ಬಿಂದುಮಾಧವ ಮಣ್ಣೂರ
ಕನ್ನಡಪ್ರಭ ವಾರ್ತೆ ಅಫಜಲ್ಪುರತಾಲೂಕಿನಲ್ಲಿ ಬರದಿಂದ ಈಗಾಗಲೇ ಹತ್ತಿ ಬೆಳೆ ಇಳುವರಿ ಕಡಿಮೆಯಾಗಿರುವ ಜೊತೆಗೆ ಅದರ ಬೆಲೆಯೂ ಕುಸಿತ ಕಂಡಿದ್ದು ರೈತರಿಗೆ ಒಂದೇ ಸಮಯಕ್ಕೆ ಎರಡು ಸಂಕಷ್ಟದಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.
ತಿಂಗಳ ಹಿಂದೆ ಹತ್ತಿ ಬೆಳೆಗೆ ಪ್ರತಿ ಕ್ವಿಂಟಲ್‌ಗೆ ₹10 ಸಾವಿರದಿಂದ ₹12 ಸಾವಿರ ಬೆಲೆ ಇತ್ತು. ಹತ್ತಿ ಬಿಡಿಸಿ ಮನೆಗೆ ತರುವ ಹೊತ್ತಿಗೆ ₹7 ಸಾವಿರದ ಆಸುಪಾಸು ಮಾರಾಟವಾಗುತ್ತಿತ್ತು. ಈಗ ಅದರ ಬೆಲೆ ₹5 ಸಾವಿರದಿಂದ ₹6 ಸಾವಿರ ಆಗಿದೆ. ಕೂಲಿ ಕಾರ್ಮಿಕರಿಗೆ ಹೆಚ್ಚಿನ ಹಣ ನೀಡಿ ಹತ್ತಿ ಬಿಡಿಸಿ ಮನೆಗೆ ತಂದಿದ್ದ ರೈತರಿಗೆ ಇದು ನುಂಗಲಾರದ ತುತ್ತಾಗಿದೆ.ಪ್ರತಿ ವರ್ಷ ಹತ್ತಿ ಬೆಳೆ ಬೆಳೆಯುವುದರಲ್ಲಿ ತಾಲೂಕಿನಲ್ಲಿ ಮುಂಚೂಣಿಯಲ್ಲಿದೆ. ತಾಲೂಕಿನಲ್ಲಿ ಕಳೆದ ಬಾರಿ 8950 ಹೆಕ್ಟೇರ್ ಪ್ರದೇಶದಲ್ಲಿ ರೈತರು ಹತ್ತಿ ಬೆಳೆದಿದ್ದರು. ಮಳೆ ಕೂಡ ಚೆನ್ನಾಗಿ ಆಗಿದ್ದರಿಂದ ಇಳುವರಿ ಚೆನ್ನಾಗಿ ಬಂದಿತ್ತು.ಇದರ ಜೊತೆಗೆ ಬೆಲೆ ಕೂಡ ಉತ್ತಮ ಸಿಕ್ಕ ಕಾರಣಕ್ಕೆ ರೈತರು ಉತ್ತಮ ಲಾಭ ಪಡೆದಿದ್ದರು. ಈ ಸಲವೂ ಕಳೆದ ಹೆಚ್ಚಿನ ಬೆಲೆ ಸಿಗುತ್ತದೆ ಎಂದು ತಾಲೂಕಿನ ರೈತರು 13306 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆದಿದ್ದಾರೆ. ಆದರೆ ರೈತರಿಗೆ ಮಳೆ ಬಾರದ ಕಾರಣಕ್ಕೆ ಬರದ ಪರಿಣಾಮ ಎದುರಾಗಿದೆ.
ಈಗಾಗಲೇ ಇಳುವರಿ ಸಹ ಕಡಿಮೆಯಾಗಿದೆ. ಹತ್ತಿ ಬೆಳೆಗೆ ಕಳೆದ ಕೆಲವು ವರ್ಷದಿಂದ ಕಾಣಿಸಿಕೊಂಡ ಪಿಂಕ್ ಬಾಲ್ ವಾರ್ಮ್ ಎನ್ನುವ ರೋಗ, ಬೀಜ ಮತ್ತು ಔಷಧಿಯ ಗುಣಮಟ್ಟದಲ್ಲಿ ಕೊರತೆಯಿಂದ ಪ್ರತಿ ಎಕರೆಗೆ ಸರಾಸರಿ 5ರಿಂದ 10 ಕ್ವಿಂಟಲ್‌ಗೆ ಇಳಿಕೆಯಾಗಿದೆ. ದುಬಾರಿ ಬೀಜ, ಗೊಬ್ಬರ, ಬಿತ್ತನೆ ವೆಚ್ಚ ಹಾಗೂ ಹತ್ತಿ ಬಿಡಿಸುವ ಕೂಲಿ ಸೇರಿ ಪ್ರತಿ ಎಕರೆಗೆ ₹25 ಸಾವಿರಕ್ಕೂ ಅಧಿಕ ಖರ್ಚು ಮಾಡಿರುವ ರೈತರಿಗೆ ಹಾಕಿದ ಹಣ ಬಂದರೆ ಸಾಕು ಎನ್ನುವಂತಾಗಿದೆ. ಸರ್ಕಾರ ಹೆಚ್ಚಿನ ದರದಲ್ಲಿ ರೈತರು ಬೆಳೆದ ಹತ್ತಿ ಬೆಳೆ ಖರೀದಿಗೆ ಮುಂದಾಗಬೇಕು ಎನ್ನುವುದು ರೈತರ ಆಗ್ರಹವಾಗಿದೆ.ಹಳದಿ ಬಣ್ಣಕ್ಕೆ ತಿರುಗುವ ಭೀತಿ:
ಭರವಸೆಯಲ್ಲಿದ್ದ ರೈತರಿಗೆ ಹತ್ತಿ ಬೆಲೆ ತೀವ್ರ ಇಳಿಕೆಯಾಗಿರುವುದು ನಿದ್ದೆಗೆಡಿಸಿದೆ. ಇನ್ನೂ ದರ ಬರಬಹುದು ಎಂದು ಮನೆಯಲ್ಲಿಟ್ಟುಕೊಂಡರೆ ಹಳದಿ ಬಣ್ಣಕ್ಕೆ ತಿರುಗಿ ಹತ್ತಿಯ ಗುಣಮಟ್ಟ ಕೆಡುತ್ತಿದೆ. ಹೀಗಾಗಿ ಹತ್ತಿ ಬೆಳೆಗಾರರು ಆತಂಕದಲ್ಲೇ ದಿನ ದೂಡುವಂತಾಗಿದೆ.ಕಳೆದ ಬಾರಿ ಹತ್ತಿ ಬೆಲೆ ಕ್ವಿಂಟಲ್‌ಗೆ ₹9 ಸಾವಿರದಿಂದ ₹14 ಸಾವಿರ ಇತ್ತು. ಬೆಲೆ ಕುಸಿತ ಕಂಡಿರಲಿಲ್ಲ.ಈ ಬಾರಿ ₹ 6 ಸಾವಿರ ಆಸುಪಾಸಿನಲ್ಲಿ ಹತ್ತಿ ಮಾರಾಟಾವಾಗುತ್ತಿದೆ. ನಮ್ಮ ಸಂಕಷ್ಟ ಕೇಳೋರೆ ಇಲ್ಲದಂತಾಗಿದೆ ಎಂದು ಮಲ್ಲಪ್ಪ ಬಿಜಾಪುರ, ದಯಾನಂದನಗರ ಗ್ರಾಮದ ರೈತ ಬೇಸರ ವ್ಯಕ್ತಪಡಿಸಿದ್ದಾರೆ.