ಹುಬ್ಬಳ್ಳಿ:
ಉಣಕಲ್ಲಿನಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಕೇಂದ್ರದ ಯುವಜನ ಸೇವಾ ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವೆ ರಕ್ಷಾ ಖಡ್ಸೆ ಭೇಟಿ ನೀಡಿ ದರ್ಶನ ಪಡೆದರು.ಈ ವೇಳೆ ಮಾತನಾಡಿದ ಸಚಿವೆ ರಕ್ಷಾ ಖಡ್ಸೆ, ಇಂತಹ ಪುರಾತನ ದೇವಸ್ಥಾನಗಳು ನೋಡಲು ಸಿಗುವುದು ಅಪರೂಪ. ಇಂತಹ ಶಿವನ ದೇವಸ್ಥಾನ ಇತಿಹಾಸದ ಪುಟದಲ್ಲಿ ಸೇರಬೇಕು.ಕರ್ನಾಟಕದ ಪ್ರವಾಸಿ ತಾಣವಾಗಬೇಕು. ಇದೊಂದು ಅದ್ಭುತ ದೇವಸ್ಥಾನ ಎಂದು ಹೇಳಿದರು.
ಈ ವೇಳೆ ಶಾಸಕ ಮಹೇಶ ಟೆoಗಿನಕಾಯಿ, ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ದೇವಸ್ಥಾನ ಕುರಿತಂತೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಈ ಭಾಗದ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಪಾಲಿಕೆ ಸದಸ್ಯ ತಿಪ್ಪಣ್ಣ ಮಜ್ಜಗಿ, ಉಮೇಶ್ ಕೌಜಗೇರಿ, ಸ್ಥಳೀಯರಾದ ಶಿವು ಪಾಟೀಲ್, ರಾಜು ಅಡ್ಡೋಣಗಿ, ನವೀನ ಮಡಿವಾಳರ ಉಪಸ್ಥಿತರಿದ್ದರು.ಪಹಲ್ಗಾಂ: ರಾಜಕಾರಣ ಸಲ್ಲದು: ಖಡ್ಸೆ
ಹುಬ್ಬಳ್ಳಿ:ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ನಡೆದಿರುವುದು ಘೋರ ಕೃತ್ಯ. ಇಂತಹ ಪ್ರಕರಣದಲ್ಲಿ ಯಾರೂ ರಾಜಕಾರಣ ಮಾಡಬಾರದು ಎಂದು ಕೇಂದ್ರ ಯುವಜನ ಸೇವಾ ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವೆ ರಕ್ಷಾ ಖಡ್ಸೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಲಿನ ಉಗ್ರಗಾಮಿ ಚಟುವಟಿಕೆ ಹತ್ತಿಕ್ಕಲು ಕೇಂದ್ರ ಎಲ್ಲ ರೀತಿಯ ಪ್ರಯತ್ನ ನಡೆಸಿದೆ. ಇದರಲ್ಲಿ ಯಾರೂ ರಾಜಕಾರಣ ಮಾಡಬಾರದು. ಎಲ್ಲ ಪಕ್ಷದ ನಾಯಕರೂ ಕೇಂದ್ರ ಸರ್ಕಾರದ ಜತೆಗೆ ನಿಲ್ಲಬೇಕು. ಎಲ್ಲ ಪಕ್ಷಗಳೂ ಕೇಂದ್ರ ಸರ್ಕಾರದ ಜತೆಗೆ ನಿಲ್ಲಲಿವೆ ಎನ್ನುವ ವಿಶ್ವಾಸವಿದೆ ಎಂದರು.ಭಾರತದ ಪ್ರತಿಯೊಬ್ಬ ನಾಗರಿಕರಿಗೆ ಸುರಕ್ಷತೆ ಕೊಡುವುದು ನಮ್ಮ ಆದ್ಯ ಕರ್ತವ್ಯ. ದಾಳಿ ಮಾಡಿದ ಉಗ್ರಗಾಮಿಗಳ ಕೃತ್ಯದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕಲಂ 370 ವಾಪಸ್ ಪಡೆದ ನಂತರ ಜಮ್ಮು– ಕಾಶ್ಮೀರದ ಜನ ಹೊಸ ಜೀವನ ಆರಂಭಿಸಿದ್ದಾರೆ. ಅಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಒತ್ತು ನೀಡಲಾಗುತ್ತಿದೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಇತರೆ ರಾಜ್ಯಗಳಂತೆ ಕಾಶ್ಮೀರವೂ ಅಭಿವೃದ್ಧಿಯಾಗಬೇಕಿದೆ. ಪ್ರವಾಸೋದ್ಯಮದ ಜತೆಗೆ ಎಲ್ಲ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿಯಾಗಬೇಕಿದೆ ಎಂದು ತಿಳಿಸಿದರು.