ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಸೋಮನಹಳ್ಳಿ ಸಮೀಪದ ಕೆಸ್ತೂರು ಕ್ರಾಸ್ ಗೆ ಬೆಳಗ್ಗೆ 11.40ರ ಸುಮಾರಿಗೆ ಆಗಮಿಸಿದ ಸಚಿವ ಕುಮಾರಸ್ವಾಮಿ ಅವರನ್ನು ಬಿಜೆಪಿ ಮುಖಂಡ, ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಮಾಜಿ ನಿರ್ದೇಶಕ ಅಜ್ಜಹಳ್ಳಿ ಪಿ.ರಾಮೇಗೌಡ, ಯುವ ಮುಖಂಡರಾದ ಕೋಣಸಾಲೆ ಮಧು, ನಗರಕೆರೆ ಸಂದೀಪ, ಎಂ.ಐ.ಪ್ರವೀಣ್, ಗುರುದೇವರಹಳ್ಳಿ ಅರವಿಂದ, ಮುಖಂಡರಾದ ಕೆಂಗಲ್ ಗೌಡ, ತೊಪ್ಪನಹಳ್ಳಿ ಮಹೇಂದ್ರ, ತೈಲೂರು ನಾಗೇಶ, ಚನ್ನಸಂದ್ರ ಲಿಂಗೇಗೌಡ ಸೇರಿ ಅನೇಕ ಮುಖಂಡರು ಮಾಲಾರ್ಪಣೆ ಮಾಡಿ ಸಾಂಪ್ರದಾಯಕವಾಗಿ ಸ್ವಾಗತ ಕೋರಿದರು.
ನಂತರ ಮಾರ್ಗ ಮಧ್ಯ ಹೆಮ್ಮನಹಳ್ಳಿ, ತೊರೆಶೆಟ್ಟಿಹಳ್ಳಿ, ಕೆಸ್ತೂರು, ದುಡ್ಡನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ರಸ್ತೆ ಇಕ್ಕಲಗಳಲ್ಲಿ ನೆರೆದಿದ್ದ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಕುಮಾರಸ್ವಾಮಿ ಅವರಿಗೆ ಹೂ ಮಳೆಗರೆದು ಬೃಹತ್ ಗಾತ್ರದ ಸೇಬಿನ ಹಾರ ಹಾಕಿ ಅಭಿನಂದಿಸಿದರು.ತಾಲೂಕಿನ ಮಲ್ಲನಕುಪ್ಪೆ ಗೇಟ್ ಬಳಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಮಹಿಳೆಯರು ಕುಮಾರಸ್ವಾಮಿ ಅವರಿಗೆ ಪೂರ್ಣ ಕುಂಭದ ಸ್ವಾಗತ ನೀಡಿ ಆರತಿ ಬೆಳಗಿ ಸಾಂಪ್ರದಾಯಕ ಸ್ವಾಗತ ಕೋರಿದರು.