ಕನ್ನಡಪ್ರಭ ವಾರ್ತೆ ನಾಗಮಂಗಲ
ಒಕ್ಕಲಿಗರ ಶಕ್ತಿ ಕೇಂದ್ರ ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠಕ್ಕೆ ಶುಕ್ರವಾರ ಭೇಟಿ ಕೊಟ್ಟ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಶ್ರೀಮಠದಲ್ಲಿ ನಡೆದ ಅಮಾವಾಸ್ಯೆ ಪೂಜೆಯಲ್ಲಿ ಪಾಲ್ಗೊಂಡು ಶ್ರೀಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.ಶ್ರೀಕ್ಷೇತ್ರಕ್ಕೆ ಆಗಮಿಸಿದ ಎಚ್‌ಡಿಕೆ ಅವರನ್ನು ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಹಾಗೂ ಸಾಧು ಸಂತರು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡರು.
ಶ್ರೀಕಾಲಭೈರವೇಶ್ವರ ಸ್ವಾಮಿಗೆ ಪ್ರತಿ ಅಮಾವಾಸ್ಯೆಯಂದು ನಡೆಯುವ ವಿಶೇಷ ಅಭಿಷೇಕ ಮತ್ತು ಪೂಜಾ ಮಹೋತ್ಸವದಲ್ಲಿ ಪಾಲ್ಗೊಂಡ ಕುಮಾರಸ್ವಾಮಿ, ಗರ್ಭಗುಡಿಯಲ್ಲಿ ದೇವರ ದರ್ಶನಾಶೀರ್ವಾದ ಪಡೆದು ಪ್ರಾರ್ಥನೆ ಸಲ್ಲಿಸಿದರು.ನಂತರ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ ಮಹಾ ಸಮಾಧಿಗೂ ವಿಶೇಷ ಪೂಜೆ ಸಲ್ಲಿಸಿ ಶ್ರೀಗಳ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ನಮಸ್ಕರಿಸಿದರು. ಬಳಿಕ ಭೈರವನ ಸ್ವರೂಪವೆಂದೇ ನಂಬಲಾಗಿರುವ ಶ್ರೀಮಠದ ಕಾಲಭೈರವನ ವಾಹನ ಜೋಡಿ ಶ್ವಾನಗಳಿಗೆ ಬ್ರೆಡ್ ನೀಡುವ ಮೂಲಕ ನಮಿಸಿದರು.
ಶ್ರೀಕ್ಷೇತ್ರದಲ್ಲಿ ಪ್ರತಿ ಅಮಾವಾಸ್ಯೆಯಂದು ನಡೆಯುವ ವಿಶೇಷ ಪೂಜೆಯಲ್ಲಿ ಬಹಳ ನಂಬಿಕೆ ಇಟ್ಟಿರುವ ಎಚ್.ಡಿ. ಕುಮಾರಸ್ವಾಮಿ ಕಳೆದ 2018ರಲ್ಲಿ ಸತತ 9 ತಿಂಗಳ ಅಮವಾಸ್ಯೆ ಪೂಜೆಯಲ್ಲಿ ಭಾಗಿಯಾಗಿದ್ದರು. ನಂತರದಲ್ಲಿ ಮುಖ್ಯಮಂತ್ರಿ ಹುದ್ದೆ ಸಿಕ್ಕಾಗಲೂ ಕೂಡ ಶ್ರೀಕಾಲಭೈರವೇಶ್ವರನ ಆಶೀರ್ವಾದ ಎಂದಿದ್ದರು.ಚನ್ನಪಟ್ಟಣದ ಉಪ ಚುನಾವಣಾ ಕಣದಲ್ಲಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾಗಿರುವ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠಕ್ಕೆ ಎಚ್ಡಿಕೆ ಭೇಟಿ ನೀಡಿರುವುದು ಅತ್ಯಂತ ಮಹತ್ವ ಪಡೆದುಕೊಂಡಿದೆ. ಪೂಜೆ ಬಳಿಕ ಶ್ರೀಮಠದಲ್ಲಿಯೇ ಪ್ರಸಾದ ಸ್ವೀಕರಿಸಿದ ಕೇಂದ್ರ ಸಚಿವರು, ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳೊಂದಿಗೆ ಬಹಳ ಹೊತ್ತು ಸಮಾಲೋಚನೆ ನಡೆಸಿ ಶ್ರೀಗಳ ಆಶೀರ್ವಾದ ಪಡೆದು ತೆರಳಿದರು.
ಚುನಾವಣಾ ಸಮಯದಲ್ಲಿ ಎಚ್‌ಡಿಕೆ ಸೇರಿದಂತೆ ಅವರ ಕುಟುಂಬ ಸದಸ್ಯರು ಶ್ರೀಮಠಕ್ಕೆ ಬಂದು ಅದರಲ್ಲೂ ಅಮಾವಾಸ್ಯೆಯಂದೇ ಬಂದು ಶ್ರೀಕಾಲಭೈರವೇಶ್ವರನ ಹಾಗೂ ಶ್ರೀಗಳ ಆಶೀರ್ವಾದ ಪಡೆಯುವುದು ಒಂದು ವಿಶೇಷ. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಸೋಮೇಶ್ವರನಾಥ ಸ್ವಾಮೀಜಿ, ಚೈತನ್ಯನಾಥಸ್ವಾಮೀಜಿ ಸೇರಿದಂತೆ ಹಲವರು ಇದ್ದರು.