ಪೊನ್ನಸಮುದ್ರದಲ್ಲಿ ಅನೈರ್ಮಲ್ಯ, ಡೆಂಘೀ ಆತಂಕ

KannadaprabhaNewsNetwork |  
Published : Aug 08, 2024, 01:30 AM ISTUpdated : Aug 08, 2024, 01:31 AM IST
ಫೋಟೋ 7ಪಿವಿಡಿ1ಪಾವಗಡ,ಡೆಂಘೀ ವ್ಯಾಪಕವಾಗುತ್ತಿರುವ ಹಿನ್ನಲೆ,ಚರಂಡಿ ನೈರ್ಮಲ್ಯ ಶುಚಿತ್ವ ಕಾಪಾಡುವಂತೆ ಭಾರತೀಯ ಪರಿವರ್ತನೆ ಸಂಘಟನೆ ಹಾಗೂ ಬಿಪಿಎಸ್‌ ವತಿಯಿಂದ ತಹಸೀಲ್ದಾರ್‌ ವರದರಾಜ್‌ರಿಗೆ ಮನವಿ ಸಲ್ಲಿಸಲಾಯಿತು.  | Kannada Prabha

ಸಾರಾಂಶ

ಪೊನ್ನಸಮುದ್ರದಲ್ಲಿ ಅನೈರ್ಮಲ್ಯ, ಡೆಂಘೀ ಆತಂಕ

ಕನ್ನಡಪ್ರಭವಾರ್ತೆ ಪಾವಗಡ

ರಾಜ್ಯದಲ್ಲಿ ಡೆಂಘೀ ಜ್ವರದ ಆತಂಕ ಎದುರಾಗಿದ್ದು ಈ ಬಗ್ಗೆ ತಡೆಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮವಹಿಸಿ ಆದೇಶ ಜಾರಿಪಡಿಸಿದೆ. ಆದರೆ ತಾಪಂ ಹಾಗೂ ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ತಾಲೂಕಿನ ಪೊನ್ನಸಮುದ್ರ ಗ್ರಾಮದ ದಲಿತ ಹಾಗೂ ಗೊಲ್ಲರಹಟ್ಟಿಯಲ್ಲಿ ಸೊಳ್ಳೆ ಹಾಗೂ ಕ್ರೀಮಿ ಕೀಟಗಳ ಹಾವಳಿ ಸೇರಿದಂತೆ ಅನೈರ್ಮಲ್ಯ ತಾಂಡವಾಡುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಕುರಿತು ತಹಸೀಲ್ದಾರ್‌ ಅವರಿಗೆ ದೂರು ನೀಡಿರುವ ಗ್ರಾಮಸ್ಥರು, ತಾಲೂಕಿನ ವೈ.ಎನ್.ಹೊಸಕೋಟೆ ಹೋಬಳಿ, ಪೊನ್ನಸಮುದ್ರ ಗ್ರಾಮದ ದಲಿತರ ಕಾಲೋನಿ ಮತ್ತು ಗೊಲ್ಲರಹಟ್ಟಿಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೇ ಮನೆಯ ಬಚ್ಚಲು ಹಾಗೂ ಮಳೆ ನೀರು ರಸ್ತೆ ಹಾಗೂ ಮನೆಗಳ ಮುಂದೆ ಹೆಚ್ಚು ಶೇಖರಣೆಯಾಗುವ ಕಾರಣ ಸೊಳ್ಳೆ ಮತ್ತು ಕ್ರೀಮಿಕೀಟಗಳ ಹಾವಳಿ ಹೆಚ್ಚಾಗಿದೆ.ಇದರಿಂದ ನಾನಾ ರೀತಿಯ ಕಾಯಿಲೆ ವ್ಯಾಪಿಸಿಕೊಳ್ಳುತ್ತಿದ್ದು ಆನೇಕ ಮಂದಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ದೂರಿದ್ದಾರೆ.

ಚರಂಡಿ ವ್ಯವಸ್ಥೆ ಇಲ್ಲ

ತಾಲೂಕಿನ ಪೊನ್ನಸಮುದ್ರ ಗ್ರಾಮದಲ್ಲಿ ನೂರಾರು ದಲಿತ ಕುಟುಂಬಗಳು ವಾಸವಾಗಿದ್ದು ಇವರು ನೆಲೆಸಿದ್ದ ಈ ಪ್ರದೇಶದಲ್ಲಿ ಸೂಕ್ತವಾದ ಚರಂಡಿ ವ್ಯವಸ್ಥೆ ಇಲ್ಲ.ತುಂಬಾ ಹಳೆಯ ಕಾಲದ ಚರಂಡಿ ಇದ್ದು ಆನೇಕ ವರ್ಷಗಳಿಂದ ದುರಸ್ತಿ ಕಾಣದೇ ಚರಂಡಿ ಬಹಳಷ್ಟು ಕೊಳಚೆಯಿಂದ ಆವರಿಸಿಕೊಂಡಿದೆ. ಹಂದಿ ನಾಯಿ ಹಾಗೂ ಸೊಳ್ಳೆ ಮತ್ತು ಕ್ರೀಮಿಕೀಟದ ಆವಾಸ ಸ್ಥಾನವಾಗಿದ್ದು, ಇಲ್ಲಿನ ಜನರು ವಾಸಿಸಲು ಹಾಗೂ ಆರೋಗ್ಯದ ಮೇಲೆ ಬಹಳಷ್ಟು ತೊಂದರೆ ಬೀರುತ್ತಿದೆ. ಅಲ್ಲದೇ ಇತ್ತೀಚಿಗೆ ಚಿಕಿತ್ಸೆ ಫಲಕಾರಿಯಾಗದೇ ಅನಾರೋಗ್ಯಕ್ಕೆ ತುತ್ತಾದ ನಾಲ್ಕು ಮಂದಿ ಮೃತರಾಗಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ಎಚ್ಚರಿಕೆ

ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಪೊನ್ನಸಮುದ್ರ ಗ್ರಾಮದ ದಲಿತ ಹಾಗೂ ಗೊಲ್ಲರಹಟ್ಟಿಯಲ್ಲಿ ನೈರ್ಮಲ್ಯ ಕಾಪಾಡುವ ಮೂಲಕ ಅಲ್ಲಿನ ಜನತೆಯ ಆರೋಗ್ಯ ಹಾಗೂ ನೆಮ್ಮದಿಯಾಗಿ ವಾಸಿಸಲು ಅವಕಾಶ ಕಲ್ಪಿಸಬೇಕು. ಈ ಬಗ್ಗೆ ಕ್ರಮವಹಿಸದಿದ್ದರೆ ಜಿಪಂ ಸಿಇಒ ಹಾಗೂ ಜಿಲ್ಲಾಧಿಕಾರಿಯ ಗಮನಕ್ಕೆ ತರಲಿದ್ದೇವೆ. ಅದಕ್ಕೂ ಬೆಲೆ ನೀಡದೆ ಇದ್ದರೆ ತಾಲೂಕು ಭಾರತೀಯ ಪರಿವರ್ತನ ಸಂಘ, ಬಿಪಿಎಸ್‌ ವತಿಯಿಂದ ಬೃಹತ್ ಹೋರಾಟ ಹಮ್ಮಿಕೊಳ್ಳುವುದಾಗಿ ವಕೀಲ ಹರಿರಾಮ್‌ ಹಾಗೂ ಪರಿವರ್ತನ ಸಂಘಟನೆಯ ಅಧ್ಯಕ್ಷ ಕೆಂಚರಾಯಪ್ಪ ಎಚ್ಚರಿಕೆ ನೀಡಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ