ಕನ್ನಡಪ್ರಭ ವಾರ್ತೆ ಮಂಗಳೂರು
ಅಲ್ಲದೆ, ಎಸ್‌ಟಿಪಿ ನಿರ್ವಹಣೆ ವೈಫಲ್ಯದಿಂದ ಒಳಚರಂಡಿ ತ್ಯಾಜ್ಯ ನೀರು ಸೇರಿ ನದಿಗಳು ಕಲುಷಿತ ಆಗುತ್ತಿರುವ ಬಗ್ಗೆಯೂ ಗಂಭೀರ ಚರ್ಚೆ ನಡೆದು, ಈ ಬಗ್ಗೆ ಆಡಳಿತ ಮತ್ತು ವಿಪಕ್ಷ ಸದಸ್ಯರ ತಂಡ ಎಸ್‌ಟಿಪಿಗಳ ಪರಿಶೀಲನೆ ನಡೆಸಿ ಕೊಳಚೆ ನೀರು ನದಿಗಳಿಗೆ ಸೇರುತ್ತಿರುವುದು ಕಂಡು ಬಂದರೆ ತನಿಖೆಗೆ ಆದೇಶಿಸುವುದಾಗಿ ಮೇಯರ್ ಭರವಸೆ ನೀಡಿದರು.
ಶುದ್ಧೀಕರಿಸದೆ ನೀರು ವಿತರಣೆ ಆರೋಪ: ಮೇಯರ್ ಮನೋಜ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಚಾರ ಪ್ರಸ್ತಾಪ ಮಾಡಿದ ವಿಪಕ್ಷ ಸದಸ್ಯ ಪ್ರವೀಣ್‌ಚಂದ್ರ ಆಳ್ವ, ರಾಜ್ಯದ 13 ಕಲುಷಿತ ನದಿಗಳಲ್ಲಿ ನೇತ್ರಾವತಿ ಕೂಡ ಸೇರಿರುವ ವರದಿಯನ್ನು ಉಲ್ಲೇಖಿಸಿ, ಕೊಳಚೆ ನೀರು ನದಿಗೆ ಹೋಗುತ್ತಿದೆ. ನಗರದಲ್ಲಿ ಶೇ.40ರಿಂದ ಶೇ.50ರಷ್ಟು ಪ್ರದೇಶಗಳಿಗೆ ಶುದ್ಧೀಕರಿಸದ ನೀರನ್ನು ಕೊಡುತ್ತಿಲ್ವಾ ಎಂದು ಪ್ರಶ್ನಿಸಿದರು.ಹಿರಿಯ ಸದಸ್ಯ ಶಶಿಧರ ಹೆಗ್ಡೆ ಮಾತನಾಡಿ, ಶುದ್ಧೀಕರಿಸಿದ ನೀರನ್ನು ಶೇ.50ರಷ್ಟು ಪ್ರದೇಶಗಳಿಗೆ ಮಾತ್ರ ನೀಡಲಾಗುತ್ತಿದೆ. ಉಳಿದ ಪ್ರದೇಶಗಳಿಗೆ ಯಾವುದೇ ಶುದ್ಧೀಕರಣ ಮಾಡದೆ ಕೊಡಲಾಗುತ್ತಿದೆ ಎಂದು ಆರೋಪಿಸಿದರು. ಸಂಸ್ಕರಣಾ ಘಟಕ ಇಲ್ಲದೆ ಕಚ್ಚಾ ನೀರನ್ನೇ ಕೊಡುವಂತಾಗಿದೆ ಎಂದು ವಿಪಕ್ಷ ನಾಯಕ ಅನಿಲ್ ಕುಮಾರ್ ಹೇಳಿದರು.
ಆಡಳಿತ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ತುಂಬೆಯಿಂದ ಎತ್ತುವ 80 ಎಂಎಲ್‌ಡಿ ನೀರನ್ನು ಶುದ್ಧೀಕರಿಸಿ ನಗರ ಪ್ರದೇಶಗಳಿಗೆ ವಿತರಿಸಲಾಗುತ್ತಿದೆ. ಉಳಿದ 80 ಎಂಎಲ್‌ಡಿ ನೀರನ್ನು ಬೆಂದೂರುವೆಲ್‌ನಲ್ಲಿ ಶುದ್ಧೀಕರಿಸಿ ಪಣಂಬೂರು ಸುರತ್ಕಲ್ ಭಾಗಕ್ಕೆ ನೀಡಲಾಗುತ್ತಿದೆ. ಕಚ್ಚಾ ನೀರನ್ನು ಎಲ್ಲೂ ಕೊಡುತ್ತಿಲ್ಲ. ರಾಜಕೀಯ ಕಾರಣಕ್ಕೆ ಸುಳ್ಳು ಮಾಹಿತಿ ನೀಡಬೇಡಿ ಎಂದರು. ಕ್ಲೋರಿನೇಟೆಡ್ ನೀರನ್ನೇ ನೀಡಲಾಗುತ್ತಿದೆ. ಹಾಗಾಗಿ ತನಿಖೆಯ ಅಗತ್ಯವಿಲ್ಲ ಎಂದು ಪ್ರೇಮಾನಂದ ಶೆಟ್ಟಿ ಹೇಳಿದರು. ಶುದ್ಧೀಕೃತ ನೀರನ್ನೇ ಕೊಡುವುದಾದರೆ ತನಿಖೆಗೆ ಭಯ ಏಕೆ ಎಂದು ವಿಪಕ್ಷ ಸದಸ್ಯರು ಪ್ರಶ್ನಿಸಿದರು.
ಪಚ್ಚನಾಡಿ ಎಸ್‌ಟಿಪಿ ನಿರ್ವಹಣೆಯ ಗುತ್ತಿಗೆದಾರರ ಟೆಂಡರ್ ರದ್ದು ಮಾಡಿ ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಡಳಿತ ಸದಸ್ಯೆ ಸಂಗೀತಾ ನಾಯಕ್ ಒತ್ತಾಯಿಸಿದರು.
ಆಡಳಿತ- ವಿಪಕ್ಷ ಸದಸ್ಯರು ಎಸ್‌ಟಿಪಿಗಳಿಗೆ ತೆರಳಿ ಪರಿಶೀಲನೆ ನಡೆಸಿದ ಬಳಿಕ ತನಿಖೆಯ ಅಗತ್ಯತೆ ಬಗ್ಗೆ ಗಂಭೀರ ಗಮನ ಹರಿಸುವುದಾಗಿ ಮೇಯರ್ ತಿಳಿಸಿದರು.