ಕನ್ನಡಪ್ರಭ ವಾರ್ತೆ ನಾಗಮಂಗಲ
ಅನುಕಂಪ ಗಿಟ್ಟಿಸಿ ರಾಜಕಾರಣ ಮಾಡಲು ಬಂದಿಲ್ಲ. ಕಣ್ಣೀರು ಹಾಕುತ್ತಿರುವ ಅಮಾಯಕ ಹೆಣ್ಣು ಮಕ್ಕಳಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಲು ಬಂದಿದ್ದೇನೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.ಪಟ್ಟಣದ ಬದರಿಕೊಪ್ಪಲು ಗ್ರಾಮಕ್ಕೆ ಗುರುವಾರ ಸಂಜೆ ಭೇಟಿಕೊಟ್ಟು ಗಲಭೆಯಲ್ಲಿ ಭಾಗಿಯಾಗಿದ್ದಾರೆಂಬ ಆರೋಪದಡಿ ಬಂಧಿತರಾಗಿರುವ ಮತ್ತು ಬಂಧನದ ಭೀತಿಯಿಂದ ಊರು ತೊರೆದಿರುವ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಎರಡು ಸಮುದಾಯದ ಸುಮಾರು 20 ಕುಟುಂಬಗಳಿಗೆ ವೈಯುಕ್ತಿಕ ನೆರವು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೋಮುಗಲಭೆ ನಂತರ ಪೊಲೀಸರು ಕೆಲ ಮುಗ್ದರನ್ನು ಬಂಧಿಸಿದ್ದಾರೆ. ಇದರಿಂದ ಅಮಾಯಕ ಕುಟುಂಬಸ್ಥ ಹೆಣ್ಣು ಮಕ್ಕಳು ಜೈಲಿನ ಮುಂದೆ ಕಣ್ಣೀರು ಹಾಕಿರುವುದನ್ನು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಹಾಗಾಗಿ ಜನರಿಗೆ ಸಾಂತ್ವನ ಹೇಳಿ ಆರ್ಥಿಕ ಸಹಾಯ ಮಾಡಬೇಕೆಂದು ಬಂದಿದ್ದೇನೆ ಹೊರತು ಅನುಕಂಪ ಗಿಟ್ಟಿಸಿಕೊಳ್ಳಲು ನಾನು ಇಲ್ಲಿಗೆ ಬಂದಿಲ್ಲ ಎಂದರು.ನನಗೆ ರಾಜಕೀಯಕ್ಕಿಂತ ಜನರ ನೆಮ್ಮದಿ ಮುಖ್ಯ. ಮುಗ್ದ ಜನರನ್ನು ಪೊಲೀಸರು ಬಂಧಿಸುವುದು ಬೇಡ. ಈಗ ಬಂಧಿಸಿರೋರೇ ಸಾಕು. ಊರು ಬಿಟ್ಟವರಿಗೆ ತೊಂದರೆ ಕೊಡಬೇಡಿ. ಅಂದಿನ ಗಲಾಟೆಯಲ್ಲಿ ಯಾರ ವೈಫಲ್ಯತೆ ಎಂದು ನಾನು ಹೇಳುವುದಿಲ್ಲ. ಜಿಲ್ಲಾಡಳಿತ ಮತ್ತು ಗೃಹ ಸಚಿವರು ಎಚ್ಚರಿಕೆ ವಹಿಸಿದ್ದರೆ ಕೋಮು ಗಲಭೆ ನಡೆಯುತ್ತಿರಲಿಲ್ಲ ಎಂದರು.ಯಾರು ದ್ವೇಷ ರಾಜಕೀಯ ಮಾಡೋದು ಬೇಡ. ಈ ಘಟನೆಯನ್ನು ರಾಜಕೀಯವಾಗಿ ಯಾರೂ ಕೂಡ ದುರ್ಬಳಕೆ ಮಾಡಿಕೊಳ್ಳುವುದು ಬೇಡ. ಇದರ ಬಗ್ಗೆ ಕೆಲವರು ಮಾತಾಡುತ್ತಾರೆ. ಕಳೆದ 20-30 ವರ್ಷಗಳಿಂದ ನಾನು ಈ ಕೆಲಸ ಮಾಡ್ತಾ ಇದ್ದೀನಿ. ನೀವು ಬೇಕಿದ್ದರೆ ಸಹಾಯ ಮಾಡಿ. ಬಂಧನಕ್ಕೊಳಗಾಗಿ ಜೈಲಿಗೆ ಹೋಗಿರುವವರನ್ನು ಕಾನೂನು ವ್ಯಾಪ್ತಿಯಲ್ಲಿ ಜಾಮೀನು ಕೊಡಿಸಲು ಮುಂದಾಗುತ್ತೇನೆ ಎಂದರು.
ಕುಮ್ಮಕ್ಕು ಕೊಟ್ಟವರು ಯಾರು?:ಗಣೇಶ ಮೆರವಣಿಗೆ ಶಾಂತಿಯುತವಾಗಿ ನಡೆಯುತ್ತಿದ್ದ ವೇಳೆ ಕೋಮು ಗಲಭೆಗೆ ಕುಮ್ಮಕ್ಕು ಕೊಟ್ಟವರು ಯಾರು. ಜೆಡಿಎಸ್‌ನವರು ಬೆಂಕಿ ಹಚ್ಚಿ ಅಂದಿದ್ರಾ, ಪಟ್ಟಣದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರನ್ನು ಊಟಕ್ಕೆಂದು ಹೊರ ಕಳಿಸಿದವರು ಯಾರು. ಸ್ಥಳದಲ್ಲಿ ಪೊಲೀಸರು ಇದ್ದಿದ್ದರೆ ಈ ಘಟನೆ ಆಗ್ತಾ ಇರಲಿಲ್ಲ. ಈ ಪ್ರಕರಣದಲ್ಲಿ ರಾಜಕಾರಣ ಮಾಡಿದವರು ಯಾರು ಎಂದು ಪ್ರಶ್ನಿಸಿದರು.
ಗಲಭೆ ನಡೆದ ಬಳಿಕ ಪಟ್ಟಣಕ್ಕೆ ನಾನು ಭೇಟಿ ಕೊಟ್ಟಿದ್ದ ವೇಳೆ ಗೃಹ ಸಚಿವರ ವೈಫಲ್ಯದ ಬಗ್ಗೆ ಮಾತನಾಡಿದ್ದೇನೆ ಹೊರತು ಯಾರ ವಿರುದ್ಧವೂ ಆಪಾದನೆ ಮಾಡಿ ರಾಜಕಾರಣ ಮಾಡಿಲ್ಲ. ಗಲಭೆಯಲ್ಲಿ ಹಾನಿಯಾಗಿರುವ ಎಲ್ಲಾ ಸ್ಥಳ ಪರಿಶೀಲನೆ ಮಾಡಿ ಎರಡೂ ಸಮುದಾಯದ ಅಂಗಡಿ ಮಾಲೀಕರಿಗೆ ಸಾಂತ್ವನ ಹೇಳಿ ವೈಯುಕ್ತಿಕವಾಗಿ ಆರ್ಥಿಕ ಪರಿಹಾರ ಕೊಟ್ಟು ಶಾಂತಿ ನೆಮ್ಮದಿ ಕಾಪಾಡಿಕೊಳ್ಳಿ ಎಂದು ಹೇಳಿಹೋಗಿದ್ದೆ. ಆದರೆ ಬೆಂಕಿ ಹಚ್ಚುವ ಕೆಲಸ ಮಾಡಿಲ್ಲ ಎಂದರು.ಈ ವೇಳೆ ಕೆ.ಆರ್.ಪೇಟೆ ಎಚ್.ಟಿ.ಮಂಜು, ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ಮಾಜಿ ಶಾಸಕ ಸುರೇಶ್‌ಗೌಡ, ಮಾಜಿ ಸಚಿವ ಸಾ.ರಾ.ಮಹೇಶ್, ಮುಖಂಡರಾದ ಗೌರೀಶ್, ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ, ಕಂಚಿನಕೋಟೆ ಮೂರ್ತಿ, ನಾಗರಾಜ್, ನಾರಾಯಣ, ಸ್ಟುಡಿಯೋ ಬಾಬು, ಕೆಂಪೇಗೌಡ ಸೇರಿದಂತೆ ಹಲವರು ಇದ್ದರು.