ಶಿಕ್ಷಣದಿಂದ ಅಸ್ಪೃಶ್ಯತೆ, ಮೂಢನಂಬಿಕೆ ನಿವಾರಣೆ ಸಾಧ್ಯ

KannadaprabhaNewsNetwork |  
Published : Feb 20, 2025, 12:48 AM IST
ಕಾರ್ಯಕ್ರಮವನ್ನು ಉದ್ಘಾಟಿಸಿದರು.  | Kannada Prabha

ಸಾರಾಂಶ

ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಅಸ್ಪೃಶ್ಯತೆಯ ಕುರಿತು ಇನ್ನೂ ಅರಿವು ಕಾರ್ಯಕ್ರಮಗಳು ನಡೆಯುತ್ತಿರುವುದು ವಿಷಾದನೀಯ. ಕಾರಣ ಬಹಿರಂಗವಾಗಿ ಮಾತ್ರ ಅಸ್ಪೃಶ್ಯತೆ ಇಲ್ಲ ಆದರೆ ಮೇಲ್ವರ್ಗದ ಜನರಲ್ಲಿ ಆಂತರಿಕವಾಗಿ ಇನ್ನೂ ಅಸ್ಪೃಶ್ಯತೆ ಇದ್ದು ಅಂತರ್ ಜಾತಿ ವಿವಾಹಗಳು ಹೆಚ್ಚೆಚ್ಚು ನಡೆದಾಗ ಮಾತ್ರ ಸಮಾನತೆ ಬರಲು ಸಾಧ್ಯವಾಗುತ್ತದೆ.

ಗದಗ:

ಪ್ರತಿಯೊಂದು ಕುಟುಂಬವು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು ಶಿಕ್ಷಣದಿಂದಲೇ ಸಮಾಜದಲ್ಲಿ ಅಸ್ಪೃಶ್ಯತೆ ಮತ್ತು ಮೂಢನಂಬಿಕೆಗಳು ಕಡಿಮೆಯಾಗಲು ಸಾಧ್ಯ ಎಂದು ಗದಗ ಡಿಎಸ್ಪಿ ಜೆ.ಎಚ್.ಇನಾಮದಾರ ಹೇಳಿದರು.

ಅವರು ಗದಗ ತಾಲೂಕಿನ ಲಕ್ಕುಂಡಿ ಗ್ರಾಮ ಪಂಚಾಯತ ಆವರಣದಲ್ಲಿಯ ದಾನ ಚಿಂತಾಮಣಿ ಅತ್ತಿಮಬ್ಬೆ ರಂಗಮಂದಿರದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ, ಸಮಾಜ ಕಲ್ಯಾಣ ಇಲಾಖೆ, ವಿವಿಧ ದಲಿತ ಸಂಘಟನೆಗಳ, ಪೃಥ್ವಿಪ್ರೀಯಾ ಸಾರ್ವತ್ರಿಕ ಸೇವಾ ಸಂಸ್ಥೆ ಎಸ್.ಸಿ ಗದಗ, ಗ್ರಾಮ ಪಂಚಾಯತ ಲಕ್ಕುಂಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಅಸ್ಪಶ್ಯತಾ ನಿವಾರಣೆ ಕುರಿತ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಎಸ್.ಸಿ.ಎಸ್.ಟಿ ದೌರ್ಜನ್ಯ ನಿಯಂತ್ರಣ ಮತ್ತು ಜಾಗೃತಿ ಸಮಿತಿಯ ಸದಸ್ಯ ಶರೀಫ ಬಿಳೆಯಲಿ ಮಾತನಾಡಿ ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಅಸ್ಪೃಶ್ಯತೆಯ ಕುರಿತು ಇನ್ನೂ ಅರಿವು ಕಾರ್ಯಕ್ರಮಗಳು ನಡೆಯುತ್ತಿರುವುದು ವಿಷಾದನೀಯ. ಕಾರಣ ಬಹಿರಂಗವಾಗಿ ಮಾತ್ರ ಅಸ್ಪೃಶ್ಯತೆ ಇಲ್ಲ ಆದರೆ ಮೇಲ್ವರ್ಗದ ಜನರಲ್ಲಿ ಆಂತರಿಕವಾಗಿ ಇನ್ನೂ ಅಸ್ಪೃಶ್ಯತೆ ಇದ್ದು ಅಂತರ್ ಜಾತಿ ವಿವಾಹಗಳು ಹೆಚ್ಚೆಚ್ಚು ನಡೆದಾಗ ಮಾತ್ರ ಸಮಾನತೆ ಬರಲು ಸಾಧ್ಯವಾಗುತ್ತದೆ ಎಂದರು.

ಸಿ.ಡಬ್ಲೂ.ಸಿ ಸದಸ್ಯ, ವಕೀಲ ಬಸವರಾಜ ಸಂಶಿ ಮಾತನಾಡಿ ಡಾ.ಬಿ.ಆರ್. ಅಂಬೇಡ್ಕರ ಅವರ ಸಂವಿಧಾನದ ಆಶಯಗಳಿಗೆ ಪೂರಕವಾಗಿ ನಡೆದುಕೊಂಡು ಸರ್ವರಲ್ಲಿ ಸಮಾನತೆ ತರಲು ಬುದ್ಧ , ಬಸವ, ಅಂಬೇಡ್ಕರ ತತ್ವಗಳನ್ನು ಅಳವಡಿಸಿಕೊಳ್ಳಬೇಕು. 1989 ರಲ್ಲಿ ಜಾರಿಯಾದ ಎಸ್.ಸಿ. ಎಸ್.ಟಿ ದೌರ್ಜನ್ಯ ಕಾಯ್ದೆಯನ್ನು ಎಲ್ಲ ಸಮಾಜದ ಮುಖಂಡರು ಅರಿಯಬೇಕು ಎಂದರು.

ಸಮಾಜ ಕಲ್ಯಾಣ ಇಲಾಖೆಯ ಎಚ್.ಎಂ.ಪಾಟೀಲ, ಅಧ್ಯಕ್ಷತೆ ವಹಿಸಿದ್ದ ಗ್ರಾ. ಪಂ ಅಧ್ಯಕ್ಷ ಕೆ.ಎಸ್.ಪೂಜಾರ ತಾ.ಪಂ ಸಹಾಯಕ ನಿರ್ದೇಶಕಿ ಅಶ್ವಿನಿ ಕುರಡಗಿ, ಎನ್. ಮಂಜುಳಾ ಮುಂತಾದವರು ಮಾತನಾಡಿದರು. ನೀಲಗುಂದ ಗ್ರಾಮದ ನಾಗರಾಜ ಜಕ್ಕಮ್ಮನವರ ನೇತೃತ್ವದ ಜಾನಪದ ಕಲಾ ತಂಡವು ಅಂಬೇಡ್ಕರ ಅವರ ಕುರಿತು ಹಾಡಿದ ಕ್ರಾಂತಿ ಗೀತೆ ಹಾಡಿತು.

ಜಿಲ್ಲಾ ಉಪವಿಭಾಗದ ಮಟ್ಟದ ಎಸ್.ಸಿ ಎಸ್.ಟಿ. ದೌರ್ಜನ್ಯ ನಿಯಂತ್ರಣ ಮತ್ತು ಜಾಗೃತಿ ಸಮಿತಿಯ ಸದಸ್ಯ ಬಸವರಾಜ ಮುಳ್ಳಾಳ, ತಾ. ಪಂ ಮಾಜಿ ಸದಸ್ಯ ಮಹೇಶ ಮುಸ್ಕಿನಭಾವಿ, ಗ್ರಾ. ಪಂ ಸದಸ್ಯರಾದ ಪೀರಸಾಬ ನದಾಫ, ವೀರಣ್ಣ ಚಕ್ರಸಾಲಿ, ಮಹಾಂತೇಶ ಕಮತರ, ಕುಬೇರಪ್ಪ ಬೆಂತೂರು, ಲಕ್ಷ್ಮಣ ಗುಡಸಲಮನಿ, ಹನುಮಂತಪ್ಪ ಬಂಗಾರಿ, ಫಕ್ಕೀರಮ್ಮ ಬೇಲೇರಿ, ರಮೇಶ ಭಾವಿ, ಬಹುಜನ ಚಳವಳಿಯ ಅಧ್ಯಕ್ಷೆ ನಾಗಮ್ಮ ಹಾಲಿನವರ, ಅಂಗನವಾಡಿ ಮೇಲ್ವಿಚಾರಕಿ ಸಾಹೀದಬೇಗಂ ಹತ್ತಿವಾಲೆ, ಎಂ. ಎಂ. ಹುಬ್ಬಳ್ಳಿ, ಮರಿಯಪ್ಪ ವಡ್ಡರ, ಉಪಸ್ಥಿತರಿದ್ದರು. ಪಿ.ಡಿ.ಒ ಅಮೀರನಾಯಕ ಸ್ವಾಗತಿಸಿದರು. ಪೃಥ್ವಿಪ್ರಿಯಾ ಸಾರ್ವತ್ರಿಕ ಸೇವಾ ಸಂಸ್ಥೆಯ ಕಾರ್ಯದರ್ಶಿ ರಮೇಶ ಕೊಳೂರು ನಿರೂಪಿಸಿ, ವಂದಿಸಿದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?