ಮುದ್ದೇಬಿಹಾಳ : ಪಟ್ಟಣದ ಎಪಿಎಂಸಿ ಬಡಾವಣೆಯಲ್ಲಿರುವ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಐದು ವರ್ಷದ ಅವಧಿಯ ಆಡಳಿತ ಮಂಡಳಿ (2025-30)ಯ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 12 ಜನ ಸದಸ್ಯರು ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿ ರವಿ.ಎನ್ ಆಲೂರ ಸೋಮವಾರ ಅಧಿಕೃತವಾಗಿ ಘೋಷಿಸಿದರು.
ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಅ ವರ್ಗದಲ್ಲಿ ಒಟ್ಟು 4 ಸ್ಥಾನಕ್ಕೆ 16 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿದ್ದರು. ಇದರಲ್ಲಿ 12 ಜನ ನಾಮಪತ್ರ ಹಿಂಪಡೆದ ಕಾರಣ ಬಸವರಾಜ ಮಲ್ಲಪ್ಪ ಇಸ್ಲಾಂಪೂರ, ಸುರೇಶಕಲ್ಲಪ್ಪ ಹಳಿಮನಿ, ಮಲ್ಲನಗೌಡ ನಿಂಗನಗೌಡ ಬಿರಾದಾರ, ನೀಲಕಂಠಗೌಡ ಕಲ್ಲನಗೌಡ ಗೌಡರ 4 ಜನ ಅವಿರೋಧವಾಗಿ ಆಯ್ಕೆಗೊಂಡರು.
ಬ ವರ್ಗದಿಂದ 8 ನಿರ್ದೇಶಕರ ಸ್ಥಾನಕ್ಕೆ ಸಾಮಾನ್ಯ ಸದಸ್ಯರ ಎರಡು ಸ್ಥಾನಕ್ಕೆ ಗುರಲಿಂಗಪ್ಪ ಶಂಕ್ರಪ್ಪ ಹಡ್ಲಗೇರಿ ಹಾಗೂ ಬಸವರಾಜ ಚನ್ನಪ್ಪ ಬಗಲಿ. ಮಹಿಳಾ ಮೀಸಲು 2 ಕ್ಷೇತ್ರಕ್ಕೆ ಮಲ್ಲಮ್ಮ ಶಿವನಗೌಡ ಪಾಟೀಲ ಹಾಗೂ ವನಮಾಲಾ ಸಾಹೇಬಗೌಡ ಮೇಟಿ. ಹಿಂದುಳಿದ ವರ್ಗ ಅ ದಿಂದ ಮುತ್ತಪ್ಪ ಕರಬಸಪ್ಪ ಮುತ್ತಣ್ಣವರ ಹಾಗೂ ಹಿಂದುಳಿದ ವರ್ಗದ ಬ ದಿಂದ ಮನೋಹರ ಸೋಮಪ್ಪ ಮೇಟಿ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕ್ಷೇತ್ರದಿಂದ ಚಿದಾನಂದ ಮಂಗಳಪ್ಪ ಸೀತಿಮನಿ ಹಾಗೂ ಗುರಣ್ಣ ಬಿ ಹತ್ತೂರ ಅವಿರೋಧವಾಗಿ ಆಯ್ಕೆಗೊಂಡರು.
ಅ.4ರಿಂದ 11ರವರೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಅ.12ರಂದು ನಾಮಪತ್ರ ಪರಿಶೀಲನೆ, ಅ.13ರಂದು ಮಧ್ಯಾಹ್ನ 3ರವರಿಗೂ ನಾಮಪತ್ರ ಹಿಂಪಡೆಯುವ ಅವಕಾಶ ನೀಡಲಾಗಿತ್ತು. ಒಟ್ಟು 12 ಸ್ಥಾಕ್ಕೆ 42 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿದ್ದರು.
ನಿರ್ದೇಶಕರ ಮನವೊಲಿಸಿದ ಶಾಸಕರು:
ಜಿದ್ದಾಜಿದ್ದಿಗೆ ಕಾರಣವಾಗಿ ಚುನಾವಣೆಯ ವಿಷಯ ತಿಳಿದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ (ಅಪ್ಪಾಜಿ) ಇದೇ ಮೊದಲ ಬಾರಿ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಮಧ್ಯಸ್ಥಿಕೆ ವಹಿಸಿ ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಎಲ್ಲ ಅಭ್ಯರ್ಥಿಗಳ ಮನವೊಲಿಸಿದರು. ಪರಿಣಾಮ 30 ಜನ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದ ಕಾರಣ 12 ಜನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡರು.
ಬಳಿಕ ಆಯ್ಕೆಗೊಂಡ ಎಲ್ಲ ನೂತನ ಆಡಳಿತ ಮಂಡಳಿ ನಿರ್ದೇಶಕರನ್ನು ಸನ್ಮಾನಿಸಿ ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಸುದ್ದಿಗಾರರೊಂದಿಗೆ ಮಾತನಾಡಿದರು.
ಇಂತಹ ಸ್ಥಳೀಯ ಸಂಸ್ಥೆಯ ಚುನಾವಣೆಗಳು ಯಾವುದೇ ವೈಮಸ್ಸುಗಳಿಗೆ ಕಾರಣವಾಗಬಾರದು ಹಾಗೂ ಸ್ನೇಹ ಬಾಂಧ್ಯವದಿಂದ ಜೀವನ ನಡೆಸುವಂತಾಗಬೇಕು. ಈ ಸದುದ್ದೇಶದಿಂದ ಈ ಹಿಂದೆ ನಾಲತವಾಡದ ಪ್ರತಿಷ್ಠಿತ ಕುಟುಂಬವಾದ ಜೆ.ಎಸ್.ದೇಶಮುಖ ಹಾಗೂ ಕವಡಿಮಟ್ಟಿಗೌಡರ ಅಣತಿಯಂತೆ ಟಿಎಪಿಸಿಎಂಎಸ್ ಸೇರಿದಂತೆ ಸ್ಥಳೀಯ ಸಂಸ್ಥೆಯ ಚುನಾವಣೆಗಳನ್ನು ಅವಿರೋಧವಾಗಿ ಆಯ್ಕೆಯಾಗುವ ಕಾಲವಿತ್ತು. ನಾನೂ ಕೂಡ ಟಿಎಪಿಸಿಎಂಎಸ್ ಚುನಾವಣೆ ಮೂಲಕವೇ ನನ್ನ ರಾಜಕೀಯ ಜೀವನ ಆರಂಭಗೊಂಡಿತು. ಆದಾದ ನಂತರ ಇಂತಹ ಚುನಾವಣೆಗಳಲ್ಲಿ ನಾನು ಯಾವುದೇ ಮಧ್ಯಸ್ಥಿಕೆ ವಹಿಸಿರಲಿಲ್ಲ. ಆದರೇ ಟಿಎಪಿಸಿಎಂಎಸ್ ಸಂಸ್ಥೆಯ ಅಭಿವೃದ್ಧಿ ಹಿತದೃಷ್ಠಿಯಿಂದ ಈ ಬಾರಿ ಜಾತ್ಯಾತೀತವಾಗಿ ಹಾಗೂ ಪಕ್ಷಾತೀತವಾಗಿ ಎಲ್ಲರನ್ನು ಕರೆದು ಮನವೊಲಿಸಿ 12 ಜನರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಅಂತಿಮವಾಗಿ 12 ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಚುನಾವಣೆಯಲ್ಲಿ ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲ ಮುಖಂಡರು, ಹಿರಿಯರು ಹಾಗೂ ಸಂಸ್ಥೆ ಸದಸ್ಯರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಜೊತೆಗೆ ಟಿಎಪಿಸಿಎಂ ಸಂಸ್ಥೆಯಡಿ ಬರುವ ಎಲ್ಲ ಸಹಕಾರಿ ಸಂಘಗಳು ರೈತರಿಗೆ ಸದಾ ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸಿ ರೈತರಿಗೆ ಆಶ್ರಯದಾತವಾಗಿ ಕಾರ್ಯನಿರ್ವಹಿಸಿ ಎಂದು ಅವರು ತಿಳಿಸಿದರು.
ಈ ವೇಳೆ ತಾಳಿಕೋಟಿ ಭಾಗದ ಕಾಂಗ್ರೆಸ್ ಹಿರಿಯ ಮುಖಂಡ ಬಿ.ಎಸ್.ಪಾಟೀಲ (ಯಾಳಗಿ), ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ಸಂಗನಗೌಡ ಪಾಟೀಲ (ಕವಡಿಮಟ್ಟಿ), ಪ್ರಭುಗೌಡ ಮದರಕಲ್ಲ, ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ, ಬಾಪುಗೌಡ ಪೀರಾಪೂರ, ಸಂತೋಷ ನಾಯಕ, ಎಆರ್‌ಓ ಸಂತೋಷ ಇಲಕಲ್ಲ ಸೇರಿದಂತೆ ಹಲವರು ಇದ್ದರು.