ಕನ್ನಡಪ್ರಭ ವಾರ್ತೆ ಮಂಡ್ಯ
ಆಧುನೀಕತೆ ಬೆಳವಣಿಗೆ ಸಾಧಿಸಿದ್ದರೂ ನಮ್ಮ ದೇಶದಲ್ಲಿ ಇಂದಿಗೂ ಅಸ್ಪೃಶ್ಯತೆ ಜೀವಂತವಾಗಿರುವುದು ನಾಗರಿಕ ಸಮಾಜಕ್ಕೆ ಶೋಭೆಯಲ್ಲ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅಭಿಪ್ರಾಯಪಟ್ಟರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಮಾಜ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ದೌರ್ಜನ್ಯ ನಿಯಂತ್ರಣ ಕಾಯ್ದೆಯ ಜಿಲ್ಲಾ ಮಟ್ಟದ ಜಾಗೃತಿ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕು ಮಟ್ಟದಲ್ಲಿ ಎಲ್ಲಾ ಸದಸ್ಯರನ್ನು ಒಳಗೊಂಡಂತೆ ಅಸ್ಪೃಶ್ಯತೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾದರೆ ಏನೇನು ಸಮಸ್ಯೆ ಉಂಟಾಗುತ್ತದೆ. ದೌರ್ಜನ್ಯ ಪ್ರಕರಣ ತಡೆಗಟ್ಟಲು ಕಾನೂನು ಅರಿವು ಕಾರ್ಯಕ್ರಮ ರೂಪಿಸುವಂತೆ ಸಲಹೆ ನೀಡಿದರು.ದೌರ್ಜನ್ಯ ಪ್ರಕರಣಗಳು ಸಂಭವಿಸಿದ ವೇಳೆ ಯಾವುದೇ ವಿಳಂಬ ಮಾಡದೆ ಸಂಬಂಧಪಟ್ಟ ಇಲಾಖೆಯ ಎಲ್ಲಾ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ದೌರ್ಜನ್ಯಕ್ಕೊಳಗಾದ ವ್ಯಕ್ತಿಗೆ ಸಂಬಂಧಪಟ್ಟ ವಾರಸುದಾರರ ದಾಖಲೆಗಳನ್ನು ಪಡೆದು ಕೂಡಲೇ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು.
ಎಲ್ಲಾ ತಹಸೀಲ್ದಾರ್‌ಗಳು ತಮ್ಮ ತಾಲೂಕುಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ನಿಯಂತ್ರಣದ ಕುರಿತು ಜಾಗೃತಿ ಸಮಿತಿ ಸಭೆ ಹಾಗೂ ಕುಂದು ಕೊರತೆಗಳ ಸಭೆಗಳನ್ನು ಕಡ್ಡಾಯವಾಗಿ ಮಾಡಬೇಕು. ತಾಲೂಕು ಮಟ್ಟದಲ್ಲಿ ಸಮರ್ಪಕವಾಗಿ ಕುಂದು ಕೊರತೆಗಳ ಸಭೆ ಆಯೋಜನೆ ಮಾಡುವುದು ಸಂಬಂಧ ಪಟ್ಟ ಇಲಾಖೆಯ ಸಹಾಯಕ ನಿರ್ದೇಶಕರ ಜವಾಬ್ದಾರಿಯಾಗಿದೆ ಎಂದು ಎಚ್ಚರಿಸಿದರು.ಜಾತಿ ಕುರಿತು ಇನ್ನೂ ಸಹ ಇರುವ ಅಸಹನೆಯನ್ನು ನಾಗರಿಕ ಸಮಾಜದಲ್ಲಿರುವ ಪ್ರತಿಯೊಬ್ಬ ನಾಗರಿಕ ಪ್ರಜ್ಞಾವಂತರು ಅದನ್ನು ಖಂಡಿಸುವ ಕೆಲಸ ಮಾಡಬೇಕಿದೆ. ಇಂತಹ ಪ್ರಕರಣಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳ ತನಿಖೆಯನ್ನು ಸಾಧ್ಯವಾದಷ್ಟು ಬೇಗ ಮುಗಿಸಬೇಕು. ದೌರ್ಜನ್ಯ ಪ್ರಕರಣಗಳಲ್ಲಿ ಮೃತಪಟ್ಟ ವ್ಯಕ್ತಿಗಳ ವಾರಸುದಾರರಿಗೆ ನೌಕರಿ ನೀಡುವ ಪ್ರಕ್ರಿಯೆ ಹಾಗೂ ಪಿಂಚಣಿ ನೀಡುವ ಸೌಲಭ್ಯಗಳನ್ನು ಶ್ರೀಘ್ರವಾಗಿ ನಡೆಯಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಉಪವಿಭಾಗಾಧಿಕಾರಿಗಳಾದ ಶಿವಮೂರ್ತಿ, ಶ್ರೀನಿವಾಸ್. ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ್ ಸೇರಿದಂತೆ ಇನ್ನಿತರ ಅಧಿಕಾರಿಗಳು, ಜಾಗೃತ ಸಮಿತಿ ಸದಸ್ಯರು ಉಪಸ್ಥಿತರಿದ್ದರು.