ಹಾವೇರಿ ಜಿಲ್ಲೆಯಲ್ಲಿ ಅಕಾಲಿಕ ಮಳೆ, ಮಾವು ಬೆಳೆಗಾರರಿಗೆ ಸಂಕಷ್ಟ

KannadaprabhaNewsNetwork | Published : Mar 24, 2025 12:34 AM

ಸಾರಾಂಶ

ಜಿಲ್ಲೆಯ ಮಾವು ಬೆಳೆಗಾರರು ಪ್ರತಿವರ್ಷ ಹವಾಮಾನ ವೈಪರೀತ್ಯ, ಕೀಟ ಹಾಗೂ ರೋಗಬಾಧೆ, ಅಧಿಕ ಖರ್ಚು ಕಡಿಮೆ ಆದಾಯದಿಂದ ಒಂದಿಲ್ಲೊಂದು ಸಂಕಷ್ಟಕ್ಕೆ ತುತ್ತಾಗುತ್ತಿದ್ದಾರೆ.

ವಿಶೇಷ ವರದಿ

ಹಾವೇರಿ: ಮಾವು ಬೆಳೆಗೆ ಹೆಸರಾಗಿರುವ ಜಿಲ್ಲೆಯಲ್ಲಿ ಇನ್ನು ಒಂದೆರಡು ವಾರಗಳಲ್ಲಿ ಕೊಯ್ಲು ಶುರುವಾಗಲಿದೆ. ಆದರೆ, ಈ ಹಂತದಲ್ಲಿ ಬಿಸಿಲಿನ ತೀವ್ರತೆ ಮತ್ತು ಅಕಾಲಿಕ ಗಾಳಿ ಮಳೆಯಿಂದ ಮಾವಿನ ಕಾಯಿಗಳು ಉದುರಿ ಬೀಳುತ್ತಿರುವುದು ಮಾವು ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ.

ಜಿಲ್ಲೆಯ ಮಾವು ಬೆಳೆಗಾರರು ಪ್ರತಿವರ್ಷ ಹವಾಮಾನ ವೈಪರೀತ್ಯ, ಕೀಟ ಹಾಗೂ ರೋಗಬಾಧೆ, ಅಧಿಕ ಖರ್ಚು ಕಡಿಮೆ ಆದಾಯದಿಂದ ಒಂದಿಲ್ಲೊಂದು ಸಂಕಷ್ಟಕ್ಕೆ ತುತ್ತಾಗುತ್ತಿದ್ದಾರೆ. ಪ್ರಸಕ್ತ ವರ್ಷ ಮಾವಿನ ತೋಪುಗಳಲ್ಲಿ ಭರ್ಜರಿ ಹೂವು ಬಿಟ್ಟ ಗಿಡಗಳೇ ಕಾಣುತ್ತಿದ್ದವು. ಕಾಯಿ ಕಟ್ಟಿ ಉತ್ತಮ ಫಸಲು ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರಿಗೆ ಇದೀಗ ಕಾಯಿಗಳು ಉದುರಿ ಬಿಳುತ್ತಿರುವುದು ರೈತರನ್ನು ಚಿಂತೆಗೀಡು ಮಾಡಿದೆ. ಮಳೆ, ಬಿಸಿಲ ತಾಪ: ಈ ಬಾರಿ ನಿರೀಕ್ಷೆಗೂ ಮೀರಿ ಮಾವಿನ ತೋಟಗಳಲ್ಲಿನ ಮರಗಳು ಹೂವು ಬಿಟ್ಟು ಕಾಯಿ ಕಟ್ಟುತ್ತಿರುವುದು ಸಹಜವಾಗಿಯೇ ಮಾವು ಬೆಳೆಗಾರರಲ್ಲಿ ಸಂತಸ ಮೂಡಿಸಿದೆ. ಕೆಲವು ಕಡೆ ಇನ್ನೊಂದು ವಾರದಲ್ಲಿ ಕೊಯ್ಲು ಶುರುವಾಗಲಿದ್ದರೆ, ಇನ್ನು ಕೆಲವು ಕಡೆ ಅಡಕೆ ಗಾತ್ರದಲ್ಲಿವೆ. ಕೆಲವು ತಳಿಗಳ ಮಾವಿನ ಗಿಡಗಳಲ್ಲಿ ಕಾಯಿ ಕಟ್ಟುತ್ತಿವೆ.

ಈ ಸಂದರ್ಭದಲ್ಲಿ ವಿವಿಧ ರೋಗಗಳಿಗೆ ತುತ್ತಾಗುವುದರ ಜತೆ ವಾತಾವರಣದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿ ಮಾವಿನ ಮರಗಳಲ್ಲಿರುವ ಕಾಯಿಗಳು ಉದುರುತ್ತಿವೆ. ಮಾವಿನ ಮರಗಳ ಕೆಳಗೆ ನಿತ್ಯವೂ ಉದುರಿ ಬಿದ್ದಿರುವ ಮಿಡಿಗಾಯಿಗಳ ರಾಶಿಯೇ ಕಾಣುತ್ತಿವೆ. ಕೆಲ ದಿನಗಳ ಹಿಂದಷ್ಟೇ ಜಿಲ್ಲೆಯಲ್ಲಿ ಮಳೆ ಸುರಿದಿದೆ. ಕೆಲವು ಕಡೆ ಆಲಿಕಲ್ಲು ಬಿದ್ದಿವೆ. ಗಾಳಿ ಬೀಸಿ ಮಾವಿನ ಕಾಯಿಗಳು ಉದುರಿವೆ. ಆಲಿಕಲ್ಲು ಬಿದ್ದ ಕಡೆ ಕಾಯಿ ಕೊಳೆತು ಬೀಳುತ್ತಿವೆ.

ವರ್ಷಗಟ್ಟಲೆ ತೋಟ ನಿರ್ವಹಣೆ ಮಾಡಿ, ರೋಗಬಾಧೆ ನಿಯಂತ್ರಣಕ್ಕೆ ಹತ್ತಾರು ಸಾವಿರ ರು. ಖರ್ಚು ಮಾಡಿದ್ದ ರೈತರು ಇನ್ನೇನು ಫಸಲು ಬರುವ ಹೊತ್ತಿಗೆ ಹವಾಮಾನ ಕೈಕೊಡುತ್ತಿದೆ. ಇದೇ ಕಾರಣಕ್ಕೆ ಜಿಲ್ಲೆಯ ರೈತರು ಮಾವು ಬೆಳೆಯಿಂದಲೇ ವಿಮುಖರಾಗುತ್ತಿದ್ದಾರೆ.

ಕ್ಷೀಣಿಸುತ್ತಿರುವ ಮಾವು ಕ್ಷೇತ್ರ: ಜಿಲ್ಲೆಯ ಮಾವು ಬೆಳೆಗಾರರು ಹವಾಮಾನ ವೈಪರೀತ್ಯ, ರೋಗಬಾಧೆ, ಮಾರುಕಟ್ಟೆ ಸಮಸ್ಯೆ ಹಾಗೂ ಅಧಿಕ ಖರ್ಚು ಕಡಿಮೆ ಆದಾಯದಿಂದ ಬೇಸತ್ತು ವರ್ಷದಿಂದ ವರ್ಷಕ್ಕೆ ಮಾವು ಕೃಷಿಯಿಂದಲೇ ರೈತರು ವಿಮುಖರಾಗುತ್ತಿದ್ದಾರೆ. ಪರ್ಯಾಯವಾಗಿ ಅಡಕೆ, ಶುಂಠಿ ಬೆಳೆಗಳತ್ತ ಚಿತ್ತ ಹರಿಸುತ್ತಿದ್ದಾರೆ. 2019- 20ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 5509 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿತ್ತು, ಕಳೆದ ವರ್ಷ 5219 ಹೆಕ್ಟೇರ್ ಪ್ರದೇಶಕ್ಕೆ ಇಳಿಕೆಯಾಗಿತ್ತು. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಮಾವು 5033 ಹೆಕ್ಟೇರ್ ಪ್ರದೇಶಕ್ಕೆ ಬಂದು ನಿಂತಿದೆ. ಕಳೆದ ಐದು ವರ್ಷಗಳಲ್ಲಿ 500ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಕಡಿಮೆಯಾಗಿದೆ.

ಜಿಲ್ಲೆಯ ಮಾವು ಕೃಷಿಯಲ್ಲಿ ಹಾನಗಲ್ಲ ತಾಲೂಕು 3324 ಹೆಕ್ಟೇರ್ ಪ್ರದೇಶದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ ನಂತರದಲ್ಲಿ ಶಿಗ್ಗಾಂವಿ ತಾಲೂಕು 1370 ಹೆಕ್ಟೇರ್ ಇದೆ. ಬ್ಯಾಡಗಿ 95 ಹಾಗೂ ಹಾವೇರಿ ತಾಲೂಕು ತಲಾ 90 ಹೆಕ್ಟೇರ್ ಪ್ರದೇಶದೊಂದಿಗೆ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ. ಜಿಲ್ಲೆಯಲ್ಲಿ ಪ್ರಮುಖವಾಗಿ ಆಪೂಸ್‌ ಮಾವು ಬೆಳೆಯಲಾಗುತ್ತಿದ್ದು, ಇಲ್ಲಿಯ ಮಾವಿಗೆ ಉತ್ತಮ ಬೆಲೆಯೂ ಇದೆ.

ಆದರೆ, ಪ್ರತಿವರ್ಷ ಒಂದಿಲ್ಲೊಂದು ಸಮಸ್ಯೆಯಿಂದ ರೈತರಿಗೆ ಮಾವು ಬೆಳೆ ಕೈಹಿಡಿಯುತ್ತಿಲ್ಲ. ಒಂದು ವರ್ಷ ಫಸಲು ಬಂದರೆ ಮರುವರ್ಷ ಕೈಕೊಡುತ್ತಿದೆ. ಅಲ್ಲದೇ ಮಾವು ಸಂಸ್ಕರಣಾ ಘಟಕ ಸೇರಿದಂತೆ ಶೇಖರಣೆಗೆ ಸಮಸ್ಯೆ ಇರುವುದರಿಂದ ಮಾವು ಬೆಳೆ ಬಗ್ಗೆ ರೈತರು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ.

ಔಷಧ ಸಿಂಪಡಣೆ: ಜಿಲ್ಲೆಯಲ್ಲಿ ಮಾವು ಕಾಯಿ ಹಂತದಲ್ಲಿದ್ದು, ಬಿಸಿಲಿನ ತೀವ್ರತೆ ಹೆಚ್ಚಾಗಿದೆ. ಅಕಾಲಿಕ ಮಳೆಯಿಂದಲೂ ಸಮಸ್ಯೆಯಾಗುತ್ತದೆ. ರೋಗಬಾಧೆ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ರೋಗಬಾಧೆ ಕಾಣಿಸಿಕೊಂಡರೆ ತೋಟಗಾರಿಕಾ ಇಲಾಖೆ ತಜ್ಞರ ಸಲಹೆಯಂತೆ ರೈತರು ಔಷಧ ಸಿಂಪಡಣೆ ಮಾಡಬೇಕು ಎಂದುತೋಟಗಾರಿಕಾ ಉಪನಿರ್ದೇಶಕ ಎಸ್.ಎಚ್. ಬರಗಿಮಠ ತಿಳಿಸಿದರು.

Share this article