ರತೆಗೆ ಯಾವುದೇ ಯೋಜನೆಗಳಿಲ್ಲದ ಬಜೆಟ್.

- ಎನ್.ಎಲ್. ಭರತ್ ರಾಜ್, ಜಿಲ್ಲಾ ಸಂಚಾಲಕರು, ಕರ್ನಾಟಕ ಪ್ರಾಂತ ರೈತ ಸಂಘ

ಬೇಸರ ತರಿಸಿದ ಬಜೆಟ್

ಕೇಂದ್ರ ಸರ್ಕಾರದ ಬಜೆಟ್ ಬೇಸರ ತರಿಸಿದೆ. ಬರಗಾಲದಿಂದ ಸಂಕಷ್ಟದಲ್ಲಿರುವ ದೇಶದ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕಿತ್ತು. ಕೃಷಿಗೆ ಪ್ರತ್ಯೇಕ ಬಜೆಟ್ ಮಂಡನೆ, ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡುವಂತೆ ಒತ್ತಾಯಿಸುತ್ತಾ ಬಂದಿದ್ದರೂ ಈ ಯಾವ ವಿಷಯಗಳ ಬಗ್ಗೆ ಬಜೆಟ್‌ನಲ್ಲಿ ಘೋಷಣೆಯಾಗಿಲ್ಲ.

- ಕೀಳಘಟ್ಟ ನಂಜುಂಡಯ್ಯ, ರೈತ ಮುಖಂಡರು, ಮದ್ದೂರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾರವಾಡ ಅಭಿವೃದ್ಧಿಗೆ ನನ್ನ ಮೊದಲ ಆದ್ಯತೆ
ಜನರ ಆರ್ಥಿಕ ಸಬಲೀಕರಣಕ್ಕೆ ಗ್ಯಾರಂಟಿ ಯೋಜನೆ ಸಹಾಯಕ: ರವೀಂದ್ರ ಕಲಬುರ್ಗಿ