ಕನ್ನಡಪ್ರಭ ವಾರ್ತೆ ಬೆಳಗಾವಿ
ಮುಖ್ಯಮಂತ್ರಿಗಳ ಪ್ರಗತಿ ಪರಿಶೀಲನೆಯ ನಂತರ ಜಿಲ್ಲೆಯಲ್ಲಿನ ವಸತಿ ಯೋಜನೆಯ ಪ್ರಸ್ತುತ ಪ್ರಗತಿ ಹೋಲಿಕೆ ಮಾಡಿದರೆ ಪ್ರಗತಿಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಸುಮಾರು 12,300 ರಷ್ಟು ವಸತಿ ಮನೆಗಳು ಪ್ರಾರಂಭವಾಗದಿರುವುದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ವಸತಿ ಯೋಜನೆಯ ಪ್ರಗತಿ ಕುರಿತು ತಾಪಂನಲ್ಲಿಯೇ ಕಡ್ಡಾಯವಾಗಿ ಪ್ರಗತಿ ಪರಿಶೀಲನಾ ಸಭೆ ನಡೆಸುವ ಮೂಲಕ ಪ್ರಗತಿ ಸಾಧಿಸಬೇಕೆಂದು ಅಧಿಕಾರಿ ಹಾಗೂ ತಾಪಂ.ಸಿಬ್ಬಂದಿಗೆ ಸಿಇಒ ರಾಹುಲ್ ಶಿಂಧೆ ಸೂಚನೆ ನೀಡಿದರು.ನಗರದ ಜಿಲ್ಲಾ ಪಂಚಾಯತಿಯಲ್ಲಿ ನಡೆದ ತಾಲ್ಲೂಕು ಪಂಚಾಯತಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ವಸತಿ ಯೋಜನೆಯ ಫಲಾನುಭವಿ ಆಯ್ಕೆ ವಿಧಾನ ಸರಿಯಾಗಿ ನಡೆಯಬೇಕು, ಫಲಾನುಭವಿ ಆಯ್ಕೆಯಲ್ಲಿ ಮತ್ತು ಮನೆಯ ಜಿಪಿಎಸ್ ಮಾಡುವ ವೇಳೆ ದುಡ್ಡು ಕೇಳುತ್ತಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ಅಂತಹ ದೂರುಗಳು ಜಿಪಂವರಗೆ ಬಂದರೆ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.ಅಲ್ಲದೇ, ಕೆಲವು ತಾಲೂಕಿನ ಇಒಗಳು ವಸತಿ ಯೋಜನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಗತಿ ಮಾಡದೇ ಬಾಕಿ ಉಳಿಸಿಕೊಂಡಿರುವುದು ಕಂಡು ಬಂದಿರುತ್ತದೆ. ಅಂತಹ ಇಒಗಳಿಗೆ ಕಾರಣ ಕೇಳಿ ನೋಟಿಸ್ ನೀಡಲು ಮುಖ್ಯ ಯೋಜನಾಧಿಕಾರಿಗೆ ಸೂಚನೆ ನೀಡಿದರು.
ಈ ವೇಳೆ ಉಪಕಾರ್ಯದರ್ಶಿ(ಅಭಿವೃದ್ಧಿ) ಬಸವರಾಜ್ ಅಡವಿಮಠ ಮಾತನಾಡಿ, ಕರ ವಸೂಲಾತಿಗೆ ಸಂಬಂಧಿಸಿದಂತೆ ಎಲ್ಲ ಇಒಗಳಿಗೆ ಈಗಾಗಲೇ ನಿರ್ದೇಶನ ನೀಡಿ ಹೆಚ್ಚಿನ ಪ್ರಮಾಣದಲ್ಲಿ ಕರ ವಸೂಲು ಮಾಡಲು ಕ್ರಮವಹಿಸುವಂತೆ ಸೂಚನೆ ನೀಡಲಾಗಿತ್ತು. ಆದರೂ, ಹೆಚ್ಚಿನ ಪ್ರಮಾಣದಲ್ಲಿ ಮಾಡದೇ ಪ್ರಗತಿ ಕುಂಠಿತವಾಗಿದೆ. ಕಾರಣ ಎಲ್ಲ ತಾಲೂಕಿನ ಸಹಾಯಕ ನಿರ್ದೇಶಕರು(ಪಂ.ರಾಜ್) ರವರನ್ನು ಬಳಸಿಕೊಂಡು ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಡಿಸೆಂಬರ ಅಂತ್ಯದವರೆಗೆ ಕರ ವಸೂಲಾತಿಯಲ್ಲಿ ಪ್ರತಿ ಶತ ಶೇ.100 ರಷ್ಟು ಪ್ರಗತಿ ಸಾಧಿಸಬೆಕು. ಇಲ್ಲವಾದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.ಪ್ರಾಪರ್ಟಿ ಪ್ರೊಪೈಲ್ ನವೀಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಇಒಗಳು ಅಪಡೇಟ್ ಮಾಡಬೇಕು. ಕೆಲವೊಂದು ಡಿಲೀಟ್ ಮಾಡಬೇಕಾದಲ್ಲಿ ತಾಲೂಕುವಾರು ಪ್ರಾಪರ್ಟಿ ಐಡಿ ನಂಬರ ಮೂಲಕ ಲಿಸ್ಟ್ ಮಾಡಿ ಜಿಲ್ಲಾ ಪಂಚಾಯತಗೆ ಕಳಿಸಬೇಕು. ಜೊತೆಗೆ ನೂತನ ಗ್ರಾಮ ಪಂಚಾಯತಿ ಕಟ್ಟಡ ಕಾಮಗಾರಿ ಪ್ರಗತಿ ಹಾಗೂ ಹಣ ಬಳಕೆ ಪ್ರಮಾಣ ಪತ್ರದ ಕುರಿತು ಸಂಬಂಧಿಸಿದ ತಾಲೂಕಿನ ಗ್ರಾಮ ಪಂಚಾಯತಿಗಳ ಮಾಹಿತಿ ಪಡೆದರು. ಸಕಾಲದಲ್ಲಿ ಬರುವ ಇ-ಸ್ವತ್ತು ವಿಲೇವಾರಿಗೆ ಸಂಬಂಧಿಸಿದಂತೆ ಎಲ್ಲ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ನಿಮ್ಮ ಹಂತದಲ್ಲಿ ಇದರ ಪ್ರಗತಿ ಪರಿಶೀಲನೆ ಮಾಡದೆ ಇರುವುದು ಕಂಡು ಬಂದಿದೆ. ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಪ್ರಗತಿ ಸಾಧಿಸುವಂತೆ ಸೂಚಿಸಿದರು.15ನೇ ಹಣಕಾಸು ವೆಚ್ಚದ ಕುರಿತು ಮಾತನಾಡಿದ ಜಿಪಂ ಸಿಇಒ ರಾಹುಲ್ ಶಿಂಧೆ, ಎಲ್ಲ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಸಹಾಯಕ ನಿರ್ದೇಶಕರು(ಪಂ.ರಾಜ್)ರವರು ಗ್ರಾಮ ಪಂಚಾಯತಿಗಳಲ್ಲಿ ಕಾಮಗಾರಿಗಳು ಆದ ನಂತರ ಬಾಕಿ ಇರುವ 15ನೇ ಹಣಕಾಸು ಬಿಲ್ಲುಗಳನ್ನು ಕೂಡಲೇ ವೆಚ್ಚ ಭರಿಸಲು ಸೂಚಿಸಿದರು.ಈ ಸಂದರ್ಭದಲ್ಲಿ ಜಿಪಂ ಯೋಜನಾ ನಿರ್ದೇಶಕ (ಡಿಆರ್‌ಡಿಎ) ರವಿ ಬಂಗಾರೆಪ್ಪನವರ, ಉಪಕಾರ್ಯದರ್ಶಿ(ಆಡಳಿತ) ಬಸವರಾಜ ಹೆಗ್ಗನಾಯಕ್, ಉಪಕಾರ್ಯದರ್ಶಿ(ಅಭಿವೃದ್ಧಿ) ಬಸವರಾಜ ಅಡವಿಮಠ, ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ ಸೇರಿ ಜಿಲ್ಲೆಯ ಎಲ್ಲ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ ಹಾಗೂ ಪಂಚಾಯತ್ ರಾಜ್ ಹಾಗೂ ಜಿಪಂ ಸಿಬ್ಬಂದಿ ಉಪಸ್ಥಿತರಿದ್ದರು.-------------------------------ಬಾಕ್ಸ್ಸ್ವಚ್ಛವಾಹಿನಿ ಮೂಲಕ ಜಾಗೃತಿ ಮೂಡಿಸಿ
ಸ್ವಚ್ಛ ಭಾರತ ಮಿಷನ್ ಯೋಜನೆಯ ಘನ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಪ್ರತಿ ದಿನ ಕಸ ನಿರ್ವಹಣೆ ಕಾರ್ಯ ಪ್ರಗತಿಯಲ್ಲಿರುಬೇಕು. ದ್ರವ ತ್ಯಾಜ್ಯ ನಿರ್ವಹಣೆ ಘಟಕಗಳ ಸ್ಥಗಿತಗೊಂಡ ಕಾಮಗಾರಿಗಳನ್ನು ಪ್ರಾರಂಭ ಮಾಡಿ ಶೀಘ್ರ ಮುಗಿಸಬೇಕು. ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಲ ತ್ಯಾಜ್ಯ ನಿರ್ವಹಣೆ ಘಟಕ ಕಾಮಗಾರಿ ಮುಕ್ತಾಯವಾಗಿದ್ದು, ತ್ವರಿತ ಪ್ರಾರಂಭಿಸಲು ಸಂಬಂಧಿಸಿದ ಅಧಿಕಾರಿಗೆ ಸೂಚಿಸಿದರು. ಪ್ರಸಕ್ತ ಸಾಲಿನಲ್ಲಿ ವೈಯಕ್ತಿಕ ಶೌಚಾಲಯದ ಬೇಡಿಕೆ ಇದ್ದಲ್ಲಿ ಆನ್‌ಲೈನ್ ಪೋರ್ಟಲ್‌ನಲ್ಲಿ ಅರ್ಜಿ ಹಾಕಲು ಅವಕಾಶ ಕಲ್ಪಿಸಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇದರ ಕುರಿತು ಸ್ವಚ್ಛ ವಾಹಿನಿ ಮೂಲಕ ವ್ಯಾಪಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಎಲ್ಲ ತಾಪಂ ಇಒಗಳಿಗೆ ಸಿಇಒ ಸೂಚಿಸಿದರು.