ಗದಗ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರತಿ ಮನೆ ಮನೆಗೆ ತಲುಪಿಸುವ ಕುಡಿವ ನೀರು ಪೂರೈಕೆಯ ಜೆಜೆಎಂ ಕಾಮಗಾರಿಯನ್ನು ತಾಲೂಕಿನ ಲಕ್ಕುಂಡಿ ಗ್ರಾಮದ 9ನೇ ವಾರ್ಡ್‌ನಲ್ಲಿ ಅವೈಜ್ಞಾನಿಕವಾಗಿ ನಡೆಸಿ ಕಾಮಗಾರಿ ಪೂರ್ಣಗೊಳಿಸುವ ಹಂತದಲ್ಲಿದ್ದ ಗುತ್ತಿಗೆದಾರರಿಗೆ ಖಡಕ್ ವಾರ್ನಿಂಗ್ ನೀಡುವ ಮೂಲಕ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ಭರತ್ ಎಚ್ಚರಿಕೆ ನೀಡಿದ ಪ್ರಸಂಗ ಬುಧವಾರ ನಡೆಯಿತು.
ಈ ಕುರಿತು ಜು. 14 ರಂದು 9ನೇ ವಾರ್ಡ್‌ನ ನಾಗರಿಕರು, ಜಿಪಂ ಸಿಇಒ ಎಸ್. ಭರತ್ ಅವರಿಗೆ ಮನವಿ ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿದ ಸಿಇಒ ಭರತ್, ಗ್ರಾಮದ 9ನೇ ವಾರ್ಡ್‌ಗೆ ಭೇಟಿ ನೀಡಿ ಜೆಜೆಎಂ ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿದರು.ಮಾರುತಿ ದೇವಸ್ಥಾನದಿಂದ ವಿರುಪಾಕ್ಷೇಶ್ವರ ದೇವಸ್ಥಾನದವರೆಗೂ ಅವೈಜ್ಞಾನಿಕವಾಗಿ ರಸ್ತೆಯ ಮೇಲೆಯೇ ನೀರು ಪೊರೈಕೆ ಜೆ.ಐ ಕಬ್ಬಿಣದ ಪೈಪ್ ಜೋಡಿಸಲಾಗಿದೆ ಮತ್ತು ಮಾರುತಿ ದೇವಸ್ಥಾನದ ಮುಂದಿರುವ ಗಟಾರಿನಲ್ಲಿ ಎಚ್.ಡಿ.ಪಿ.ಪಿ.ಐ ಪೈಪನ್ನು ಅಳವಡಿಸಿದ್ದನ್ನು ಸಾರ್ವಜನಿಕರು ಅಧಿಕಾರಿಯ ಗಮನಕ್ಕೆ ತಂದು ಗುತ್ತಿಗೆದಾರರು ಮತ್ತು ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳದಲ್ಲಿಯೇ ಇದ್ದ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ಸಿಇಒ ಅವರು, ಯೋಜನೆಯ ವಿರುದ್ಧ ಕಾಮಗಾರಿ ನಡೆಸಲು ಯಾರು ಹೇಳಿದರು. ರಸ್ತೆಯ ಮೇಲೆ ಪೈಪ್ ಜೋಡಣಿಯ ಕಾಮಗಾರಿ ದೇಶದ ಯಾವ ಊರಿನಲ್ಲಿಯೂ ಕಂಡಿಲ್ಲ. ಮಹತ್ವಾಕಾಂಕ್ಷೆಯ ಜೆಜೆಎಂ ಕುಡಿಯುವ ನೀರಿನ ಕಾಮಗಾರಿಯು ಯೋಜನೆಯಂತೆ ನಡೆಯಬೇಕು ಇದರಲ್ಲಿ ಪ್ರತಿ ಮನೆಗೆ ನೀರು ಪೋರೈಕೆಯ ಬಗ್ಗೆ ಗಮನ ಹರಿಸಬೇಕು. ಪಿಡಿಒ ಅವರು ಈ ಬಗ್ಗೆ ಪೂರ್ಣ ಪ್ರಮಾಣದ ಕಾಳಜಿ ವಹಿಸಬೇಕು. ನಾಳೆಯಿಂದಲೇ ರಸ್ತೆಯ ಹೊರಗಡೆ ಇರುವ ಜೆಐ ಪೈಪನ್ನು ಕಿತ್ತು ಹಾಕಿ ರಸ್ತೆಯ ಒಳಗಡೆ ಎಚ್.ಡಿ.ಪಿ.ಪಿ.ಐ ಪೈಪನ್ನು ಅಳವಡಿಸಬೇಕು. ಇನ್ನೂ ಗಟಾರು ಒಳಗಡೆ ಮತ್ತು ಪಕ್ಕಕ್ಕೆ ಹಾಕಿರುವ ಪೈಪ್‌ಲೈನ್‌ನ್ನು ತೆಗೆದು ಹಾಕಿ ಸಂಬಂಧಪಟ್ಟ ಯೋಜನೆಯ ಎಂಜಿನಿಯರ್ ಸಲಹೆಯಂತೆ ಕಾಮಗಾರಿ ನೆರವೇರಿಸಬೇಕು ಎಂದು ಸೂಚಿಸಿದರು.ಈ ಸಂದರ್ಭದಲ್ಲಿ ವಾರ್ಡ್‌ನ ನಾಗರಿಕರು ಚರ್ಚಿಸುತ್ತಾ 9 ನೇ ವಾರ್ಡ್‌ನಲ್ಲಿ ಕಳೆದ 30 ವರ್ಷಗಳಿಂದ 8-10 ದಿನಕ್ಕೊಮ್ಮೆ ನೀರು ಪೊರೈಕೆಯಾಗುತ್ತಿದ್ದು ನೀರು ಪೊರೈಕೆಯಲ್ಲಿ ತಾರತಮ್ಯವಾಗುತ್ತಿದೆ. ಈ ಬಗ್ಗೆ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದರೂ ಸಹ ನೀರು ಪೊರೈಕೆಯ ಸಮಸ್ಯೆ ಪರಿಹಾರವಾಗಿಲ್ಲ. ಈಗ ಜೆಜೆಎಂ ಕಾಮಗಾರಿಯು ಸಹ ವೈಜ್ಞಾನಿಕವಾಗಿ ನಡೆಯುತ್ತಿಲ್ಲ. ಒಂದು ವರ್ಷದಲ್ಲಿ ಪೂರ್ಣಗೊಳ್ಳುವ ಕಾಮಗಾರಿ ಮೂರು ವರ್ಷವಾದರೂ ಪೂರ್ಣಗೊಳ್ಳುತ್ತಿಲ್ಲ.ಇನ್ನೂ ಹಳೆಯ ಪೈಪ್ ಲೈನ್ ದುರಸ್ಥಿಗೆ ಬಂದರೆ 10-15 ದಿನವಾದರೂ ದುರಸ್ಥಿ ಮಾಡುವುದಿಲ್ಲ ಎಂದು ದೂರಿದರು.
ಇದಕ್ಕೆ ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡ ಸಿಇಒ ತಕ್ಷಣವೇ ಸಮಸ್ಯೆ ಬಗೆ ಹರಿಸಬೇಕು. ಅದಕ್ಕೆ ಸಂಪನ್ಮೂಲ ಕೊರೆತೆಯಾದರೆ ನಮ್ಮನ್ನು ಸಂಪರ್ಕ ಮಾಡಬೇಕು ಎಂದು ತಿಳಿಸಿದರು.ಈ ವೇಳೆ ಗ್ರಾಪಂ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದರು.
ಪಿಡಿಒ ಅಮೀರನಾಯಕ, ಕಾರ್ಯದರ್ಶಿ ಪ್ರದೀಪ ಆಲೂರು, ಗ್ರಾಪಂ ಸದಸ್ಯರಾದ ವೀರಣ್ಣ ಚಕ್ರಸಾಲಿ, ಲಲಿತಾ ಗದಗಿನ, ಮಹಾಂತೇಶ ಕಮತರ, ಕುಬೇರಪ್ಪ ಬೆಂತೂರ, ತಾಪಂ ಮಾಜಿ ಅಧ್ಯಕ್ಷ ಎಂ.ಎನ್. ಉಮಚಗಿ, ನಾಗಪ್ಪ ಕುಂಬಾರ, ವೀರಭದ್ರಪ್ಪ ಕುಂಬಾರ, ಶಿವಪ್ಪ ಬಿನ್ನಾಳ ಸೇರಿದಂತೆ ವಾರ್ಡ್‌ನ ನಾಗರಿಕರು ಇದ್ದರು.ಗ್ರಾಪಂ ಜನಪ್ರತಿನಿಧಿಗಳು,ಶಾಸಕರು, ಸಚಿವರು ಸೇರಿದಂತೆ ಯಾರ ಒತ್ತಡಕ್ಕೂ ಸಹ ಮಣಿಯದೇ ಪಾರದರ್ಶಕವಾಗಿ ಯೋಜನೆಯಂತೆ ಜೆಜೆಎಂ ಕಾಮಗಾರಿ ನಡೆಯಬೇಕು. ವಿಳಂಭವಾದರೂ ಪರವಾಗಿಲ್ಲ ಆದರೆ ಕಾಮಗಾರಿಯ ದಿಕ್ಕು ತಪ್ಪಬಾರದು ಎಂದು ಜಿಪಂ ಸಿಇಒ ಎಸ್.ಭರತ್ ಹೇಳಿದ್ದಾರೆ.