ಜೋಗ ಗ್ರಾಮದಲ್ಲಿ ಅವೈಜ್ಞಾನಿಕ ಚೆಕ್‌ಡ್ಯಾಂ ನಿರ್ಮಾಣ: ಆರೋಪ

KannadaprabhaNewsNetwork |  
Published : May 25, 2026, 02:15 AM IST
ಸಂಡೂರು ತಾಲ್ಲೂಕಿನ ಜೋಗ ಗ್ರಾಮಸ್ಥರು ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ತಮ್ಮ ಗ್ರಾಮದ ಬಳಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿದ ಚೆಕ್‌ಡ್ಯಾಂನಿಂದ ಉಂಟಾಗುತ್ತಿರುವ ತೊಂದರೆಗಳನ್ನು ನಿವಾರಿಸುವಂತೆ ಕೋರಿ ಪಿಡಿಒ ಪ್ರಭುಗೌಡ ಅವರಿಗೆ ಮನವಿ ಪತ್ರ ಸಲ್ಲಿಸಿದರು. | Kannada Prabha

ಸಾರಾಂಶ

ಜೋಗ ಗ್ರಾಮವು ಸುತ್ತಲೂ ಹಳ್ಳಕೊಳ್ಳಗಳಿಂದ ಕೂಡಿದ ಗಣಿ ಬಾಧಿತ ಗ್ರಾಮವಾಗಿದೆ.

ಸಂಡೂರು: ತಾಲೂಕಿನ ಜೋಗ ಗ್ರಾಮದ ಬಳಿಯಲ್ಲಿ ಅವೈಜ್ಞಾನಿಕವಾಗಿ ಚೆಕ್‌ಡ್ಯಾಂ ನಿರ್ಮಿಸಿರುವ ಕಾರಣ, ಗ್ರಾಮಸ್ಥರು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಆರೋಪಿಸಿದ್ದಾರೆ.ಚೆಕ್ ಡ್ಯಾಂನಲ್ಲಿ ಗ್ರಾಮದ ಚರಂಡಿಯ ಕೊಳಚೆ ನೀರು ಸಂಗ್ರಹವಾಗದಂತೆ ಮತ್ತು ಚೆಕ್‌ಡ್ಯಾಂನಲ್ಲಿನ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ರೈತ ಸಂಘದ ಮುಖಂಡರು ಭಾನುವಾರ ಗ್ರಾಮಕ್ಕೆ ಭೇಟಿ ನೀಡಿದ್ದ ಪಿಡಿಒ ಪ್ರಭುಗೌಡ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಪ್ರಾಂತ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಜೆ.ಎಂ. ಚನ್ನಬಸಯ್ಯ, ಜೋಗ ಗ್ರಾಮವು ಸುತ್ತಲೂ ಹಳ್ಳಕೊಳ್ಳಗಳಿಂದ ಕೂಡಿದ ಗಣಿ ಬಾಧಿತ ಗ್ರಾಮವಾಗಿದೆ. ಗ್ರಾಮಸ್ಥರು ಕೃಷಿ ಭೂಮಿಯ ಹಾಗೂ ಮಳೆ ನೀರು ಹರಿದು ಹೋಗುವುದನ್ನು ತಡೆದು ಅಂತರ್ಜಲ ಹೆಚ್ಚಿಸಲು ಚೆಕ್‌ಡ್ಯಾಂ ನಿರ್ಮಿಸಲು ಮನವಿ ಮಾಡಿಕೊಂಡಿದ್ದರು.

ಗ್ರಾಮಸ್ಥರ ಬೇಡಿಕೆಯಂತೆ ಚೆಕ್ ಡ್ಯಾಂ ನಿರ್ಮಾಣಕ್ಕೆ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ನಿಧಿಯಿಂದ ೧.೩೫ ಕೋಟಿ ಮಂಜೂರಾಗಿರುತ್ತದೆ. ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಜನರ ಮನವಿಯನ್ನು ತಿರಸ್ಕರಿಸಿ ಗ್ರಾಮಕ್ಕೆ ಒತ್ತಿಕೊಂಡು, ಚರಂಡಿ ಮತ್ತು ಅರಣ್ಯದಿಂದ ಹರಿದು ಬರುವ ನೀರಿಗೆ ಬೃಹತ್ತಾದ ಚೆಕ್‌ಡ್ಯಾಂ ನಿರ್ಮಿಸಿದ್ದಾರೆ. ನಾವು ಗ್ರಾಮದ ಬಳಿಯೇ ಚೆಕ್‌ಡ್ಯಾಂ ನಿರ್ಮಿಸುತ್ತಿದ್ದಾಗಲೆ, ಅದನ್ನು ವಿರೋಧಿಸಿದ್ದೆವು. ಗ್ರಾಮಕ್ಕೆ ಹತ್ತಿರದಲ್ಲಿ ಚೆಕ್‌ಡ್ಯಾಂ ನಿರ್ಮಿಸಿರುವುದರಿಂದ, ಚೆಕ್‌ಡ್ಯಾಂನಲ್ಲಿ ಗ್ರಾಮದ ಚರಂಡಿಯ ಕೊಳಚೆ ನೀರು ಸಂಗ್ರಹವಾಗಿ ಮಲೇರಿಯಾ, ಡೆಂಗಿ ಮುಂತಾದ ಸಾಂಕ್ರಾಮಿಕ ಕಾಯಿಲೆಗಳು ಹರಡಲು ಕಾರಣವಾಗುತ್ತದೆ ಎಂದು ವಿವರಿಸಿದ್ದೆವು. ನಮ್ಮ ಮಾತಿಗೆ ಅಧಿಕಾರಿಗಳು ಮನ್ನಣೆ ನೀಡದೆ ಗ್ರಾಮಕ್ಕೆ ಹೊಂದಿಕೊಂಡು ಚೆಕ್ ಡ್ಯಾಂ ನಿರ್ಮಿಸಿದ್ದಾರೆ.

ಶನಿವಾರ ಸುರಿದ ಮಳೆಯಿಂದ ಚೆಕ್ ಡ್ಯಾಂನ ನೀರು ಗ್ರಾಮದಲ್ಲಿನ ಜನ ವಸತಿ ಪ್ರದೇಶಗಳಿಗೆ ನುಗ್ಗಿದೆ. ಅಲ್ಲಿನ ಜನತೆ ರಾತ್ರಿ ಎಲ್ಲ ಸಂಕಷ್ಟವನ್ನು ಅನುಭವಿಸಿದ್ದಾರೆ. ಗ್ರಾಮದ ಸುತ್ತಲಿನ ಜಮೀನುಗಳಲ್ಲಿನ ಬೆಳೆ ಹಾನಿಗೊಳಗಾಗಿದೆ. ವಿಷ ಜಂತುಗಳ ಹಾವಳಿಯೂ ಜಾಸ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದ ಬಳಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಚೆಕ್‌ಡ್ಯಾಂನಲ್ಲಿ ಗ್ರಾಮದ ಚರಂಡಿ ನೀರು ಸಂಗ್ರಹವಾಗದಂತೆ ಕ್ರಮ ಕೈಗೊಳ್ಳಬೇಕು. ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ಎಸ್ ಕಾಲುಬಾ, ಎ.ಕೆ. ಆಂಜಿನೇಯ, ಎಚ್.ಹುಲುಗಪ್ಪ, ಗಿರಿಯಪ್ಪ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಟ್ಕಳದಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆ: ಹೊಳೆಯಾದ ಹೆದ್ದಾರಿಗೆ ತೋಡಿದ ರಸ್ತೆ
29ರಿಂದ ಶಾಲಾರಂಭ, ಪುಸ್ತಕಗಳು ಸಿದ್ಧ