ಗುರುಗ್ರಂಥ ಮಾಲಿಕೆಯ ಅನಾವರಣ

KannadaprabhaNewsNetwork |  
Published : Jul 23, 2024, 12:32 AM IST
ಪೋಟೋ: ಎಚ್-22ಜಿಕೆಎನ್ 4 ಶ್ರೀಗಳು ಆರ್ಶೀವಚನ ನೀಡುತ್ತಿರುವುದು | Kannada Prabha

ಸಾರಾಂಶ

ವಿಶ್ವವಿದ್ಯಾಪೀಠದ ಮೂಲ ಆಶಯವೇ ಇಂಥ ಅಮೂಲ್ಯ ಗ್ರಂಥಗಳನ್ನು ಉಳಿಸುವುದು. ನಮ್ಮ ಬದುಕಿಗೆ ದಾರಿದೀಪವಾಗಬಲ್ಲ ಇಂಥ ಗ್ರಂಥಗಳ ಅನಾವರಣ ಅರ್ಥಪೂರ್ಣ ಎಂದು ರಾಘವೇಶ್ವರ ಶ್ರೀಗಳು ತಿಳಿಸಿದರು.

ಗೋಕರ್ಣ: ನಮ್ಮ ಪರಂಪರೆಯ 35ನೇ ಪೀಠಾಧಿಪತಿಗಳಾಗಿದ್ದ ರಾಘವೇಂದ್ರ ಭಾರತೀ ಸ್ವಾಮಿಗಳ ವಿದ್ಯಾಸಂಪನ್ನತೆ ಅದ್ಭುತ. ಅವರ ವಿದ್ವತ್ತಿನ, ವಿದ್ಯೆಯ ಅನಾವರಣ ಇಡೀ ಸಮಾಜಕ್ಕೆ ಪ್ರೇರಣೆಯಾಗಲಿ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ಆಶಿಸಿದರು.

ಅಶೋಕೆಯ ವಿವಿವಿ ಆವರಣದಲ್ಲಿ ಅನಾವರಣ ಚಾತುಮಾಸ್ಯದ ಎರಡನೇ ದಿನ ಗುರುಗ್ರಂಥ ಮಾಲಿಕೆಯ ಅನಾವರಣ ಸಂದರ್ಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಇಂದು ಅವರ ಖಾಸಗಿ ಗ್ರಂಥ ಭಂಡಾರ ಅನಾವರಣಗೊಂಡಿದೆ. ಇದು ಸರಸ್ವತಿಯ ಅನಾವರಣ. ಬದುಕನ್ನು ಬೆಳಗುವ ಬೆಳಕಿನ ಅನಾವರಣ ಎಂದು ಬಣ್ಣಿಸಿದರು.ವಿಶ್ವವಿದ್ಯಾಪೀಠದ ಮೂಲ ಆಶಯವೇ ಇಂಥ ಅಮೂಲ್ಯ ಗ್ರಂಥಗಳನ್ನು ಉಳಿಸುವುದು. ನಮ್ಮ ಬದುಕಿಗೆ ದಾರಿದೀಪವಾಗಬಲ್ಲ ಇಂಥ ಗ್ರಂಥಗಳ ಅನಾವರಣ ಅರ್ಥಪೂರ್ಣ ಎಂದು ಅಭಿಪ್ರಾಯಪಟ್ಟರು.ಇಂದು ಶ್ರೀ ಪರಿವಾರದ ಗುರುಭಿಕ್ಷಾಸೇವೆ ನಡೆದಿದೆ. ಇದು ಪ್ರತಿ ಚಾತುರ್ಮಾಸ್ಯದ ಎರಡನೇ ದಿನದ ವಿಶೇಷ. ಗುರುಸೇವೆಗೆ ಜೀವನವನ್ನೇ ಮುಡಿಪಾಗಿಟ್ಟ ಶ್ರೀ ಪರಿವಾರದ ಸೇವೆ ಶ್ಲಾಘನೀಯ ಎಂದು ಬಣ್ಣಿಸಿದರು.ಕಾಲ ಎಂಬ ವಿಷಯದ ಬಗ್ಗೆ ಪ್ರವಚನ ನೀಡಿದ ಸ್ವಾಮೀಜಿ, ಕಾಲಕ್ಕೆ ಇರುವ ಶಕ್ತಿ ಬೇರಾರಿಗೂ ಇರಲಾರದು. ಸುಖ ಹಾಗೂ ದುಃಖ ಚಕ್ರವಿದ್ದಂತೆ ಎಂದರು.ಮಹಾಭಾರತ ಯುದ್ಧದಲ್ಲಿ ಎರಡೂ ಕಡೆಗಳ ಅಸಂಖ್ಯಾತ ಮಂದಿ ಸಾವಿಗೀಡಾದ ಘಟನೆಯನ್ನು ನೆನೆದು ಧರ್ಮರಾಯ ಪಶ್ಚಾತ್ತಾಪ ಪಡುತ್ತಾನೆ. ಮಕ್ಕಳು, ಮೊಮ್ಮಕ್ಕಳು, ಸೋದರರು, ಚಿಕ್ಕಪ್ಪ- ದೊಡ್ಡಪ್ಪಂದಿರು, ಹೆಣ್ಣು ಕೊಟ್ಟ ಮಾವಂದಿರು, ಸೋದರಮಾವ, ಗುರುಗಳು, ಅಜ್ಜಂದಿರು ಎಲ್ಲರನ್ನೂ ಸಿಂಹಾಸನಕ್ಕಾಗಿ ಸಾಯಿಸಿದೆ ಎಂದು ದುಃಖಿಸುತ್ತಾನೆ. ದೇಹ ಅಳಿದುಹೋಗುವಂಥ ತಪಸ್ಸು ಮಾಡುತ್ತೇನೆ ಎಂಬ ನಿರ್ಧಾರಕ್ಕೆ ಬಂದ. ಅದರೆ ವಾಸ್ತವವಾಗಿ ಕಾಲ ಧರ್ಮರಾಜನಿಂದ ಎಲ್ಲವನ್ನೂ ಮಾಡಿಸಿರುತ್ತಾನೆ. ಪಾಪದ ಲವಲೇಶವೂ ಆತನಿಗೆ ತಟ್ಟುವುದಿಲ್ಲ ಎಂದರು.ಪ್ರಜೆಗಳ ಬಗ್ಗೆ, ಶತ್ರುಗಳ ಬಗ್ಗೆಯೂ ಕನಿಕರ ಇರುವ, ಜನಸಾಮಾನ್ಯರ ಕಷ್ಟ ಸುಖಗಳ ಪರಿಜ್ಞಾನ ಇರುವ ಇಂಥವರು ರಾಜರಾದಾಗ ಮಾತ್ರ ರಾಜ್ಯ ಸುಭಿಕ್ಷವಾಗುತ್ತದೆ ಎಂದು ವಿಶ್ಲೇಷಿಸಿದರು.ಇದಕ್ಕೂ ಮುನ್ನ ಗುರುಗ್ರಂಥ ಮಾಲಿಕೆಯ ಅನಾವರಣವನ್ನು ವಿದ್ವಾನ್ ಸತ್ಯನಾರಾಯಣ ಶರ್ಮಾ ನೆರವೇರಿಸಿದರು. ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್., ವಿವಿವಿ ಗೌರವಾಧ್ಯಕ್ಷ ಡಿ.ಡಿ. ಶರ್ಮಾ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಕೋಶಾಧ್ಯಕ್ಷ ಸುಧಾಕರ್, ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ವಿವಿವಿ ಆಡಳಿತಾಧಿಕಾರಿ ಡಾ. ಪ್ರಸನ್ನ ಕುಮಾರ್, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಹರಿಪ್ರಸಾದ್ ಪೆರಿಯಾಪು, ಶ್ರೀಕಾರ್ಯದರ್ಶಿ ಮಧು ಜಿ.ಕೆ., ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಮಹಾಮಂಡಲ ಪದಾಧಿಕಾರಿಗಳಾದ ಪ್ರಸನ್ನ ಉಡುಚೆ, ರುಕ್ಮಾವತಿ ಸಾಗರ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ