ರೈತರು ಒಗ್ಗಟ್ಟಾಗಿ ಹೋರಾಡಬೇಕೆಂಬ ಆಶಯ ಸಾಕಾರಗೊಳಿಸಲು ಮುನ್ನುಡಿ
ಕನ್ನಡಪ್ರಭ ವಾರ್ತೆ, ಕಡೂರುರಾಜ್ಯದಲ್ಲಿ ಭಿನ್ನ ಬಣಗಳಾಗಿದ್ದ ರೈತ ಸಂಘಟನೆಗಳು ರೈತಪರ ಕ್ರಾಂತಿಕಾರಕ ಹೋರಾಟಕ್ಕೆ ಒಗ್ಗೂಡುವ ಮಹತ್ಕಾರ್ಯಕ್ಕೆ ಚಾಲನೆ ದೊರೆತಿದೆ ಎಂದು ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಪಚ್ಚೆ ನಂಜುಂಡಸ್ವಾಮಿ ಹೇಳಿದರು.
ಕಡೂರು ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರೊ. ನಂಜುಂಡಸ್ವಾಮಿ ನಿಧನಾ ನಂತರ ರೈತ ಸಂಘಟನೆ ಗಳು ಹರಿದು ಹಂಚಿ ಹೋಗಿದ್ದವು. ರೈತರು ಒಗ್ಗಟ್ಟಾಗಿ ಹೋರಾಡಬೇಕೆಂಬ ನಂಜುಂಡಸ್ವಾಮಿಯವರ ಆಶಯ ಸಾಕಾರಗೊಳಿಸಲು ಈಗ ರಾಜ್ಯದ ಎಲ್ಲ ರೈತ ಸಂಘಟನೆಗಳನ್ನು ಒಗ್ಗೂಡಿಸಿ ಕರ್ನಾಟಕ ರೈತ ಸಂಘಗಳ ಏಕೀಕೃತ ಒಕ್ಕೂಟ ರಚನೆಯಾಗಿದೆ. ಇನ್ನು ಮುಂದೆ ಒಕ್ಕೂಟದ ಮೂಲಕ ರೈತಪರ ಹೋರಾಟಗಳಾಗಬೇಕೆಂಬ ತೀರ್ಮಾನ ಮಾಡಲಾಗಿದೆ. ಆ ಸಭೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ, ಮಹಿಮಾ ಪಟೇಲ್ ಮುಂತಾದವರು ಭಾಗವಹಿಸಿದ್ದರು. ಸಾಲ ಮುಕ್ತ ರೈತರ ರಾಜ್ಯ ನಮ್ಮದಾಗಬೇಕೆಂಬ ಆಶಯ ನಮ್ಮದು ಎಂದರು.ಈ ಬಾರಿ ಚಳಿಗಾಲದ ಅಧಿವೇಶದಲ್ಲಿ ರಾಜ್ಯವ್ಯಾಪಿ 1 ಲಕ್ಷ ರೈತರೊಡನೆ ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ. ರೈತರ ಸಾಲಮನ್ನಾ, ಕಬ್ಬಿಗೆ ಒಂದು ಟನ್ನಿಗೆ 5500 , ಬತ್ತಕ್ಕೆ, ಅಡಕೆ, ತೊಗರಿ ಗೆ ಬೆಂಬಲ ಬೆಲೆ, ತುಂಗಭದ್ರಾ ಜಲಾಶಯದ ಹೂಳೆತ್ತು ವುದು ಹೀಗೆ ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯುತ್ತೇವೆ. ಸರ್ಕಾರ ರೈತರನ್ನು ಗೌರವದಿಂದ ನಡೆಸಿಕೊಳ್ಳಬೇಕು.ಇಲ್ಲದಿದ್ದರೆ ಹೋರಾಟ ಉಗ್ರ ಸ್ವರೂಪ ಪಡೆಯುವುದು ಖಂಡಿತ ಎಂದರು.ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸಂಘದ ಘಟಕಗಳಿವೆ. ಕಡೂರು ಭಾಗದ ಎಮ್ಮೆದೊಡ್ಡಿ ಪ್ರದೇಶದಲ್ಲಿ ರೈತರಿಗೆ ಆತಂಕ ವಾಗುವಂತಹ ಸನ್ನಿವೇಶದ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು. ಅಗತ್ಯ ಬಿದ್ದರೆ ರೈತ ಸಂಘದ ಮೂಲಕ ಹೋರಾಟ ರೂಪಿಸಲಾಗುವುದು. ಈ ಕುರಿತು ಅಲ್ಲಿನ ಸಾಗುವಳಿದಾರರಿಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ. ಆ ಜಾಗದ ಮರುಸರ್ವೆ ಮಾಡಿಸಿ ಭೂಮಿ ಮಾಲೀಕ ಯಾರದೆಂದು ಖಾತ್ರಿ ಪಡಿಸಿಕೊಳ್ಳುವ ಅಗತ್ಯವಿದ್ದು, ಆ ಕಾರ್ಯಕ್ಕಾಗಿ ಸರ್ಕಾರವನ್ನು ಕೋರಲಾಗಿದೆ ಎಂದರು. ಸಂಘದ ಜಿಲ್ಲಾ ಕಾರ್ಯದರ್ಶಿ ಗೌಡನಕಟ್ಟೆಹಳ್ಳಿ ಚಿದಾನಂದಮೂರ್ತಿ ಮಾತನಾಡಿ, ಕಡೂರು ತಾಲೂಕಿನಲ್ಲಿ ಅನೇಕ ಸಮಸ್ಯೆ ಗಳಿವೆ. ಬಗರ್ ಹುಕುಂ, ಪೋಡಿ, ಅರಣ್ಯ ಇಲಾಖೆ ಸಮಸ್ಯೆಗಳಿವೆ. ಮುಖ್ಯವಾಗಿ ಬೀರೂರು ಗ್ರಾಮದ ಗಾಳೀಹಳ್ಳಿ ಕೆರೆಯಿಂದ ಪೈಪ್ ಲೈನ್ ಮೂಲಕ ದೋಗಿಹಳ್ಳಿ, ಹುಲ್ಲೆಹಳ್ಳಿ, ಕಾಮನಕೆರೆ, ಬಾಸೂರು, ಗೌಡನಕಟ್ಟೆಹಳ್ಳಿ, ಬಿಸಿಲೆರೆ, ಪಿ.ಕೋಡಿಹಳ್ಳಿ ಕೆರೆಗಳಿಗೆ ಹರಿಸುವ ಮೂಲಕ ಮದಗದ ಕೆರೆ ನೀರನ್ನು ವ್ಯರ್ಥವಾಗದಂತೆ ತಡೆಯುವ ಕಾರ್ಯವಾಗಬೇಕಿದೆ ಎಂದರು.ತಾಲೂಕಿನ ವಿವಿಧ ಸಮಸ್ಯೆಗಳ ಪರಿಹರಿಸಲು ಕೋರಿ ತಹಸೀಲ್ದಾರ್ ಅವರಿಗೆ ರೈತ ಸಂಘದ ಮೂಲಕ ಮನವಿ ಸಲ್ಲಿಸಲಾಯಿತು.
ಮುಖಂಡರಾದ ಶರಣಪ್ಪ ದೊಡ್ಡಮನಿ, ಸಂಘದ ಜಿಲ್ಲಾಧ್ಯಕ್ಷ ಬಾಸೂರು ರವಿ, ಸದಸ್ಯರಾದ ಹಲ್ಕೂರಪ್ಪ, ಕುಮಾರ್, ನವೀನ್, ಸುರೇಶ್,ಮಹೇಶ್, ಮಲ್ಲಮ್ಮ,ರಂಗಮ್ಮ, ಜಿ.ಕೆ. ಗಿರಿಧರ ಇದ್ದರು.ಎಮ್ಮೆದೊಡ್ಡಿ ಭಾಗದ ರೈತರ ಜಮೀನುಗಳನ್ನು ಉಳಿಸಿಕೊಳ್ಳುವ ಬಗ್ಗೆ, ಸಮಸ್ಯೆಗಳ ಪರಿಹಾರೋಪಾಯ ಮತ್ತು ಹೋರಾಟದ ಬಗ್ಗೆ ಎಮ್ಮೆದೊಡ್ಡಿ ಪ್ರದೇಶದ ಬೆಳ್ಳಿಗುತ್ತಿಯಲ್ಲಿ ಗುರುವಾರ ರೈತರ ಸದಸ್ಯತ್ವ ಅಭಿಯಾನ ಏರ್ಪಡಿಸಲಾಗಿತ್ತು. ರೈತರ ಜಮೀನು ಗಳಿಗೆ ನೋಟಿಸ್ ನೀಡಲಾರಂಭಿಸಿದ್ದು, ಈ ಕುರಿತು ರೈತ ಸಂಘದಿಂದ ಹೋರಾಟ ಮಾಡಲು ಸಭೆ ನಿರ್ಧರಿಸಿತು.21ಕೆಕೆಡಿಯು3.
ರೈತ ಸಂಘದ ರಾಜ್ಯಾಧ್ಯಕ್ಷ ಪಚ್ಚೆ ನಂಜುಂಡಸ್ವಾಮಿ ರೈತ ರೊಂದಿಗೆ.ಕಡೂರಿನಲ್ಲಿ ಮಾತನಾಡಿದರು.