ಅಡಕೆ ಸಂಸ್ಕರಣೆಗೆ ಅಕಾಲಿಕ ಮಳೆ ಕಾಟ

KannadaprabhaNewsNetwork | Published : Jan 5, 2024 1:45 AM

ಸಾರಾಂಶ

ಸಂಸ್ಕರಿಸಿದ ಅಡಕೆಯನ್ನು ಮನೆಯಂಗಳದಲ್ಲಿ ಒಣಗಿಸಲು ಹಾಕಿರುವ ದೃಶ್ಯ ಮಲೆನಾಡಿನ ಎಲ್ಲೆಡೆ ಕಾಣಸಿಗುತ್ತಿದೆ. ಆದರೆ, ಮಳೆಯ ವಾತಾವರಣ ರೈತರ ಎಲ್ಲ ಯತ್ನವನ್ನು ತಲೆಕೆಳಗು ಮಾಡುತ್ತಿದೆ.

ಶಿರಸಿ:ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣ, ಆಗಾಗ ಮಳೆಯ ಸಿಂಚನ ಅಡಕೆ ಬೆಳೆಗಾರರನ್ನು ಕಂಗಾಲಾಗಿಸಿದೆ. ಕೈಗೆ ಬಂದ ಬೆಳೆ ಹಾಳಾಗುವ ಆತಂಕದಲ್ಲಿ ರೈತರಿದ್ದಾರೆ.ಹೌದು, ಮಲೆನಾಡು ಮತ್ತು ಅರೆಮಲೆನಾಡಿನಲ್ಲಿ ಈಗ ಅಡಕೆ ಕಟಾವಿನ ಸಂಭ್ರಮ ಜೋರಾಗಿ ನಡೆದಿದೆ. ಸಾಮಾನ್ಯವಾಗಿ ಡಿಸೆಂಬರ್ ಅಂತ್ಯ ಮತ್ತು ಸಂಪೂರ್ಣ ಜನವರಿ ತಿಂಗಳಿನಲ್ಲಿ ಅಡಕೆ ಕಟಾವು ಕಾರ್ಯ ನಡೆದಿರುತ್ತದೆ. ತೋಟದಿಂದ ಅಡಕೆ ಗೊನೆ ಇಳಿಸಿ ತಂದು ಸಂಸ್ಕರಣೆ ಮಾಡುವ ಕಾಲ ಇದು. ಇನ್ನೂ ಸಂಪೂರ್ಣವಾಗಿ ಬೆಳೆದಿರದ, ಹಸಿರು ಅಡಕೆ ಕಾಯಿಗಳನ್ನು ತಂದು ರಾಶಿ ಅಡಕೆ ಅಥವಾ ಕೆಂಪಡಕೆ ತಯಾರಿಸಲಾಗುತ್ತದೆ. ಈ ಅಡಕೆ ಸುಲಿದು, ಬೇಯಿಸಿ 8ರಿಂದ 10 ದಿನ ಬಿಸಿಲಿನಲ್ಲಿ ಒಣಗಿಸಿ ಕೆಂಪಡಕೆ ಸಿದ್ಧಪಡಿಸಲಾಗುತ್ತದೆ. ಒಮ್ಮೆ ಕಾಯಿ ಅಡಕೆಯನ್ನು ಮರದಿಂದ ಇಳಿಸಿದ ಮೇಲೆ ಸಂಗ್ರಹಿಸಿಟ್ಟುಕೊಳ್ಳಲು ಸಾಧ್ಯವಾಗದೇ ಸಂಸ್ಕರಣೆಯೊಂದೇ ಮುಂದಿರುವ ದಾರಿ.ಈ ರೀತಿ ಸಂಸ್ಕರಿಸಿದ ಅಡಕೆಯನ್ನು ಮನೆಯಂಗಳದಲ್ಲಿ ಒಣಗಿಸಲು ಹಾಕಿರುವ ದೃಶ್ಯ ಮಲೆನಾಡಿನ ಎಲ್ಲೆಡೆ ಕಾಣಸಿಗುತ್ತಿದೆ. ಆದರೆ, ಮಳೆಯ ವಾತಾವರಣ ರೈತರ ಎಲ್ಲ ಯತ್ನವನ್ನು ತಲೆಕೆಳಗು ಮಾಡುತ್ತಿದೆ. ಈ ಒಣಹಾಕಿದ ಅಡಕೆಗೆ ಬಿಸಿಲು ಬೀಳದಿದ್ದರೆ ಮುಗ್ಗು ಹಿಡಿಯುವ ಜತೆಗೆ ಅಡಕೆಯ ತಿರುಳಿನಲ್ಲಿಯೂ ಕಪ್ಪು ಶಿಲೀಂಧ್ರಗಳು ಬೆಳೆದು ಮಾರುಕಟ್ಟೆಯಲ್ಲಿ ಅರ್ಧದಷ್ಟು ಬೆಲೆ ಕಳೆದುಕೊಳ್ಳುತ್ತವೆ.ಕಳೆದ ಎರಡು ದಿನಗಳಿಂದ ಬಿಸಿಲಿಲ್ಲದ ಕಾರಣ ರೈತರು ಅಂಗಳದಲ್ಲಿಯೇ ಕೆಂಪಡಕೆ ಮುಚ್ಚಿಟ್ಟಿದ್ದಾರೆ. ಗುರುವಾರ ಮುಂಜಾನೆ ತಾಲೂಕಿನ ಬಹುತೇಕ ಕಡೆಯಲ್ಲಿ ಮಳೆಯಾಗಿದ್ದು, ಅರೆಬರೆ ಒಣಗಿದ ಅಡಕೆ ಒದ್ದೆಯಾಗಿದೆ. ಇನ್ನೂ ಇದೇ ವಾತಾವರಣ ಮುಂದುವರಿದಲ್ಲಿ ಅಡಕೆ ಬೆಳೆಗಾರರು ದೊಡ್ಡ ಪ್ರಮಾಣದಲ್ಲಿ ಹಾನಿ ಅನುಭವಿಸುವ ಆತಂಕದಲ್ಲಿದ್ದಾರೆ.

ಹಸಿ ಅಡಕೆ ದರವೂ ಕುಸಿತ:

ಮಳೆಯ ವಾತಾವರಣ ಕಳೆದ ಮೂರು ದಿನಗಳಿಂದ ಮಾರುಕಟ್ಟೆಗೆ ಆಗಮಿಸುವ ಹಸಿರು ಅಡಕೆಯ ದರದ ಮೇಲೂ ಪರಿಣಾಮ ಬೀರುತ್ತಿದೆ. ಕೂಲಿಯಾಳುಗಳ ಕೊರತೆಯಿಂದಾಗಿ ರೈತರಿಗೆ ನೆರವಾಗುವ ಉದ್ದೇಶದಿಂದ ಸಹಕಾರಿ ಸಂಘಗಳು ರೈತರು ಕಟಾವು ಮಾಡಿದ ಹಸಿ ಅಡಕೆಯನ್ನು ಟೆಂಡರ್ ಮೂಲಕ ಮಾರಾಟ ಮಾಡಲು ಅವಕಾಶ ನೀಡುತ್ತಿವೆ. ಈ ರೀತಿ ಹಸಿ ಅಡಕೆಯನ್ನು ಟೆಂಡರ್‌ಗೆ ಒಯ್ದವರೂ ಕಡಿಮೆ ದರದಲ್ಲಿ ಮಾರಾಟ ಮಾಡುವಂತಾಗಿದೆ. ಪ್ರತಿ ಕ್ವಿಂಟಲ್ ಹಸಿ ಅಡಕೆಗೆ ಸರಾಸರಿ ₹ 5300 ದರ ಲಭಿಸುತ್ತಿದ್ದುದು ಈಗ ₹ 4500ರಿಂದ ₹4800ಕ್ಕೆ ಮಾರಾಟವಾಗುತ್ತಿದೆ. ಖರೀದಿ ಮಾಡುವವರೂ ಸಂಸ್ಕರಣೆಗೆ ಮಳೆಯ ಸಮಸ್ಯೆ ಎದುರಿಸುತ್ತಿರುವುದರಿಂದ ಟೆಂಡರ್‌ನಲ್ಲಿ ಕಡಿಮೆ ದರ ಬರೆಯುತ್ತಿದ್ದಾರೆ.

Share this article