ಅವಳಿ ನಗರದಲ್ಲಿ 'ಚಿಗರಿ' ಬಸ್ಸುಗಳಿಗೆ ಕಷ್ಟ - BRTS ವೈಫಲ್ಯದ ಕಥೆ - ಆಳೆತ್ತರಕ್ಕೆ ಮಳೆ ನೀರು

KannadaprabhaNewsNetwork |  
Published : Sep 19, 2024, 02:06 AM ISTUpdated : Sep 19, 2024, 06:57 AM IST
18ಡಿಡಬ್ಲೂಡಿ1ಅವೈಜ್ಞಾನಿಕವಾಗಿ ಬಿಆರ್‌ಟಿಎಸ್‌ ರಸ್ತೆ ನಿರ್ಮಾಣದ ಫಲವಾಗಿ ಧಾರವಾಡದ ಟೋಲ್‌ನಾಕಾ ಬಳಿ ಮಳೆ ಬಂದಾಗ ಹೊಂಡದಂತೆ ನಿಲ್ಲುವ ಮಳೆ ನೀರಲ್ಲಿ ಸಂಚರಿಸುವ ಕಾರು.  | Kannada Prabha

ಸಾರಾಂಶ

ಹುಬ್ಬಳ್ಳಿ-ಧಾರವಾಡದಲ್ಲಿ ಬಿಆರ್‌ಟಿಎಸ್‌ ಬಸ್‌ ಸೇವೆ ಆರಂಭದಲ್ಲಿ ಖುಷಿ ತಂದರೂ, ಅವೈಜ್ಞಾನಿಕ ಯೋಜನೆಯಿಂದಾಗಿ ಜನರಿಗೆ ಸಮಸ್ಯೆಯಾಗುತ್ತಿದೆ. ಮಳೆ ನೀರು ಸರಾಗವಾಗಿ ಹರಿದು ಹೋಗದಿರುವುದು, ಮಿಶ್ರ ವಾಹನ ಸಂಚಾರಕ್ಕೆ ತೊಂದರೆ, ವ್ಯಾಪಾರಗಳ ಮೇಲಿನ ಪರಿಣಾಮ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿವೆ.

ಬಸವರಾಜ ಹಿರೇಮಠ

ಧಾರವಾಡ:  ಹವಾನಿಯಂತ್ರಣ ವ್ಯವಸ್ಥೆ, ತನ್ನಿಂತಾನೆ ತೆರೆದುಕೊಳ್ಳುವ ಬಾಗಿಲುಗಳು, ಎದುರು-ಬದುರು ಯಾವುದೇ ವಾಹನಗಳಿಲ್ಲದೇ ಅಗಲವಾದ ರಸ್ತೆಯಲ್ಲಿ ರಾಜನಂತೆ ಸಂಚರಿಸಿ ಶೀಘ್ರ ಅವಳಿ ನಗರವನ್ನು ಸಂಪರ್ಕಿಸುವ ಬಿಆರ್‌ಟಿಎಸ್‌ ಬಸ್‌ಗಳ ಸೇವೆ ಹು-ಧಾ ಅವಳಿ ನಗರ ಜನತೆಗೆ ಆರಂಭದಲ್ಲಿ ನಿಜಕ್ಕೂ ಅಚ್ಚರಿ ಜತೆಗೆ ಖುಷಿ ತಂದಿತ್ತು. ಈ ಅಚ್ಚರಿ ಹಾಗೂ ಖುಷಿ ಬಹಳ ದಿನಗಳ ಕಾಲ ಉಳಿಯಲಿಲ್ಲ.

ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸಂಚರಿಸುವ ಚಿಗರಿ ಹೆಸರಿನಲ್ಲಿ ಸಂಚರಿಸುತ್ತಿರುವ ಚಿಗರಿ ಬಸ್‌ಗಳ ಸೇವೆ ಸ್ಮರಣೀಯವಾದರೂ, ಅವೈಜ್ಞಾನಿಕ ಯೋಜನೆ ಜಾರಿಯಿಂದಾಗಿ ಜನರಿಗೆ ಈ ವ್ಯವಸ್ಥೆ ಬೇಡವಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅವೈಜ್ಞಾನಿಕ ರಸ್ತೆ:

ಯಾವುದೇ ರಸ್ತೆ ನಿರ್ಮಾಣದ ವೇಳೆ ಸರಾಗವಾಗಿ ನೀರು ಹರಿದು ಹೋಗುವಂತೆ ನಿರ್ಮಿಸುವುದು ಸರಿಯಾದ ಕ್ರಮ. ಆದರೆ, ಸಾಧಾರಣವಾಗಿ ಒಂದೇ ಒಂದು ಮಳೆ ಬಂದರೆ ಸಾಕು ಧಾರವಾಡದ ಕೋರ್ಟ್‌ ವೃತ್ತ, ಎನ್‌ಟಿಟಿಎಫ್‌, ಟೋಲ್‌ ನಾಕಾ ಹಾಗೂ ಕೆಎಂಎಫ್‌ ಬಳಿ ಬಿಆರ್‌ಟಿಎಸ್‌ ರಸ್ತೆ ಹಾಗೂ ಎರಡೂ ಬದಿಯ ಮಿಶ್ರ ವಾಹನ ಸಂಚರಿಸುವ ರಸ್ತೆಯಲ್ಲಿ ಆಳೆತ್ತರಕ್ಕೆ ಮಳೆ ನೀರು ನಿಲ್ಲುತ್ತದೆ. ತೇಜಸ್ವಿನಗರ, ವಿದ್ಯಾಗಿರಿ, ಮಾಳಮಡ್ಡಿ, ಲಕ್ಷ್ಮಿಸಿಂಗನಕೇರಿ ಸೇರಿದಂತೆ ಎತ್ತರದ ಪ್ರದೇಶದಿಂದ ಹರಿದು ಬರುವ ನೀರು ಹರಿದು ಹೋಗುವಂತೆ ಯೋಜನೆ ರೂಪಿಸದ ಕಾರಣ ಬಿಆರ್‌ಟಿಎಸ್‌ ರಸ್ತೆಯಲ್ಲಿಯೇ ನಿಲ್ಲುತ್ತದೆ. ಮಳೆ ಬಂದಾಗ ಬರೀ ಬಿಆರ್‌ಟಿಎಸ್‌ ಪ್ರತ್ಯೇಕ ರಸ್ತೆ ಮಾತ್ರವಲ್ಲದೇ ಎಡ ಹಾಗೂ ಬಲ ಬದಿಯ ಮಿಶ್ರ ಪಥದ ರಸ್ತೆಗಳು ಬಂದ್‌ ಆಗುತ್ತವೆ. ಸಾಕಷ್ಟು ಬೈಕ್‌, ಕಾರುಗಳು ಮಳೆ ನೀರಿನಿಂದಾಗಿ ನಡು ಮಧ್ಯೆ ಸಿಲುಕಿ ಜಖಂ ಆಗಿವೆ. ದುರಂತ ಎಂದರೆ, ಬಿಆರ್‌ಟಿಎಸ್‌ ಯೋಜನೆ ಶುರುವಾದ ನಂತರ ಮೊದಲ ಮಳೆಗೆ ಕಿಟೆಲ್‌ ಕಾಲೇಜು ಎದುರಿನ ಸೆಂಟ್ರಲ್‌ ಪಾರ್ಕ್‌ ಮುಳುಗಿ ಕೋಟಿ ಗಟ್ಟಲೆ ಮೌಲ್ಯದ ಝೇರಾಕ್ಸ್‌ ಮಶಿನ್, ಕಂಪ್ಯೂಟರ್‌ ಹಾಗೂ ಜನರೇಟರ್‌ ಕೆಟ್ಟು ಹೋಗಿ ಅವಾಂತರ ಸೃಷ್ಟಿಯಾಗಿದ್ದು ಹಳೆಯ ಮಾತು. ಆರಂಭದಿಂದ ಹಿಡಿದು ಇಲ್ಲಿಯ ವರೆಗೂ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ನಡೆದ ಹಲವು ಹೋರಾಟಗಳು ಫಲ ನೀಡಲಿಲ್ಲ.

ಮಿಶ್ರ ವಾಹನಗಳ ಒದ್ದಾಟ:

ಬಿಆರ್‌ಟಿಎಸ್‌ ಬಸ್‌ ಸಂಚರಿಸಲು ಬೇಕಾದ ರಸ್ತೆ ಮಾರ್ಗ ಉತ್ತಮವಾಗಿಯೇ ಇದೆ. ಆದರೆ, ಪೂರಕವಾಗಿ ಮಿಶ್ರ ಪಥದಲ್ಲಿ ವಾಹನ ಸಂಚಾರಕ್ಕೂ ಅಷ್ಟೇ ಪ್ರಮಾಣದ, ವ್ಯವಸ್ಥಿತ, ಯೋಜನಾ ಬದ್ಧ ರಸ್ತೆ ನಿರ್ಮಿಸಬೇಕಿತ್ತು. ಇದಾಗದ ಹಿನ್ನೆಲೆಯಲ್ಲಿ ಮಿಶ್ರಪಥದಲ್ಲಿ ವಾಹನಗಳು ಸಂಚರಿಸುವ ರಸ್ತೆಯಲ್ಲಿ ಹುಬ್ಬಳ್ಳಿಯಿಂದ ಧಾರವಾಡ, ಧಾರವಾಡದಿಂದ ಹುಬ್ಬಳ್ಳಿಗೆ ಸಂಚರಿಸುವುದು ಅಯೋಮಯ. ಒಂದೂವರೆ ಗಂಟೆ ಸಮಯ ಬೇಕಾಗುತ್ತದೆ. ಎಲ್ಲೂ ಪಾರ್ಕಿಂಗ್‌ ಜಾಗವಿಲ್ಲದೇ ರಸ್ತೆಯಲ್ಲಿಯೇ ಬೈಕ್‌, ಕಾರುಗಳು ನಿಲ್ಲುತ್ತಿದ್ದು, ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆಯಾಗುತ್ತಿದೆ.

ಕಳೆದು ಹೋದ ವ್ಯಾಪಾರ:

ಹುಬ್ಬಳ್ಳಿ-ಧಾರವಾಡ ಮಧ್ಯೆ ರಸ್ತೆಯ ಎಡ ಮತ್ತು ಬಲ ಬದಿಯ ಜಾಗಕ್ಕೆ ದೊಡ್ಡ ಬೇಡಿಕೆ ಇತ್ತು. ಬಿಆರ್‌ಟಿಎಸ್‌ ಬಂದ ನಂತರ ಜಾಗದ ಬೆಲೆಯೂ ತೀವ್ರವಾಗಿ ಕುಸಿದಿದೆ. ಕಾರಣ, ಎರಡು ಬದಿ ಬರೀ ವಾಹನಗಳೇ ಸಂಚರಿಸುತ್ತವೆಯೇ ಹೊರತು ಜನರು ಅಡ್ಡಾಡದ, ವ್ಯಾಪಾರ ಮಾಡದ ಸ್ಥಿತಿ ಉಂಟಾಗಿದೆ. ಜತೆಗೆ ಬಿಆರ್‌ಟಿಎಸ್‌ ಬಸ್‌ಗಳು ಯಾವುದೇ ಹಿಂಜರಿಕೆ ಇಲ್ಲದೇ ಸಿಂಗ್ನಲ್‌ ಜಂಪ್‌ ಮಾಡಿ ಮುನ್ನುಗ್ಗುತ್ತವೆ. ಹೀಗಾಗಿ ಅನೇಕ ಅಪಘಾತಗಳಾಗಿದ್ದು ಸಾವು ನೋವು ಸಂಭವಿಸಿದೆ.

ಆರಂಭದಲ್ಲಿ ಹೊಸ ಬಸ್‌ಗಳು ಆಕರ್ಷಣೀಯವಾಗಿದ್ದರೂ ನಂತರದಲ್ಲಿ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವ, ಆಗಾಗ ಕೈ ಕೊಡುವ ಎಸಿಯಿಂದಾಗಿ ಉಸಿರಾಟಕ್ಕೆ ತೊಂದರೆ, ನಿಲ್ದಾಣಗಳ ಬಗ್ಗೆ ಮಾಹಿತಿ ನೀಡುವ ಸ್ಪೀಕರ್‌ಗಳು ಧ್ವನಿ ನಿಲ್ಲಿಸಿವೆ. ನಿಲ್ದಾಣಗಳು ಬಂದಾಗ ಒಮ್ಮೆಲೆ ನಿಲ್ಲುವ ಬ್ರೇಕ್‌ ವ್ಯವಸ್ಥೆಯಿಂದಾಗಿ ಬಸ್‌ನಲ್ಲಿದ್ದವರು ಕುಳಿತುಕೊಳ್ಳಲಾಗದ, ನಿಲ್ಲಲೂ ಆಗದೇ ಬೀಳುವ ಸ್ಥಿತಿ. ಹೀಗೆ ಹತ್ತು ಹಲವು ತೊಂದರೆಯಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ.

ಈ ಎಲ್ಲ ಕಾರಣಗಳಿಂದ ಧಾರವಾಡ ಧ್ವನಿ ಎಂಬ ಸಂಘಟನೆಯು ಅವಳಿ ನಗರದ ಸಂಘ-ಸಂಸ್ಥೆಗಳ ಹಾಗೂ ಬಿಆರ್‌ಟಿಎಸ್‌ನಿಂದಾಗಿ ತೊಂದರೆ ಅನುಭವಿಸಿದ ಜನರಿಂದ ನವಲೂರಿನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೂ ಪಾದಯಾತ್ರೆ ನಡೆಸಿ ಪ್ರತಿಭಟಿಸಿ ಬಹಳ ದಿನಗಳಾಗಿಲ್ಲ. ಬಿಆರ್‌ಟಿಎಸ್‌ಗೆ ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚರ್ಚೆಗಳು ನಡೆದಿದ್ದು, ದೇಶದ ವಿವಿಧೆಡೆ ವಿಫಲವಾಗಿರುವ ಈ ವ್ಯವಸ್ಥೆ ಅವಳಿ ನಗರದಲ್ಲೂ ವಿಫಲ ಆಗಲಿದೆ ಎಂಬ ಸಂಶಯ ಸಹ ಮೂಡಿದೆ.ಬಿಆರ್‌ಟಿಎಸ್‌ ಅವೈಜ್ಞಾನಿಕ ಯೋಜನೆಯಾಗಿದೆ. ಹೆಚ್ಚು ವಾಹನ, ಜನರು ಸಂಚರಿಸುವ ರಸ್ತೆ ಕಿರಿದಾಗಿದ್ದು, ಕೆಲವೇ ಕೆಲವು ಬಸ್‌ಗಳು ಸಂಚರಿಸುವ ಮಾರ್ಗ ಹಿರಿದಾಗಿದೆ. ಹೀಗಾಗಿ ಬಿಆರ್‌ಟಿಸ್‌ ಕಾರಿಡಾರ್‌ನಲ್ಲಿ ಎಲ್ಲ ವಾಹನಗಳಿಗೆ ಸಂಚರಿಸಲು ಅವಕಾಶ ಕೋರಿ ನಮ್ಮ ನೇತೃತ್ವದಲ್ಲಿ ಪಾದಯಾತ್ರೆ ನಡೆದಿತ್ತು. ಮಳೆಯಿಂದ ರಸ್ತೆ ಬಂದ್‌ ಆಗುತ್ತದೆ. ಇದಲ್ಲದೇ ಹಲವು ಸಮಸ್ಯೆಗಳಿಂದ ಬಿಆರ್‌ಟಿಎಸ್‌ ಯೋಜನೆ ಜನರಿಗೆ ತೊಂದರೆ ಮಾಡುತ್ತಿದ್ದು, ಈ ಬಗ್ಗೆ ಇನ್ನಷ್ಟು ಗಂಭೀರ ಚಿಂತನೆಗಳು ನಡೆಯಬೇಕು ಎಂದು ಧಾರವಾಡ ಧ್ವನಿ ಅಧ್ಯಕ್ಷ ಈಶ್ವರ ಶಿವಳ್ಳಿ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ