ರಂಗ ಶಿಕ್ಷಣದಿಂದ ಮಕ್ಕಳ ಪ್ರತಿಭೆಗಳ ಅನಾವರಣ: ಶಾಸಕ ಯಶ್ಪಾಲ್

KannadaprabhaNewsNetwork |  
Published : Dec 22, 2024, 01:30 AM IST
21ರಂಗ | Kannada Prabha

ಸಾರಾಂಶ

ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಂಗಭೂಮಿ ಉಡುಪಿ ಪ್ರಾರಂಭಿಸಿರುವ ಶಾಲಾ ಕಾಲೇಜುಗಳಲ್ಲಿ ‘ರಂಗ ಶಿಕ್ಷಣ’ ತರಬೇತಿ ಪಡೆದ ಶಾಲಾ ಮಕ್ಕಳಿಂದ ‘ಮಕ್ಕಳ ನಾಟಕೋತ್ಸವ’ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ರಂಗಭೂಮಿ ಉಡುಪಿ ತನ್ನ ನಿರಂತರ ಚಟುವಟಿಕೆಗಳಿಂದ ಜಿಲ್ಲೆಯ ಅನೇಕ ರಂಗಕರ್ಮಿಗಳನ್ನು ನಾಡಿಗೆ ಪರಿಚಯಿಸಿದೆ. ಪ್ರಸ್ತುತ ಶಾಲಾ ಕಾಲೇಜುಗಳಲ್ಲಿ ಪ್ರಾರಂಭಿಸಿರುವ ‘ರಂಗ ಶಿಕ್ಷಣ’ ಅಭಿಯಾನದಿಂದ ಜಿಲ್ಲೆಯ ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆಯಾಗಲಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದರು.ಅವರು ಶನಿವಾರ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಂಗಭೂಮಿ ಉಡುಪಿ ಪ್ರಾರಂಭಿಸಿರುವ ಶಾಲಾ ಕಾಲೇಜುಗಳಲ್ಲಿ ‘ರಂಗ ಶಿಕ್ಷಣ’ ತರಬೇತಿ ಪಡೆದ ಶಾಲಾ ಮಕ್ಕಳಿಂದ ‘ಮಕ್ಕಳ ನಾಟಕೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಯಕ್ಷಗಾನ ಕಲಾರಂಗದ ಮೂಲಕ ಜಿಲ್ಲೆಯಲ್ಲಿ ಈ ಹಿಂದೆ ಆರಂಭಿಸಿರುವ ‘ಯಕ್ಷ ಶಿಕ್ಷಣ’ ಮೂಲಕ ಶಾಲಾ ಮಕ್ಕಳಿಗೆ ಯಕ್ಷಗಾನ ತರಬೇತಿ ಇಂದು ನಾಡಿಗೆ ಮಾದರಿಯಾಗಿದೆ. ಡಿಸೆಂಬರ್‌ನಲ್ಲಿ ನಡೆಯುವ ಕಿಶೋರ ಯಕ್ಷಗಾನ ಸಂಭ್ರಮ ಬಹು ಪ್ರಸಿದ್ಧಿ ಪಡೆದಿದೆ. ಈ ಮಾದರಿಯಲ್ಲಿಯೇ ರಂಗ ಶಿಕ್ಷಣ ಕೂಡಾ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ರಂಗಭೂಮಿ ಉಡುಪಿಯ ಪದಾಧಿಕಾರಿಗಳು ಅಭಿನಂದನಾರ್ಹರು ಎಂದು ಶ್ಲಾಘಿಸಿದರು.ರಂಗಭೂಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿ, ಯಕ್ಷಗಾನ, ರಂಗಭೂಮಿ ನಾಟಕಗಳಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಾಗುತ್ತದೆ. ಶಾಲೆಗಳಲ್ಲಿ ಯಕ್ಷಗಾನವನ್ನು ಕಲಿಸುವ ಮೂಲಕ ಭವಿಷ್ಯದಲ್ಲಿ ಯಕ್ಷಗಾನಕ್ಕೆ ಪ್ರೇಕ್ಷಕರು ಹಾಗೂ ಕಲಾವಿದರ ಕೊರತೆಯಾಗುವುದನ್ನು ತಪ್ಪಿಸಿದೆ. ಇದೇ ಮಾದರಿಯಲ್ಲಿ ರಂಗಭೂಮಿ ಶಿಕ್ಷಣದಿಂದ ಉತ್ತಮ ನಟರು, ನಾಟಕಾಸಕ್ತರು ಹುಟ್ಟಿಕೊಳ್ಳುವುದಕ್ಕೆ ಸಾಧ್ಯವಿದೆ ಎಂದರು.ಮಾಜಿ ಶಾಸಕ ರಘುಪತಿ ಭಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮಿ ನಾರಾಯಣ ಕಾರಂತ, ಉದ್ಯಮಿ ರಂಜನ್ ಕೆ., ರಂಗಭೂಮಿ ಉಪಾಧ್ಯಕ್ಷ ಎನ್.ರಾಜಗೋಪಾಲ್ ಬಲ್ಲಾಳ್ ಉಪಸ್ಥಿತರಿದ್ದರು.ರಂಗಶಿಕ್ಷಣದ ಸಂಚಾಲಕ ಯು.ವಿದ್ಯಾವಂತ ಆಚಾರ್ಯ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಹ ಸಂಚಾಲಕ ರವಿರಾಜ್ ನಾಯಕ್ ಕಾರ್ಯಕ್ರಮ ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ವಂದಿಸಿದರು.ಶನಿವಾರ ನಡೆದ ಮಕ್ಕಳ ನಾಟಕೋತ್ಸವದಲ್ಲಿ ರಂಗ ಶಿಕ್ಷಣ ಪಡೆದ ೫ ಪ್ರೌಢಶಾಲೆಗಳ ಮಕ್ಕಳಿಂದ ೫ ನಾಟಕಗಳು ಪ್ರಸ್ತುತಿಗೊಂಡವು. ಡಿ.೨೮ರಂದು ಮತ್ತೆ ೭ ಶಾಲೆಗಳಿಂದ ನಾಟಕಗಳು ಪ್ರದರ್ಶನಗೊಳ್ಳಲಿವೆ. ಒಟ್ಟು ೧೨ ಶಾಲೆಗಳು ಈ ರಂಗಶಿಕ್ಷಣದಲ್ಲಿ ಪಾಲ್ಗೊಂಡಿವೆ.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ