ಶಿರಸಿ: ಹಲವಾರು ವಿಘ್ನಗಳ ನಡುವೆ ವಿಳಂಬವಾಗಿಯಾದರೂ ನಿರ್ಮಾಣಗೊಂಡ ತಾಲೂಕಿನ ಬನವಾಸಿ ಉಪಕೇಂದ್ರ(ಗ್ರಿಡ್) ಇಲ್ಲಿನ ಜನರಿಗೆ ಮಾತ್ರ ಉಪಯೋಗಕ್ಕೆ ಸಿಗದಂತಾಗಿದ್ದು, ನಿತ್ಯವೂ ವಿದ್ಯುತ್ ವೋಲ್ಟೇಜ್ ಸಮಸ್ಯೆ ಎದುರಿಸುವಂತಾಗಿದೆ.
ತಾಲೂಕಿನ ಪೂರ್ವಭಾಗ ಮಳೆಯಾಶ್ರಿತ ಭೂಮಿಯಾಗಿದ್ದು, ಬರಗಾಲದ ಸಂದರ್ಭದಲ್ಲಿ ಕೃಷಿ ಹಾಗೂ ಕುಡಿಯಲು ನೀರಿನ ಅಭಾವ ಸಾಕಷ್ಟು ಉಂಟಾಗಲಿದೆ. ಆದರೆ, ಶಿರಸಿ ಮತ್ತು ಎಸಳೆ ಉಪಕೇಂದ್ರದಿಂದ ಬನವಾಸಿಗೆ ವಿದ್ಯುತ್ ಪೂರೈಕೆಯಾಗುವುದರಿಂದ ಬಹಳಷ್ಟು ಪ್ರಮಾಣದಲ್ಲಿ ವೋಲ್ಟೇಜ್ ಸಮಸ್ಯೆ ಹಾಗೂ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.ಲೋ ವೋಲ್ಟೇಜ್‌ನಿಂದ ಕೃಷಿ ಪಂಪ್‌ಗಳು ಕೆಲಸ ಮಾಡುತ್ತಿಲ್ಲ. ಇದರಿಂದ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಿಸಿ, ಬೆಳೆಗಳೆಲ್ಲವೂ ನೆಲಕಚ್ಚುತ್ತಿದೆ. ಬನವಾಸಿಗೆ ಪ್ರತ್ಯೇಕ ಉಪಕೇಂದ್ರ ಮಂಜೂರಿ ಮಾಡಿ, ಇಲ್ಲಿನ ಜನರ ಬಹುವರ್ಷದ ಬೇಡಿಕೆ ಈಡೇರಿಸುವಂತೆ ೨೦೦೯ರಿಂದ ಸ್ಥಳೀಯ ಶಾಸಕರಿಗೆ, ಸರ್ಕಾರಕ್ಕೆ, ಹೆಸ್ಕಾಂಗೆ ಮನವಿ ಸಲ್ಲಿಸುತ್ತ ಬಂದಿದ್ದರು.
ಶಾಸಕ ಶಿವರಾಮ ಹೆಬ್ಬಾರ ವಿಶೇಷ ಪ್ರಕರಣವೆಂದು ಪರಿಗಣಿಸಿ, ಸರ್ಕಾರದ ಮೇಲೆ ಒತ್ತಡ ತಂದು ಬನವಾಸಿಗೆ ಪ್ರತ್ಯೇಕ ಗ್ರಿಡ್ ಮಂಜೂರಿ ಮಾಡಿ, ಅನುದಾನ ಬಿಡುಗಡೆಗೊಳಿಸಿ, ಜಾಗದ ಸಮಸ್ಯೆಯನ್ನು ಬಗೆಹರಿಸಿ, ಅರಣ್ಯ ಇಲಾಖೆಯ ಜಾಗವನ್ನು ಕೆಪಿಟಿಸಿಎಲ್‌ಗೆ ಹಸ್ತಾಂತರಿ, ಗ್ರಿಡ್ ಕಾಮಗಾರಿ ಸಂಪೂರ್ಣ ಮುಕ್ತಾಯವಾಗುವಲ್ಲಿ ಯಶಸ್ವಿಯಾಗಿದ್ದರು.ಬನವಾಸಿ- ದಾಸನಕೊಪ್ಪ ರಸ್ತೆಯಲ್ಲಿ ೨೦೨೨ರ ಏ. ೪ರಂದು ಆರಂಭವಾಗಿ ಸುಮಾರು ₹೧೨.೩೯ ಕೋಟಿ ವೆಚ್ಚದಲ್ಲಿ ವಿದ್ಯುತ್ ಗ್ರಿಡ್ ಕಾಮಗಾರಿ ಕಳೆದ ಮೇ ತಿಂಗಳಿನಲ್ಲಿ ಸಂಪೂರ್ಣ ಮುಗಿದಿದೆ. ಆದರೆ, ಜಡೆ ಕೇಂದ್ರದಿಂದ ಕೃಷಿ ಭೂಮಿಯಲ್ಲಿ ವಿದ್ಯುತ್ ಟವರ್ ಅಳವಡಿಸುವುದನ್ನು ವಿರೋಧಿಸಿ, ರೈತರು ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಕೆಪಿಟಿಸಿಎಲ್‌ನ ಅಧಿಕಾರಿಗಳು ಕೈಚೆಲ್ಲಿ ಕುಳಿತುಕೊಳ್ಳಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ. ಸ್ಥಳೀಯರಿಗೆ ಉಪಯೋಗವಾಗುವಂತಹ ಗ್ರಿಡ್ ಆರಂಭಕ್ಕೆ ರೈತರು ಅನುಕೂಲ ಮಾಡಿಕೊಡಬೇಕು ಎಂದು ಬನವಾಸಿ ಭಾಗದ ಸುತ್ತಮುತ್ತಲಿನ ನಾಗರಿಕರು ವಿನಂತಿಸಿದ್ದಾರೆ.
ಬನವಾಸಿಯ ವಿದ್ಯುತ್ ಉಪಕೇಂದ್ರದ ಕಾಮಗಾರಿ ಸಂಪೂರ್ಣ ಮುಕ್ತಾಯಗೊಂಡಿದ್ದು, ಚಂದ್ರಗುತ್ತಿ ಮಾರ್ಗದ ಬದಲಾಗಿ ಜಡೆ ಕೇಂದ್ರದಿಂದ ವಿದ್ಯುತ್ ಲೈನ್ ಎಳೆಯಲು ಪ್ರಸ್ತಾವನೆ ಸಿದ್ಧಪಡಿಸಿ, ಅರಣ್ಯ ಇಲಾಖೆಗೆ ಜಾಗ ಮಂಜೂರಿ ಮಾಡುವಂತೆ ಪತ್ರ ಬರೆಯಲಾಗಿದ್ದು, ಯೋಜನೆಯನ್ನು ಪರಿಶೀಲಿಸಿ, ಅರಣ್ಯ ಇಲಾಖೆ ಕಾಮಗಾರಿಗೆ ಒಪ್ಪಿಗೆ ನೀಡಿತ್ತು. ೩೮ ಟವರ್‌ಗಳಲ್ಲಿ ೨೫ ಟವರ್‌ಗಳನ್ನು ಈಗಾಗಲೇ ಅಳವಡಿಸಲಾಗಿದೆ. ಜಡೆ ಭಾಗದಲ್ಲಿ ೧೦ ಟವರ್ ಮತ್ತು ಬನವಾಸಿ ಭಾಗದಲ್ಲಿ ೩ ಟವರ್ ಕೃಷಿ ಭೂಮಿಯಲ್ಲಿ ಅಳವಡಿಸಬೇಕಾಗಿದೆ. ಭೂಮಿಯ ಮಾಲೀಕರು ನಮ್ಮ ಜಾಗದಲ್ಲಿ ಟವರ್ ನಿರ್ಮಿಸಬಾರದು ಎಂದು ನ್ಯಾಯಾಲದಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಕಾರಣದಿಂದ ವಿಳಂಬವಾಗಿದೆ. ಭೂಮಿ ಕಳೆದುಕೊಳ್ಳುವ ಮಾಲೀಕರಿಗೆ ಪರಿಹಾರ ನೀಡಲು ಜಿಲ್ಲಾಧಿಕಾರಿ ಮತ್ತು ಸಹಾಯಕ ಆಯುಕ್ತರು ಸಭೆ ನಡೆಸಿ, ಸೂಚನೆ ನೀಡಿದ್ದಾರೆ.ಟವರ್ ನಿರ್ಮಿಸಲು ಅವಕಾಶ ಮಾಡಿಕೊಟ್ಟು ದಾಖಲೆಪತ್ರಗಳನ್ನು ನೀಡಿದರೆ ನಾವು ತಕ್ಷಣ ಪರಿಹಾರ ನೀಡುತ್ತೇವೆ. ೩ ಬಾರಿ ರೈತರ ಮನವೊಲಿಕೆಗೆ ಪ್ರಯತ್ನ ಮಾಡಲಾಗಿತ್ತು. ಬನವಾಸಿ ಭಾಗದ ಸುತ್ತಮುತ್ತ ವಿದ್ಯುತ್ ಸಮಸ್ಯೆಯಿಂದ ಜನರು ಅನುಭವಿಸುತ್ತಿರುವ ತೊಂದರೆಯನ್ನು ರೈತರಿಗೆ ತಿಳಿಸಿ, ಸ್ಥಳೀಯ ಶಾಸಕ ಶಿವರಾಮ ಹೆಬ್ಬಾರ ಮನವೊಲಿಸಲು ಪ್ರಯತ್ನ ಮಾಡಿದ್ದರು. ಆದರೂ ರೈತರು ಒಪ್ಪಿಲ್ಲ. ಟವರ್ ನಿರ್ಮಾಣದ ಸಮಸ್ಯೆಯಿಂದ ವಿದ್ಯುತ್ ಉಪಕೇಂದ್ರ ಕಾರ್ಯಾರಂಭಕ್ಕೆ ತೊಡಕುಂಟಾಗಿದೆ ಎಂದು ಕೆಪಿಟಿಸಿಎಲ್ ಬೃಹತ್ ಕಾಮಗಾರಿ ವಿಭಾಗದ ಎಂಜಿನಿಯರ್ ಸುನೀಲಕುಮಾರ ತಿಳಿಸಿದರು.ವಿದ್ಯುತ್ ಸಮಸ್ಯೆ: ಬೇಸಿಗೆಯಲ್ಲಿ ಹಗಲಿನ ವೇಳೆ ಪಂಪ್‌ಗಳು ಆನ್ ಆಗುತ್ತಿಲ್ಲ. ರಾತ್ರಿ ಹೊಲಗಳಿಗೆ ತೆರಳಿದರೆ ಪ್ರಾಣಿಗಳ ಭಯ. ಹಲವು ವರ್ಷದ ನಂತರ ಗ್ರಿಡ್ ನಿರ್ಮಾಣಗೊಂಡರೂ, ಸಮರ್ಪಕ ವಿದ್ಯುತ್ ಮಾತ್ರ ಸಿಕ್ಕಿಲ್ಲ. ಇನ್ನು ಎಷ್ಟು ವರ್ಷ ಕಾಯಬೇಕಾದ ಸ್ಥಿತಿ ಇದೆಯೋ ಎಂದು ತಿಳಿಯುತ್ತಿಲ್ಲ ಎನ್ನುತ್ತಾರೆ ರೈತರು.ಶೀಘ್ರ ಕಾರ್ಯಾರಂಭ: ಬನವಾಸಿಯ ಉಪಕೇಂದ್ರದ ಶೇ. ೧೦೦ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ. ವಿದ್ಯುತ್ ಲೈನ್ ಶೇ. ೬೫ರಷ್ಟು ಮುಕ್ತಾಯಗೊಂಡಿದೆ. ಬನವಾಸಿ ಭಾಗದಲ್ಲಿ ೩ ಟವರ್ ನಿರ್ಮಾಣ ಮತ್ತು ೪ ಕಿ.ಮೀ ವಿದ್ಯುತ್ ಲೈನ್ ಎಳೆಯಬೇಕಾಗಿದೆ. ಜಡೆ ಭಾಗದಲ್ಲಿ ೧೦ ಟವರ್ ನಿರ್ಮಾಣ ಮಾಡಬೇಕಿದೆ. ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥಗೊಂಡಲ್ಲಿ ಶೀಘ್ರದಲ್ಲಿ ಬನವಾಸಿ ಗ್ರಿಡ್ ಕಾರ್ಯಾರಂಭ ಮಾಡಲಿದೆ ಎಂದು ಕೆಪಿಟಿಸಿಎಲ್ ಎಂಜಿನಿಯರ್ ಸುನೀಲಕುಮಾರ ತಿಳಿಸಿದರು.