ಕೊಪ್ಪಳ: ಅಧಿಕಾರಿಗಳು ತಮ್ಮ ಆಡಳಿತ ವೈಖರಿಯಲ್ಲಿ ಬದಲಾವಣೆ ತಂದುಕೊಳ್ಳಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಅರ್ಹರಿಗೆ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಬೇಕು ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಆಡಳಿತದಲ್ಲಿ ಜನಪರ ಕಾಳಜಿ ಹಾಗೂ ಚಾಕಚಕ್ಯತೆ ಇದ್ದರೆ ರಾಜ್ಯದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಬಹುದು. ಸರ್ಕಾರದ ಅನುದಾನವನ್ನು ಪ್ರಾಮಾಣಿಕವಾಗಿ ಅರ್ಹರಿಗೆ ತಲುಪಿಸಿದರೆ ಜನರ ಜೀವನಮಟ್ಟ ಸುಧಾರಣೆಯಾಗಲಿದೆ. ಸರ್ಕಾರಿ ನೌಕರರಿಗೆ ಸರ್ಕಾರ ಅನೇಕ ಸವಲತ್ತುಗಳನ್ನು ನೀಡಿದ್ದು, ಉತ್ತಮ ಜೀವನ ನಡೆಸಲು ಅವಕಾಶ ಕಲ್ಪಿಸಿದೆ. ಆದರೂ ಕೆಲವರು ದುರಾಸೆಯಿಂದ ಭ್ರಷ್ಟಾಚಾರದಲ್ಲಿ ತೊಡಗುತ್ತಿರುವುದು ವಿಷಾದನೀಯ. ಭ್ರಷ್ಟಾಚಾರ ಸಾಬೀತಾದಲ್ಲಿ ಅಂತಹ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರತಿಯೊಬ್ಬ ಅಧಿಕಾರಿ ಹಾಗೂ ಸಿಬ್ಬಂದಿಗೆ ಅವರದೇ ಆದ ಕಾರ್ಯಗಳನ್ನು ವಿಂಗಡಿಸಿ ನೀಡಲಾಗಿದೆ. ಕಾರ್ಯ ಪರಿಶೀಲನೆಗಾಗಿ ಮೇಲ್ವಿಚಾರಕರನ್ನೂ ನೇಮಿಸಲಾಗಿದೆ. ಆದರೂ ಸರ್ಕಾರಿ ಕೆಲಸಗಳು ಸುಗಮವಾಗಿ ಸಾಗುತ್ತಿಲ್ಲ. ಒಬ್ಬ ವ್ಯಕ್ತಿ ಒಂದೇ ಕೆಲಸಕ್ಕಾಗಿ ಪದೇ ಪದೇ ಕಚೇರಿಗೆ ಅಲೆದಾಡುವಂತಾದರೆ ಆಡಳಿತದಲ್ಲಿ ಲೋಪವಿದೆ ಎಂದರ್ಥ. ಅಧಿಕಾರಿಗಳು ತಮ್ಮ ದುರಾಸೆಯಿಂದ ಮಾಡಿದ ತಪ್ಪಿಗೆ ಕುಟುಂಬವನ್ನೂ ಮುಜುಗರಕ್ಕೆ ತಳ್ಳಬಾರದು. ತಂದೆ-ತಾಯಿಯ ಮಾರ್ಗದರ್ಶನದಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.ವಸತಿ ನಿಲಯಗಳಲ್ಲಿ ಮೂಲಸೌಕರ್ಯ ಕಲ್ಪಿಸಿ: ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವ್ಯಾಪ್ತಿಯ ವಸತಿ ನಿಲಯ ಹಾಗೂ ವಸತಿ ಶಾಲೆಗಳಲ್ಲಿ ಸಾಮರ್ಥ್ಯ ಮೀರಿ ಪ್ರವೇಶ ನೀಡಬಾರದು. ಇದರಿಂದ ವಿದ್ಯಾರ್ಥಿಗಳಿಗೆ ಮೂಲಸೌಕರ್ಯಗಳ ಕೊರತೆ ಎದುರಾಗುತ್ತದೆ. ಶಿಕ್ಷಣದಲ್ಲಿಯೂ ಉತ್ತಮ ಪ್ರಗತಿ ಸಾಧಿಸಲು ಕಷ್ಟವಾಗುತ್ತದೆ. ಹೆಚ್ಚುವರಿ ಸಂಖ್ಯೆಯಿರುವ ವಸತಿ ನಿಲಯಗಳ ವಿದ್ಯಾರ್ಥಿಗಳನ್ನು ಬಾಡಿಗೆ ಕಟ್ಟಡಗಳಿಗೆ ಸ್ಥಳಾಂತರಿಸಿ, ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಸ್ವಚ್ಛತೆ ಹಾಗೂ ಶಿಸ್ತಿಗೆ ಆದ್ಯತೆ ನೀಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.