
ಕನ್ನಡಪ್ರಭ ವಾರ್ತೆ ಚನ್ನಗಿರಿ
ಪುರಸಭೆ ಸದಸ್ಯ ಕಾಫಿಪುಡಿ ಶಿವಾಜಿ ರಾವ್ ಮಾತನಾಡಿ, ಪಟ್ಟಣದಲ್ಲಿ ಸಂಗ್ರಹವಾಗುವ ಘನತ್ಯಾಜ್ಯವನ್ನು ವಿಲೇವಾರಿ ಮಾಡುವ ಘಟಕ, ಹಿಂದೂ ರುದ್ರಭೂಮಿ ಹಾಗೂ ನೂರಾರು ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಈ ರಸ್ತೆಯ ಮಧ್ಯಭಾಗದಲ್ಲಿ ಬೈಪಾಸ್ ರಸ್ತೆ ಹಾದು ಹೋಗಲಿದೆ. ಬೈ ಪಾಸ್ ರಸ್ತೆ ನಿರ್ಮಿಸಿದರೆ ಕಸ ವಿಲೇವಾರಿ ಘಟಕ, ರುದ್ರಭೂಮಿ ಹಾಗೂ ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಸಂಪರ್ಕ ಕಡಿತಗೊಳ್ಳಲಿದೆ ಎಂದು ಆಕ್ಷೇಪಿಸಿದರು.
ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಅಭಿಯಂತರರನ್ನು ವಿಚಾರಿಸಿದರೆ, ನಮಗೆ ನೀಡಿರುವ ರಸ್ತೆಯ ಪ್ಲಾನ್‌ನಲ್ಲಿ ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಫ್ಲೈ ಓವರ್ (ಸೇತುವೆ) ಆಗಲಿ, ಅಂಡರ್ ಪಾಸ್ ರಸ್ತೆ ನಿರ್ಮಾಣ ಮಾಡಲು ಅವಕಾಶ ಇಲ್ಲ ಎಂದು ಹೇಳುತ್ತಿದ್ದಾರೆ. ಈ ರೀತಿಯ ಅವೈಜ್ಞಾನಿಕ ರಸ್ತೆ ನಿರ್ಮಾಣ ಮಾಡಲು ನಾವು ಬಿಡುವುದಿಲ್ಲ ಎಂದು ವಿರೋಧಿಸಿದರು.ನೂರಾರು ವರ್ಷಗಳಿಂದ ಈ ಭಾಗದ ಜನರು ಇದೇ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಬೈ ಪಾಸ್ ರಸ್ತೆ ನಿರ್ಮಾಣ ವೇಳೆ ಈ ರಸ್ತೆಯ ಮಧ್ಯಭಾಗದಲ್ಲಿ ಸುಮಾರು 100 ಅಡಿ ಆಳದ ಗುಂಡಿ ತೆಗೆದು ರಸ್ತೆ ನಿರ್ಮಾಣ ಮಾಡುವುದರಿಂದ ಈ ಭಾಗದ ಜನರ ಓಡಾಟಕ್ಕೆ ತೊಂದರೆಯಾಗಲಿದೆ. ಈ ಸಂಪರ್ಕ ರಸ್ತೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಿ. ಅಲ್ಲಿಯವರೆಗೂ ಬೈ ಪಾಸ್ ರಸ್ತೆ ಕಾಮಗಾರಿ ಮಾಡಲು ಬಿಡುವುದಿಲ್ಲ ಎಂದರು.
ಪ್ರತಿಭಟನಾ ಸ್ಥಳಕ್ಕೆ ಶಾಸಕ ಬಸವರಾಜು ವಿ. ಶಿವಗಂಗಾ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಈ ಭಾಗದ ಜನರು ಬೈ ಪಾಸ್ ರಸ್ತೆ ನಿರ್ಮಾಣದಿಂದ ಆಗುವ ತೊಂದರೆ ಬಗ್ಗೆ ನನ್ನ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ್ದು, ಸಂಪರ್ಕ ರಸ್ತೆಗೆ ಪರ್ಯಾಯ ವ್ಯವಸ್ಥೆ ಮಾಡುವವರೆಗೊ ಬೈ ಪಾಸ್ ರಸ್ತೆ ಕಾಮಗಾರಿ ಸ್ಥಗಿತಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.