ಕನ್ನಡಪ್ರಭ ವಾರ್ತೆ ದಾವಣಗೆರೆ
ಹರಪನಹಳ್ಳಿ ತಾ.ದುಗ್ಗಾವತಿ ಗ್ರಾಮದ ರಿಸನಂ 236 ಮತ್ತು ಹರಿಹರ ತಾ.ಚಿಕ್ಕಬಿದರಿ ರಿಸನಂ 30 ಮತ್ತು 67ರಲ್ಲಿ ಸುಮಾರು 350 ಎಕರೆ ಜಮೀನನ್ನು ಅಕ್ರಮವಾಗಿ ಸಕ್ಕರೆ ಕಾರ್ಖಾನೆಗೆ ಮಂಜೂರು ಮಾಡಿರುವುದರ ವಿರುದ್ಧ ಧ್ವನಿ ಎತ್ತಿರುವ ಹರಿಹರ ಶಾಸಕ ಬಿ.ಪಿ.ಹರೀಶರನ್ನು ಹೆದರಿಸಲೆಂದೇ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅಧಿಕಾರ ದುರುಪಯೋಗಪಡಿಸಿಕೊಂಡು, ಪೊಲೀಸ್ ಇಲಾಖೆ ಮುಖಾಂತರ ಅನಗತ್ಯ ತೊಂದರೆ ಕೊಡುತ್ತಿದ್ದಾರೆ ಎಂದು ಹರಪನಹಳ್ಳಿ, ಹರಿಹರ ತಾಲೂಕಿನ ರೈತರು ಆರೋಪಿಸಿದರು.ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಹರಿಹರ-ಹರಪನಹಳ್ಳಿ ತಾಲೂಕುಗಳ ಗಡಿ ಗ್ರಾಮಗಳಾದ ದುಗ್ಗಾವತಿ, ಚಿಕ್ಕಬಿದರಿ, ಸಾರಥಿ, ಕಡತಿ, ವಟ್ಲಹಳ್ಳಿ ಗ್ರಾಮಗಳ ಪರಿಶಿಷ್ಟ ರೈತರ ಪರ ಶಾಸಕ ಬಿ.ಪಿ.ಹರೀಶ್ ಧ್ವನಿ ಎತ್ತಿದ್ದಾರೆ. ಅಧಿವೇಶನದಲ್ಲೂ ರೈತರ ಜಮೀನನ್ನು ಅ ಕ್ರಮವಾಗಿ ಭೂ ಸ್ವಾಧೀನಪಡಿಸಿಕೊಂಡ ಬಗ್ಗೆ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದು, ಇದೇ ಕಾರಣಕ್ಕೆ ಶಾಸಕ ಹರೀಶರಿಗೆ ತೊಂದರೆ ನೀಡಲು ಪೊಲೀಸ್ ಅಧಿಕಾರಿಗಳ ಮುಖಾಂತರ ಕೇಸ್ ಮಾಡಿಸಿದ್ದಾರೆ ಎಂದರು.
ಹಿಂದೆ ಇದೇ ಜಿಲ್ಲಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನರ ವಿರುದ್ಧ ಜಿಂಕೆ ಕೇಸ್ ದಾಖಲಾದಾಗ ನಿಮ್ಮಂತೆ ಬಿಜೆಪಿ ದ್ವೇಷ ರಾಜಕಾರಣ ಮಾಡಲಿಲ್ಲ. ಆಗ ಬಿಜೆಪಿ ಸರ್ಕಾರವೇ ಇತ್ತು, ಏನು ಬೇಕಾದರೂ ಮಾಡಬಹುದಿತ್ತು. ಆದರೆ, ಜಿಲ್ಲೆಯ ಏಕೈಕ ವಿಪಕ್ಷ ಬಿಜೆಪಿ ಶಾಸಕ ಬಿ.ಪಿ.ಹರೀಶರನ್ನು ಹತ್ತಿಕ್ಕಲು ಸಚಿವರು, ಎಸ್ಪಿ ಪ್ರಯತ್ನಿಸುತ್ತಿದ್ದಾರೆ. ದುಗ್ಗಾವತಿ, ಸಾರಥಿ, ಕಡತಿ, ವಟ್ಲಹಳ್ಳಿ, ಸಾರಥಿ, ಚಿಕ್ಕಬಿದರಿ ರೈತರ ಒಂದಿಂಚೂ ಭೂಮಿಯನ್ನೂ ಕಬಳಿಸಲು ಬಿಡುವುದಿಲ್ಲವೆಂದು ಶಾಸಕ ಹರೀಶ ಪರಿಶಿಷ್ಟ, ಹಿಂದುಳಿದ, ಬಡ ರೈತರ ಬೆನ್ನಿಗೆ ನಿಂತಿದ್ದಾರೆ ಎಂದು ತಿಳಿಸಿದರು.ಅಧಿಕಾರಸ್ಥರ ಪರ ಕೆಲಸ ಮಾಡುತ್ತಿರುವ ಡಿಸಿ, ಎಸ್ಪಿಯವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ಕಾಂಗ್ರೆಸ್ ಪಕ್ಷಕ್ಕೆ ಸೇರಿ, ಆ ಪಕ್ಷದ ಜೀತ ಮಾಡಲಿ. ನಾವೆಲ್ಲರೂ ರೈತರ ಪರವಾಗಿ ನಿಂತಿರುವ ಶಾಸಕ ಹರೀಶರ ಪರ ನಿಲ್ಲುತ್ತೇವೆ. ನಿಮ್ಮ ಸಚಿವರ ಕೈಗೊಂದು ಲಾಠಿ ಕೊಟ್ಟು ಬಿಡಿ. ಐದಾರು ದಶಕದಿಂದ ಹೋರಾಟ, ಸಮಾಜ ಸೇವೆ, ರಾಜಕಾರಣದಲ್ಲಿ ಹರೀಶ್ ಇದ್ದು, ಇಂತಹ ಬೆದರಿಕೆ, ಹೆದರಿಕೆಗಳಿಗೆಲ್ಲಾ ಜಗ್ಗುವವರಲ್ಲ ಎಂದರು.
ದುಗ್ಗಾವತಿ, ಚಿಕ್ಕಬಿದರಿ, ಸಾರಥಿ, ವಟ್ಲಹಳ್ಳಿ, ಕಡತಿ ಇತರೆ ಗ್ರಾಮಗಳ ರೈತರಾದ ಕಾಳಪ್ಪ ಚಿಕ್ಕಬಿದರಿ, ರೇಣುಕಮ್ಮ ಚಿಕ್ಕಬಿದರಿ, ಕಾಳಮ್ಮ ಚಿಕ್ಕಬಿದರಿ, ಪ್ರಕಾಶ ದುಗ್ಗಾವತಿ, ನಾಗರಾಜ ದುಗ್ಗಾವತಿ, ಮಲ್ಲಿಕಾರ್ಜುನ ದುಗ್ಗಾವತಿ, ದುರ್ಗಪ್ಪ ದುಗ್ಗಾವತಿ, ಸುಮಾರು 40ಕ್ಕೂ ಹೆಚ್ಚು ರೈತರು, ರೈತ ಮಹಿಳೆಯರು ಇದ್ದರು. ನಂತರ ಉಪ ವಿಭಾಗಾಧಿಕಾರಿ, ತಾಲೂಕು ಕಚೇರಿಗೆ ತೆರಳಿ, ರೈತರು ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದರು.ಶಾಸಕ ಹರೀಶಗೆ ಅನಗತ್ಯ ಕಿರುಕುಳ ವಿರುದ್ಧ ದೂರು
ಹರಿಹರ, ಹರಪನಹಳ್ಳಿ ತಾಲೂಕಿನ ಎಸ್ಸಿ-ಎಸ್ಟಿ ರೈತರ ಪರ ಹೋರಾಡುತ್ತಿರುವ ಹರಿಹರ ಶಾಸಕ ಬಿ.ಪಿ.ಹರೀಶರ ಪರ ಎರಡೂ ತಾಲೂಕಿನ ರೈತರು ಹೋರಾಟಕ್ಕೆ ಬೆನ್ನೆಲುಬಾಗಿ ನಿಲ್ಲುತ್ತೇವೆ. ಶಾಸಕರಿಗೆ ಅನಗತ್ಯ ಕಿರುಕುಳ ನೀಡುತ್ತಿರುವ ಜಿಲ್ಲಾ ಸಚಿವರ ವಿರುದ್ದ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಲಿದ್ದೇವೆ ಎಂದು ಹರಿಹರ, ಹರಪನಹಳ್ಳಿ ತಾಲೂಕಿನ ರೈತ ಮುಖಂಡರು ಹೇಳಿದರು.