ಹಾನಗಲ್ಲ: ಮಾನವಕುಲ ತಲೆ ತಗ್ಗಿಸುವಂಥ ಯಾವುದೇ ಘಟನೆಯನ್ನೂ ಸಹಿಸುವುದು ಸಾಧ್ಯವಿಲ್ಲ. ಅಂಥ ಘಟನೆಗಳು ನಡೆದ ಸಂದರ್ಭದಲ್ಲಿ ಅದನ್ನು ರಾಜಕೀಯವಾಗಿ ಬಳಸುವುದು, ಲಾಭ ಮಾಡಿಕೊಳ್ಳುವುದನ್ನು ಸಮಾಜವೂ ಒಪ್ಪದು ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ಶುಕ್ರವಾರ ತಾಲೂಕಿನ ಕಾಡಶೆಟ್ಟಿಹಳ್ಳಿ ಗ್ರಾಮದ ಪಂಚಾಕ್ಷರಿ ಗವಾಯಿಗಳ ಮತ್ತು ಹಕ್ಕಲಬಸವೇಶ್ವರ ದೇವಸ್ಥಾನಗಳ ಶುದ್ಧೀಕರಣದ ಹಿನ್ನೆಲೆಯಲ್ಲಿ ನಡೆದ ಹೋಮ, ಹವನ ಹಾಗೂ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆಲ ದಿನಗಳ ಹಿಂದೆ ಸೃಷ್ಟಿ ಮತ್ತು ಪ್ರಕೃತಿಗೆ ವಿರುದ್ಧ ಓರ್ವ ಕ್ರೂರ ವ್ಯಕ್ತಿ ಒಂದು ಹಸುವಿನ ಮೇಲೆ ಎಸಗಿರುವ ಅನೈಸರ್ಗಿಕ ಲೈಂಗಿಕ ಹೇಯ ಕೃತ್ಯದಿಂದ ಎಲ್ಲರಿಗೂ ನೋವಾಗಿದೆ. ಮಾನಸಿಕ ನೆಮ್ಮದಿ ಕದಡಿದೆ. ಹಾಗಾಗಿ ನೋವು ದೂರ ಮಾಡುವ ಉದ್ದೇಶದಿಂದ ಗ್ರಾಮಸ್ಥರು ಪಕ್ಷಾತೀತ ಮತ್ತು ಜಾತ್ಯತೀತವಾಗಿ ಹೋಮ, ಹವನ ಹಾಗೂ ಪೂಜಾ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದರು.ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ಹೋತನಹಳ್ಳಿಯ ಸಿಂದಗಿಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಹಾರುದ್ರಾಭಿಷೇಕ, ಗಣಹೋಮ, ಗಣಶಾಂತಿ ಹೋಮ, ನವಗ್ರಹ ಶಾಂತಿ ಹೋಮ ಸೇರಿದಂತೆ ನಾನಾ ಪೂಜಾ ಕೈಂಕರ್ಯಗಳು ಶ್ರದ್ಧೆ, ಭಕ್ತಿಯಿಂದ ನಡೆದವು.ಗ್ರಾಮದ ಪ್ರಮುಖರಾದ ವಿಜಯಕುಮಾರ ದೊಡ್ಡಮನಿ, ಪಂಚಾಕ್ಷರಿಗೌಡ ಪಾಟೀಲ, ಪಂಚಾಕ್ಷರಯ್ಯ ಚರಂತಿಮಠ, ಬಸಪ್ಪ ಶಿವಣ್ಣನವರ, ರಮೇಶಗೌಡ ಪಾಟೀಲ, ಪ್ರಭು ಕಡಕೋಳ, ಮಲ್ಲಿಕಾರ್ಜುನಯ್ಯ ಚಿಕ್ಕಮಠ, ಶಿವಕುಮಾರಗೌಡ ಪಾಟೀಲ, ಚಂದ್ರಗೌಡ ಪಾಟೀಲ, ಶಿದ್ದಲಿಂಗಯ್ಯ ಬೆಂಡಿಗೇರಿಮಠ, ಸಿದ್ದಪ್ಪ ಕೋತಂಬರಿ, ಶಿವರುದ್ರಪ್ಪ ಹುಣಸಿಕಟ್ಟಿ, ಅಶೋಕ ಹಲಸೂರ, ಲೀಲಾವತಿ ದೊಡ್ಡಮನಿ ಇದ್ದರು.ಬೆಳೆ ಸಮೀಕ್ಷೆಗೆ ರೈತರ ಆ್ಯಪ್ ಬಿಡುಗಡೆ
ಹಾವೇರಿ: ರಾಜ್ಯ ಸರ್ಕಾರ ಇ- ಆಡಳಿತ ಮತ್ತು ಕೃಷಿ ಇಲಾಖೆ ಸಹಯೋಗದೊಂದಿಗೆ 2025- 26ನೇ ಸಾಲಿನ ಪೂರ್ವ/ ತಡ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಗೆ(ನನ್ನ ಬೆಳೆ ನನ್ನ ಹಕ್ಕು) ರೈತರ ಆ್ಯಪ್/ಪಿಆರ್(ಖಾಸಗಿ ನಿವಾಸಿಗಳು) ಆ್ಯಪ್ ಬಿಡುಗಡೆ ಮಾಡಲಾಗಿದೆ. ರೈತರು ಕೂಡಲೇ ಗೂಗಲ್ ಪ್ಲೇಸ್ಟೋರ್‌ನಿಂದ ಪೂರ್ವ/ತಡ ಮುಂಗಾರು ರೈತರ ಬೆಳೆ ಸಮೀಕ್ಷೆ- 2025ರ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ತಾವು ಬೆಳೆದ ಬೆಳೆ ಮಾಹಿತಿಯೊಂದಿಗೆ ಛಾಯಾಚಿತ್ರವನ್ನು ಅಪ್‌ಲೋಡ್ ಮಾಡಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.ಈ ಮಾಹಿತಿಯನ್ನು ಬೆಳೆವಿಮೆ, ಬೆಳೆನಷ್ಟ ಪರಿಹಾರ, ಬೆಂಬಲ ಬೆಲೆ ಮತ್ತು ಸರ್ಕಾರದ ವಿವಿಧ ಯೋಜನೆಯಡಿ ಸವಲತ್ತುಗಳನ್ನು ಒದಗಿಸಲು ಆರ್‌ಟಿಸಿಯಲ್ಲಿ ಅಳವಡಿಸಲು ಬಳಸಲಾಗುತ್ತದೆ. ಆದ್ದರಿಂದ ರೈತರು ಹೆಚ್ಚಿನ ಆಸಕ್ತಿಯೊಂದಿಗೆ ಬೆಳೆ ಸಮೀಕ್ಷೆಯಲ್ಲಿ ಪಾಲ್ಗೊಂಡು ತಮ್ಮ ಜಮೀನಿನ ಬೆಳೆ ಮಾಹಿತಿಯನ್ನು ರೈತರು ತಾವೇ ಖುದ್ದಾಗಿ ದಾಖಲಿಸಲು ಕೋರಿದೆ.