ಕಾವ್ಯದೊಳಗೆ ಸಮಕಾಲೀನ ಸಮಸ್ಯೆಗಳ ಅನಾವರಣ

KannadaprabhaNewsNetwork |  
Published : Jul 11, 2025, 12:32 AM IST
 | Kannada Prabha

ಸಾರಾಂಶ

ರಾಜ್ಯದಲ್ಲಿ ಹೆಚ್ಚು ಯುವತಲೆಮಾರಿನ ಕವಿಗಳು ಕಾವ್ಯ ರಚಿಸುತ್ತಿದ್ದಾರೆ. ಹೀಗಾಗಿ ಕಾವ್ಯದ ಸಮೃದ್ಧ ಕಾಲ ಈಗ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ, ತುಮಕೂರು

ರಾಜ್ಯದಲ್ಲಿ ಹೆಚ್ಚು ಯುವತಲೆಮಾರಿನ ಕವಿಗಳು ಕಾವ್ಯ ರಚಿಸುತ್ತಿದ್ದಾರೆ. ಹೀಗಾಗಿ ಕಾವ್ಯದ ಸಮೃದ್ಧ ಕಾಲ ಈಗ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾಸ್ಪತ್ರೆಯ ಸಭಾಂಗಣದಲ್ಲಿ ಗುರುವಾರ ಕರ್ನಾಟಕ ಸಾಹಿತ್ಯ ಅಕಾಡೆಮಿ ಏರ್ಪಡಿಸಿದ್ದ ಬೆಂಗಳೂರು ವಿಭಾಗಮಟ್ಟದ ಯುವ ಕವಿಗೋಷ್ಠಿಯನ್ನು ತಮ್ಮ ಒಂದು ಬೆಳಕಿನ ದಿನಕ್ಕಾಗಿ ಕವಿತೆ ಓದುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಯುವತಲೆಮಾರಿನ ಅನೇಕ ಕವಿಗಳು ಅತ್ಯುತ್ತಮ ಕವನಗಳನ್ನು ರಚಿಸುತ್ತಿದ್ದಾರೆ. ಇದಕ್ಕಾಗಿ ಒಂದೇ ಬಾರಿ ರಾಜ್ಯಮಟ್ಟದ ಕವಿಗೋಷ್ಠಿ ಆಯೋಜಿಸದೆ ನಾಲ್ಕು ವಲಯಮಟ್ಟದ ಕವಿಗೋಷ್ಠಿಗಳನ್ನು ಏರ್ಪಡಿಸಿದ್ದೇವೆ ಎಂದು ತಿಳಿಸಿದರು. ಈಗಿನ ಯುವಕವಿಗಳು ಪ್ರೀತಿ, ಪ್ರೇಮ, ಪ್ರಣಯ ಕುರಿತು ಬರೆಯದೆ ಸಂವಿಧಾನ, ಪ್ರಜಾಪ್ರಭುತ್ವ, ಸೌಹಾರ್ದ, ಮಾನವೀಯತೆ, ಮೌಲ್ಯಗಳ ಕುರಿತು ಕಾವ್ಯ ಕಟ್ಟುತ್ತಿದ್ದಾರೆ. ಈ ಮೂಲಕ ಈ ಕಾಲದ ಸಮಸ್ಯೆಗಳನ್ನು ಅನಾವರಣಗೊಳಿಸುತ್ತಿದ್ದಾರೆ. ಆದರೆ ಕವಿಗಳನ್ನು, ಬುದ್ಧಿಜೀವಿಗಳನ್ನು ಕೋಮುವಾದಿಗಳು, ಸಂಪ್ರದಾಯವಾದಿಗಳು ಟಾರ್ಗೆಟ್ ಮಾಡುತ್ತಿದ್ದಾರೆ. ಆದರೆ ಬರಹಗಾರರ ಆತ್ಮಸ್ಥೈರ್ಯ ಕುಗ್ಗಿಸಲು ಆಗುವುದಿಲ್ಲ. ಏಕೆಂದರೆ ಅವರೊಳಗಿನ ಕನ್ನಡ ಸಾಹಿತ್ಯ ಪರಂಪರೆ ಕುಗ್ಗಿಸಲ್ಲ ಎಂದು ವಿವರಿಸಿದರು. ಈಗಿನ ಕಾಲದ ಕವಿಗಳಿಗೆ ಬೇಕಾಗಿರೋದೆ ಮೆಚ್ಚುಗೆ. ಅವರನ್ನು ಗುರುತಿಸಬೇಕು, ಬೆನ್ನು ತಟ್ಟಬೇಕು. ಇದಕ್ಕಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕವಿಗೋಷ್ಠಿ ಮೂಲಕ ಪ್ರೋತ್ಸಾಹಿಸುತ್ತಿದೆ ಎಂದರು.

ಮುಖ್ಯ ಅತಿಥಿಯಾದ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಸ್ಗರ್ ಬೇಗ್ ಮಾತನಾಡಿ, ಗಟ್ಟಿ ಸಮಾಜ ಕಟ್ಟಲು ಕವಿಗಳ ಅಗತ್ಯವಿದೆ ಎಂದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಪಿ.ಚಂದ್ರಿಕಾ ಮಾತನಾಡಿ, ಅಕ್ಷರವು ವಿವೇಕ, ವಿವೇಚನೆ ಹಾಗೂ ವಿಮೋಚನೆ ನೀಡಬೇಕು ಎಂದರು. ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಅಕ್ಕೈ ಪದ್ಮಶಾಲಿ ಮಾತನಾಡಿ, ಒಳಗೆ ಸುಳಿವ ಆತ್ಮ ಹೆಣ್ಣೂ ಅಲ್ಲ ಗಂಡೂ ಅಲ್ಲ ಎಂದು ನಿರ್ಧರಿಸುವವರು ಯಾರು ಎಂದು ಪ್ರಶ್ನಿಸಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಜಿಲ್ಲಾ ಶಾಖೆ ಅಧ್ಯಕ್ಷೆ ಮಲ್ಲಿಕಾ ಬಸವರಾಜು ಮಾತನಾಡಿ, ಸುತ್ತಲಿನ ತವಕ ಹಾಗೂ ತಲ್ಲಣಗಳಿಗೆ ಸ್ಪಂದಿಸಿದರೆ ಸಮಷ್ಟಿ ನೆಲೆಯಲ್ಲಿ ಕಾವ್ಯ ಕಟ್ಟಲು ಸಾಧ್ಯ ಎಂದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ ಕೆ. ಸ್ವಾಗತಿಸಿದರು. ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕಿ ಸುಮಾ ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಣಿ ಚಂದ್ರಶೇಖರ್ ಕಾರ‍್ಯಕ್ರಮ ನಿರೂಪಿಸಿದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು