ಹರಿಹರದಲ್ಲಿ ಅವೈಜ್ಞಾನಿಕ ಸಿಸಿ ಚರಂಡಿ ಕಾಮಗಾರಿ: ತರಾಟೆ

KannadaprabhaNewsNetwork |  
Published : Aug 13, 2026, 02:00 AM IST
10 HRR 02ಹರಿಹರದ ಬಸ್ ನಿಲ್ದಾಣ ರಸ್ತೆಯಲ್ಲಿ ಕೈಗೊಂಡಿರುವ ಸಿಸಿ ಚರಂಡಿ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಿ.ಡಿ.ವೀರೇಶ್ ಕುಮಾರ್ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ಹರಿಹರ ನಗರಸಭೆ ಪಕ್ಕದ ಬಸ್ ನಿಲ್ದಾಣ ರಸ್ತೆಯಲ್ಲಿ ಸಿಸಿ ಚರಂಡಿ ಕಾಮಗಾರಿಯಲ್ಲಿನ ಲೋಪಗಳನ್ನು ಕಂಡು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಿ.ಡಿ.ವೀರೇಶ್ ಕುಮಾರ್ ಅವರು ನಗರಸಭೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಪ್ರಸಂಗ ಸೋಮವಾರ ನಡೆಯಿತು.

- ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಿ.ಡಿ.ವೀರೇಶ್ ಕುಮಾರ್ ಪರಿಶೀಲನೆ

- - -

- ನಗರಸಭೆ ಪೌರಾಯುಕ್ತೆ ವಿ.ಈರಮ್ಮ, ಎಇಇ ಶ್ರೀನಿವಾಸ್, ಸಹಾಯಕ ಎಂಜಿನಿಯರ್ ಪ್ರಕಾಶ್‌ ಕಾರ್ಯವೈಖರಿಗೆ ಅಸಮಾಧಾನ

- ಕರ್ನಾಟಕ ಜನಪರ ಸಂಘ, ಪರಿಸರ ಸಂರಕ್ಷಣಾ ವೇದಿಕೆ ಸಲ್ಲಿಸಿದ್ದ ದೂರುಗಳ ಮೇರೆಗೆ ಸ್ಥಳ ಪರಿಶೀಲನೆ

- - -

ಕನ್ನಡಪ್ರಭ ವಾರ್ತೆ ಹರಿಹರ

ನಗರಸಭೆ ಪಕ್ಕದ ಬಸ್ ನಿಲ್ದಾಣ ರಸ್ತೆಯಲ್ಲಿ ಸಿಸಿ ಚರಂಡಿ ಕಾಮಗಾರಿಯಲ್ಲಿನ ಲೋಪಗಳನ್ನು ಕಂಡು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಿ.ಡಿ.ವೀರೇಶ್ ಕುಮಾರ್ ಅವರು ನಗರಸಭೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಪ್ರಸಂಗ ಸೋಮವಾರ ನಡೆಯಿತು.

ಕರ್ನಾಟಕ ಜನಪರ ಸಂಘ ಹಾಗೂ ಪರಿಸರ ಸಂರಕ್ಷಣಾ ವೇದಿಕೆಯಿಂದ ಕಳೆದ ವಾರ ಸಲ್ಲಿಸಿದ್ದ ದೂರು ಆಧರಿಸಿ ಭೇಟಿ ನೀಡಿದ ಅವರು, ರಸ್ತೆ ಪಕ್ಕದಲ್ಲಿ ಇನ್ನೂ ಆರೇಳು ಅಡಿಗಳವರೆಗೆ ಜಾಗವಿದೆ, ಅಲ್ಲಿಂದಲೇ ಚರಂಡಿ ನಿರ್ಮಿಸಬೇಕಿತ್ತು. ನೀವು ಮಾಡಿದ ತಪ್ಪಿನಿಂದ ರಸ್ತೆ ಪಕ್ಕದಲ್ಲಿ ಫುಟ್ ಪಾತ್ ಇತರೆ ಸೌಲಭ್ಯಕ್ಕೆ ತೊಡಕಾಯಿತಲ್ಲವೆ ಎಂದು ಪೌರಾಯುಕ್ತೆ ವಿ.ಈರಮ್ಮ, ಎಇಇ ಶ್ರೀನಿವಾಸ್, ಸಹಾಯಕ ಎಂಜಿನಿಯರ್ ಪ್ರಕಾಶ್ ಅವರಿಗೆ ಪ್ರಶ್ನಿಸಿದರು.

ಇಂತಹ ಕಾಮಗಾರಿಗಳನ್ನು ಆರಂಭಿಸುವ ಮುನ್ನ ಸ್ಥಳ ಪರಿಶೀಲನೆ ನಡೆಸಬೇಕು. ಚರಂಡಿ ಎಲ್ಲಿ ನಿರ್ಮಿಸಬೇಕೆಂದು ಜಾಗ ಗುರುತಿಸಬೇಕು. ನೀವು ಮಾಡುವ ನಿರ್ಲಕ್ಷ್ಯದಿಂದ ಎಷ್ಟೊಂದು ತೊಂದರೆ ಆಗುತ್ತಿದೆ ನೋಡಿ ಎಂದು ತರಾಟೆ ತೆಗದುಕೊಂಡು, ಇಲ್ಲಿರುವ ಮರ ತೆಗೆಸಿ ಡೊಂಕಾಗಿರುವ ಚರಂಡಿಯನ್ನು ನೇರವಾಗಿ ನಿರ್ಮಿಸಿ ಎಂದು ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣಾ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ಬಿ.ಮಗ್ದುಮ್ ಮಾತನಾಡಿ, ನಿತ್ಯ 1500 ಬಸ್‌, ನೂರಾರು ಕಾರು, ಆಟೋ, 5000ಕ್ಕಿಂತಲೂ ಅಧಿಕ ಪ್ರಯಾಣಿಕರು ಸಂಚರಿಸುವ ಈ ರಸ್ತೆಯನ್ನು ಹೇಗೆ ಸುರಕ್ಷಿತವಾಗಿಸಬೇಕು ಎಂಬ ಕನಿಷ್ಠ ಕಾಳಜಿಯೂ ನಗರಸಭೆ ಎಂಜಿನಿಯರ್‌ಗಳಿಗೆ ಇಲ್ಲ. ಈ ರಸ್ತೆ ವಾಣಿಜ್ಯ ರಸ್ತೆ ಆಗಿರುವುದರಿಂದ ಇಲ್ಲಿ ವಾಹನಗಳ ಪಾರ್ಕಿಂಗ್, ಪಾದಚಾರಿ ಮಾರ್ಗ ಎಲ್ಲಿ ನಿರ್ಮಿಸುತ್ತೀರಿ? ನಗರದಲ್ಲಿ ರಸ್ತೆ ಹಾಗೂ ಚರಂಡಿಗಳನ್ನು ಯೋಜನಾಬದ್ಧವಾಗಿ ರೂಪಿಸುವ ಕಾಳಜಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಇರಬೇಕಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ಜನಪರ ಸಂಘದ ಅಧ್ಯಕ್ಷ ಮೊಹಮ್ಮದ್ ಮಜಹರ್ ಮಾತನಾಡಿ, ಇಂತಹದ್ದೆ ಅವೈಜ್ಞಾನಿಕ ಕಾಮಗಾರಿಯನ್ನು ಶೋಭಾ ಟಾಕೀಸ್ ರಸ್ತೆ ಚರಂಡಿ ನಿರ್ಮಿಸುವಾಗಲೂ ಮಾಡುತ್ತಿದ್ದರು, ಒತ್ತುವರಿ ತೆರವುಗೊಳಿಸಿ ಎಂದು ಪಟ್ಟು ಹಿಡಿದಾಗ ನಗರಸಭೆ ಎಂಜಿನಿಯರ್‌ಗಳು ಒತ್ತುವರಿ ತೆರವುಗೊಳಿಸಿ ಕಾಮಗಾರಿ ಮುಂದುವರಿಸಿದರು.

ಅನುದಾನ ಇದೆ, ಹೇಗೋ ಕಾಮಗಾರಿ ನಡೆಸಿ ಬಿಲ್ ಪಾವತಿಸೋಣ ಎಂಬ ಮನೋಭಾವದಿಂದ ಹೊರಬರಬೇಕು. ನಗರದ ನಾಗರೀಕರ ತೆರಿಗೆಯ ಹಣ ಬಳಸಿ ಮಾಡುವ ಕಾಮಗಾರಿಗಳ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಕಾಳಜಿ ಇರಬೇಕು. ನಗರಸಭೆಯಿಂದ ಕೈಗೊಳ್ಳುವ ಕಾಮಗಾರಿಗಳ ಉಪಯುಕ್ತತೆ ಜನಮಾನಸದಲ್ಲಿ ಉಳಿಯುವಂತೆ ಇರಬೇಕೆಂದರು ಹೇಳಿದರು.

- - -

-10HRR02:

ಹರಿಹರದ ಬಸ್ ನಿಲ್ದಾಣ ರಸ್ತೆಯಲ್ಲಿ ಕೈಗೊಂಡಿರುವ ಸಿಸಿ ಚರಂಡಿ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಿ.ಡಿ. ವೀರೇಶ್ ಕುಮಾರ್ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಅವ್ಯವಸ್ಥೆ ವಿರುದ್ಧ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳೆವಿಮೆ ಪರಿಹಾರಕ್ಕಾಗಿ ಗುತ್ತಲದಲ್ಲಿ ಧರಣಿ ಕುಳಿತ ರೈತರು
ತುರ್ತಾಗಿ ಕಲಾಭವನ ತೆರೆಯುವಂತೆ ಕ್ರಮ: ಬೆಲ್ಲದ