ಮನಸ್ಸಿನ ಬೆಳವಣಿಗೆಗೆ ಪೂರಕ ಚಿಂತನೆ ಅಳವಡಿಸಿಕೊಳ್ಳಿ

KannadaprabhaNewsNetwork | Published : Feb 13, 2025 12:45 AM

ಸಾರಾಂಶ

ರ್ಕಾರ, ಸಮಾಜ, ವಿವಿಧ ಸಂಘ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು, ವಿಜ್ಞಾನದ ಸಂಸ್ಥೆಗಳು ಎಲ್ಲವೂ ಒಟ್ಟಾಗಿ ಪ್ರಾಚೀನ ಜ್ಞಾನ ಸಂಪತ್ತನ್ನು ಉಳಿಸಲು ಮುಂದಾಗಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ದೇಹದ ಬೆಳವಣಿಗೆಗೆ ಪೂರಕವಾದ ಆಹಾರಗಳನ್ನು ಸೇವಿಸುವಂತೆ, ಮನಸ್ಸಿನ ಬೆಳವಣಿಗೆ ಪೂರಕವಾದ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯ, ಪ್ರಾಚ್ಯವಿದ್ಯಾ ಸಂಶೋಧನಾಲಯ, ಕೇಂದ್ರೀಯ ಸಂಸ್ಕೃತ ವಿವಿ, ಶ್ರೀ ವ್ಯಾಸತೀರ್ಥ ಸಂಶೋಧನಾ ಪ್ರತಿಷ್ಠಾನಮ್ ಸಹಯೋಗದಲ್ಲಿ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜ್ಞಾನ ಪರಂಪರೆ ನಿರಂತರವಾಗಿ ಮುಂದುವರೆಯುತ್ತಿದೆ. ಆದ್ದರಿಂದ ಶುದ್ಧ ಚಿಂತನೆಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಭಾರತೀಯ ಸಂಸ್ಕೃತಿ ಜ್ಞಾನ ಪರಂಪರೆಯನ್ನು ತಿಳಿಸುವ ಕೆಲಸವನ್ನು ಎಲ್ಲಾ ವಿಶ್ವವಿದ್ಯಾಲಯ ಮತ್ತು ಶಿಕ್ಷಣ ಸಂಸ್ಥೆಗಳು ಮಾಡಬೇಕು ಎಂದು ಅವರು ತಿಳಿಸಿದರು.

ಕೇಂದ್ರೀಯ ಸಂಸ್ಕೃತ ವಿವಿ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ ಮಾತನಾಡಿ, ಸರ್ಕಾರ, ಸಮಾಜ, ವಿವಿಧ ಸಂಘ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು, ವಿಜ್ಞಾನದ ಸಂಸ್ಥೆಗಳು ಎಲ್ಲವೂ ಒಟ್ಟಾಗಿ ಪ್ರಾಚೀನ ಜ್ಞಾನ ಸಂಪತ್ತನ್ನು ಉಳಿಸಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ಪ್ರಸ್ತುತ ಆಳುವ ಸರ್ಕಾರಗಳಿಗೆ ಮೈಸೂರು ರಾಜ ಮನೆತನದ ರಾಜರು ಕೈಗೊಂಡ ಅಭಿವೃದ್ಧಿ ಕೆಲಸಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಆದರ್ಶವಾಗಬೇಕು. ಐದು ವರ್ಷಗಳ ಕಾಲ ಅಧಿಕಾರದಲ್ಲಿ ಇರುವ ರಾಜಕಾರಣಿಗಳು 50 ವರ್ಷಗಳ ಕಾಲ ಉಳಿಯುವ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.

ಬೆಂಗಳೂರಿನ ದಿ ಮಿಥಿಕ್ ಸೊಸೈಟಿ ಅಧ್ಯಕ್ಷ ವಿ. ನಾಗರಾಜ್ ಮಾತನಾಡಿ, ಪ್ರತಿಯೊಬ್ಬರೂ ಕೈಗೊಳ್ಳುವ ಸಾಮಾಜಿಕ ಕೆಲಸ ಕಾರ್ಯಗಳು, ಸಾಂಸ್ಕೃತಿಕ ಕೊಡುಗೆಗಳು ಕೆರೆಯ ನೀರನ್ನು ಕೆರೆಗೆ ಚೆಲ್ಲುವಂತೆ ಸೇವಾ ಪೂರ್ಣವಾಗಿರಬೇಕು ಎಂದು ಅವರು ಹೇಳಿದರು.

ಭಾರತೀಯ ಜ್ಞಾನಪರಂಪರೆಯ ಬಗ್ಗೆ ಜಗತ್ತಿನ ಜನತೆಗೆ ಬಹಳ ಆಸಕ್ತಿ ಇದೆ. ಆದ್ದರಿಂದ ಭಾರತೀಯ ಜ್ಞಾನ ಭಂಡಾರವನ್ನು ಜಗತ್ತಿಗೆ ತಲುಪಿಸುವ ಕೆಲಸ ನಿರಂತರವಾಗಿ ನಡೆಯಬೇಕು ಎಂದರು.

ಶ್ರೀ ವ್ಯಾಸರಾಜ ಮಠದ ಪೀಠಾಧ್ಯಕ್ಷ ಎಚ್.ಎಚ್. ಶ್ರೀವಿದ್ಯಾಶ್ರೀಶತೀರ್ಥ ಸ್ವಾಮೀಜಿ, ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್‌, ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿರ್ದೇಶಕ ಡಾ.ಡಿ.ಪಿ. ಮಧುಸೂದನಾಚಾರ್ಯ, ಪಿ.ಪಿ.ಎಸ್.ಎಂ ನಿವೃತ್ತ ನಿರ್ದೇಶಕ ಡಾ.ಎ.ವಿ. ನಾಗಸಂಪಿಗೆ, ಲೇಖಕ ಟಿ.ವಿ. ಸತ್ಯನಾರಾಯಣ ಮೊದಲಾದವರು ಇದ್ದರು.---

ವಿವಿಧ ಕೃತಿ ಬಿಡುಗಡೆಗೊಳಿಸಿದ ಮೈಸೂರು ವಿವಿ ಕುಲಪತಿ ಪ್ರೊ.ಎನ್‌.ಕೆ. ಲೋಕನಾಥ್‌ ಮಾತನಾಡಿ, ಮುಂದಿನ ದಿನಗಳಲ್ಲಿಯಾದರೂ ಗುಣಮಟ್ಟದ ಮತ್ತು ಜ್ಞಾನ ಕೇಂದ್ರತ ಶಿಕ್ಷಣ ಪ್ರತಿಯೊಬ್ಬರಿಗೂ ದೊರಕುವಂತೆ ಆಗಬೇಕು. ಈಗ ಹಣದ ಶಿಕ್ಷಣ ಚಾಲ್ತಿಯಲ್ಲಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಗುಣಮಟ್ಟದ ಶಿಕ್ಷಣ ಎಲ್ಲರಿಗೂ ದೊರೆಯಬೇಕು. ಶಿಕ್ಷಣದಲ್ಲಿ ತಂತ್ರಜ್ಞಾನ ಬಳೆಸಿಕೊಳ್ಳಬೇಕು. ವಿದ್ಯಾರ್ಥಿಗಳೂ ಸೇರಿದಂತೆ ಎಲ್ಲರಿಗೂ ಸಮಯ ಪ್ರಜ್ಞೆ ಇರಬೇಕು. ವಿದ್ವತ್ ಪೂರ್ಣ ಕೃತಿಗಳು ಯಾವ ತೊಂದರೆಯೂ ಇಲ್ಲದೆ ಪ್ರಕಟಗೊಳ್ಳಬೇಕು. ಅಮೂಲ್ಯ ಕೃತಿಗಳು ಎಲ್ಲರಿಗೂ ತಲುಪಬೇಕು ಎಂದು ಆಶಿಸಿದರು.

Share this article