ಪ್ರೀತಿಸದ ಯುವತಿ ಮನೆಮೇಲೆ ಕಲ್ಲು ತೂರಾಟ!

KannadaprabhaNewsNetwork | Published : May 26, 2024 1:38 AM

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಪ್ರೀತಿಸಿ, ಮದುವೆಯಾಗುವಂತೆ ಬೆನ್ನುಬಿದ್ದ ಪ್ರೇಮಿ ಹುಬ್ಬಳಿಯ ನೇಹಾ ಹಿರೇಮಠ ರೀತಿಯಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಯುವತಿಯ ಮನೆ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಬೆಳಗಾವಿ ತಾಲೂಕಿನ ಕಿಣಯೇ ಗ್ರಾಮದಲ್ಲಿ ಶನಿವಾರ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ತಾಲೂಕಿನ ಕಿಣಯೆ ಗ್ರಾಮದ ತಿಪ್ಪಣ್ಣ ಡೋಕರೆ (27)ಯನ್ನು ಪೊಲೀಸರು ಬಂಧಿಸಿದ್ದಾರೆ. ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದ ಅದೇ ಗ್ರಾಮದ ಯುವತಿಯನ್ನು ಪ್ರೀತಿಸುವಂತೆ ಹಾಗೂ ಮದುವೆಯಾಗುವಂತೆ ಬಂಧಿತ ಪೀಡಿಸಿದ್ದಾನೆ.

ಬಂಧಿತ ಆರೋಪಿ ಏನು ಮಾಡಿದ್ದ?

- ಕಿಣಯೇ ಗ್ರಾಮದಲ್ಲಿ ಯುವತಿಯನ್ನು ಪ್ರೀತಿಸುವಂತೆ ಯುವತಿಯನ್ನು ದುಂಬಾಲು ಬಿದ್ದಿದ್ದ

- ಪ್ರೀತಿಸಿ ಮದುವೆ ಆಗದಿದ್ದರೆ ನೇಹಾ ಹಿರೇಮಠಳ ಹತ್ಯೆಯಂತೆ ಕೊಲೆ ಬೆದರಿಕೆ ಹಾಕಿದ್ದ

- ಯುವತಿ ನಿತ್ಯ ಕಾಲೇಜಿಗೆ ಹೋಗುವಾಗಲೂ ಪ್ರೀತಿ ಮಾಡುವಂತೆ ಪೀಡಿಸುತ್ತಿದ್ದ ತಿಪ್ಪಣ್ಣ

- ಯುವಕನಿಂದ ಬೇಸತ್ತು ಬಿಕಾಂ ಓದುವುದನ್ನು ಅರ್ಧಕ್ಕೆ ನಿಲ್ಲಿಸಿ, ವಿದ್ಯಾಭ್ಯಾಸ ಅರ್ಧಕ್ಕೆ ಮೊಟಕು ಮಾಡಿದ್ದ ಯುವತಿ

- ಮೂರು ವರ್ಷಗಳಿಂದ ಪ್ರೀತಿ ಮಾಡುವಂತೆ ದುಂಬಾಲಿ ಬಿದ್ದಿದ್ದಾನೆ ಬಂಧಿತ ತಿಪ್ಪಣ್ಣ

- ಈ ಹಿಂದೆ ಪೊಲೀಸರು ಎಚ್ಚರಿಕೆ ಕೊಟ್ಟ ಹಿನ್ನೆಲೆಯಲ್ಲಿ ಕೆಲವು ದಿನ ಯುವತಿ ಹಿಂದೆ ಅಲೆದಾಟ ತಪ್ಪಿಸಿದ್ದ

- ಈಗ ಮತ್ತೆ ಅದೇ ಚಾಳಿಯನ್ನು ಮುಂದುವರಿಸಿದ್ದರಿಂದ ಯುವಕನನ್ನು ಬಂಧಿಸಿರುವ ಪೊಲೀಸರು

----------------------------ಕನ್ನಡಪ್ರಭ ವಾರ್ತೆ ಬೆಳಗಾವಿ

ಪ್ರೀತಿಸಿ, ಮದುವೆಯಾಗುವಂತೆ ಬೆನ್ನುಬಿದ್ದ ಪ್ರೇಮಿ ಹುಬ್ಬಳಿಯ ನೇಹಾ ಹಿರೇಮಠ ರೀತಿಯಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಯುವತಿಯ ಮನೆ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಬೆಳಗಾವಿ ತಾಲೂಕಿನ ಕಿಣಯೇ ಗ್ರಾಮದಲ್ಲಿ ಶನಿವಾರ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ತಾಲೂಕಿನ ಕಿಣಯೆ ಗ್ರಾಮದ ತಿಪ್ಪಣ್ಣ ಡೋಕರೆ (27)ಯನ್ನು ಪೊಲೀಸರು ಬಂಧಿಸಿದ್ದಾರೆ. ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದ ಅದೇ ಗ್ರಾಮದ ಯುವತಿಯನ್ನು ಪ್ರೀತಿಸುವಂತೆ ಹಾಗೂ ಮದುವೆಯಾಗುವಂತೆ ಬಂಧಿತ ಪೀಡಿಸಿದ್ದಾನೆ. ಅಲ್ಲದೇ ಯುವತಿ ನಿತ್ಯ ಕಾಲೇಜಿಗೆ ಹೋಗುವಾಗಲೇ ಬೆನ್ನು ಬಿದ್ದು ಕಿರುಕುಳ ನೀಡುತ್ತಿರುವ ಹಿನ್ನೆಲೆಯಲ್ಲಿ ಆತನ ಹುಚ್ಚಾಟಕ್ಕೆ ಬೇಸತ್ತು ಕಾಲೇಜಿಗೆ ಹೋಗುವುದನ್ನೇ ಯುವತಿ ನಿಲ್ಲಿಸಿದ್ದಾಳೆ. ಈ ಮೂಲಕ ಆಕೆಯ ವಿದ್ಯಾಭ್ಯಾಸ ಕೂಡ ಮೊಟಕುಗೊಂಡಿದೆ ಎಂದು ಹೇಳಲಾಗಿದೆ.

ಹತ್ಯೆ ಮಾಡೋದಾಗಿ ಆರೋಪಿ ಧಮ್ಕಿ:

ಕಿಣಯೇನಲ್ಲಿರುವ ಮನೆಯಲ್ಲಿ ತಾಯಿ ಜತೆಗೆ ಯುವತಿ ವಾಸವಿದ್ದಾಳೆ. ಯುವತಿ ಜತೆಗೆ ಮದುವೆ ಮಾಡಿ ಕೊಡುವಂತೆ ಆಕೆಯ ತಾಯಿಗೂ ತಿಪ್ಪಣ್ಣ ಧಮ್ಕಿ ಹಾಕಿದ್ದಾನಂತೆ. ಮದುವೆ ಮಾಡಿ ಕೊಡದಿದ್ದರೆ ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠನಂತ ಹತ್ಯೆ ಮಾಡುವುದಾಗಿ ಯುವತಿ ಹಾಗೂ ತಾಯಿಗೆ ಜೀವ ಬೆದರಿಕೆ ಹಾಕಿದ್ದಾನೆ. ಕೆಲ ತಿಂಗಳ ಹಿಂದೆಯೇ ಯುವತಿ ಮನೆಯ ಹಿಂಬಾಗಿಲಿಗೆ ಬೆಂಕಿ ಹಚ್ಚಿ ಹುಚ್ಚಾಟ ಮೆರೆದಿದ್ದನು. ಇದಾದ ಬಳಿಕ ಮೂರು ದಿನಗಳ ಹಿಂದೆಯಷ್ಟೇ ಮತ್ತೆ ಮನೆಗೆ ಬಂದು ಗಲಾಟೆ ಮಾಡಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದಿರುವಾಗ ಕಲ್ಲು ಎಸೆದು ಮನೆಯ ಕಿಟಕಿ ಗಾಜು ಒಡೆದು ಪುಂಡಾಟ ಮೆರೆದಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

ಮನೆಯ ಪಕ್ಕದಲ್ಲಿಯೇ ಜಮೀನಿಗೆ ಬರುವ ನೆಪವೊಡ್ಡಿ ಕಿರುಕುಳ ನೀಡುತ್ತಿದ್ದಾನೆ. ಯಾವುದೇ ಕೆಲಸ ಮಾಡದೇ ಊರಲ್ಲಿ ತಿಪ್ಪಣ್ಣ ಡೋಕರೆ ಸುತ್ತಾಡುತ್ತಿದ್ದನು. ಈ ಕಾರಣಕ್ಕೆ ಒಂದೇ ಸಮುದಾಯವಾದರೂ ಪುತ್ರಿಯನ್ನು ಕೊಡಲು ಯುವತಿ ಕುಟುಂಬದವರು ನಿರಾಕರಿಸಿದ್ದರು. ತಿಪ್ಪಣ್ಣನ ಕಿರಿಕಿರಿಗೆ ಬೇಸತ್ತು ಯವತಿ ಕುಟುಂಬ ಪೊಲೀಸರ ಮೊರೆ ಹೋಗಿದೆ. ಕಳೆದ ಮೂರು ವರ್ಷಗಳ ಹಿಂದೆಯೇ ತಿಪ್ಪಣ್ಣ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ. ಆಗ ಪೊಲೀಸರು ಎಚ್ಚರಿಕೆ ಕೊಟ್ಟಿದ್ದರಿಂದ ಕೆಲ ದಿನಗಳ ಕಾಲ ಯುವತಿ ತಂಟೆಗೆ ಹೋಗದೇ ಸುಮ್ಮನಾಗಿದ್ದ. ಈಗ ಮತ್ತೆ ತಿಪ್ಪಣ್ಣ ತನ್ನ ಹಳೆಯ ಚಾಳಿ ಮುಂದುವರಿಸಿದ್ದಾನೆ.

ಅಲ್ಲದೇ ಕೊಲೆ ಬೆದರಿಕೆ ಹಾಕಿದ್ದರಿಂದ ಮತ್ತೆ ಈ ಕುಟುಂಬ ಪೊಲೀಸರ ಮೊರೆ ಹೋಗಿದೆ. ಆದರೆ, ಎರಡು ಬಾರಿಯೂ ನಾಳೆ ಬನ್ನಿ ಎಂದು ಸಿದ್ದ ಉತ್ತರ ನೀಡಿ ಪೊಲೀಸರು ಕಳುಹಿಸಿದ್ದಾರೆ ಎಂದು ಯುವತಿ ಕುಟುಂಬಸ್ಥರು ಆರೋಪಿಸಿದ್ದಾರೆ. ಪೊಲೀಸರ ನಿರ್ಲಕ್ಷ್ಯಕ್ಕೆ ಜೀವಭಯದಲ್ಲೆ ಯುವತಿ ಹಾಗೂ ಆಕೆಯ ತಾಯಿ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.

----------

ಬಾಕ್ಸ್‌...

ಯುವತಿಗೆ ಜೀವ ಬೆದರಿಕೆ ಹಾಕಿದ್ದ ಆರೋಪಿ ಬಂಧನ

ಬೆಳಗಾವಿ: ಯುವತಿಗೆ ಜೀವ ಬೆದರಿಕೆ ಹಾಕಿದ ಹಾಗೂ ಮನೆ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಯಡಾ ಮಾರ್ಟಿನ್‌ ಮರ್ಬನ್ಯಾಂಗ್‌ ತಿಳಿಸಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಯುವತಿಗೆ ಪ್ರೀತಿ ಮಾಡುವಂತೆ ಸತಾಯಿಸುತ್ತ ತಿಪ್ಪಣ್ಣ ಡೋಕರೆ(27)ಯನ್ನು ಯುವತಿಯ ದೂರಿನ ಮೇರೆಗೆ ಬಂಧನ ಮಾಡಲಾಗಿದೆ. ಬೆಳಗಾವಿ ಗ್ರಾಮೀಣ ಪೊಲೀಸರಿಂದ ಆರೋಪಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. ಯುವತಿಗೆ ಸೂಕ್ತ ರಕ್ಷಣೆ ನೀಡುವ ಭರವಸೆಯನ್ನು ಯುವತಿ ಕುಟುಂಬಕ್ಕೆ ನೀಡಲಾಗಿದೆ ಎಂದರು.

Share this article