ಏಕನಾಥ ಮೆದಿಕೇರಿ
ಕರ್ನಾಟಕ ನಾಟಕ ಅಕಾಡೆಮಿಯ ಆಶ್ರಯದಲ್ಲಿ ಹನುಮಸಾಗರದ ನಿಸರ್ಗ ಸಂಗೀತ ವಿದ್ಯಾಲಯ ಹಾಗೂ ರಂಗ ಕಲಾವಿದರ ಸಂಘದ ವತಿಯಿಂದ ಅ. 24 ಮತ್ತು 25ರಂದು ಬೆಂಗಳೂರಿನ ಪ್ರತಿಷ್ಠಿತ ರವೀಂದ್ರ ಕಲಾಕ್ಷೇತ್ರದಲ್ಲಿ ಎರಡು ದಿನಗಳ ‘ಧುತ್ತರಗಿ ನಾಟಕೋತ್ಸವ’ ಆಯೋಜಿಸಲಾಗಿದೆ.
ಖ್ಯಾತ ನಾಟಕಕಾರ, ಕವಿ ಹಾಗೂ ರಂಗಕರ್ಮಿ ಪಿ.ಬಿ. ಧುತ್ತರಗಿ ಸ್ಮರಣಾರ್ಥ ಆಯೋಜಿಸಿರುವ ಈ ನಾಟಕೋತ್ಸವದಲ್ಲಿ ಅವರ ರಚನೆಯ ಮೂರು ಜನಪ್ರಿಯ ನಾಟಕಗಳು ಪ್ರದರ್ಶನಗೊಳ್ಳಲಿವೆ. ಇದೇ ಸಂದರ್ಭದಲ್ಲಿ ಕನ್ನಡ ರಂಗಭೂಮಿಯ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿದ ಸಾಧಕರನ್ನು ಗುರುತಿಸಿ ‘ಶ್ರೀ ಪಿ.ಬಿ. ಧುತ್ತರಗಿ ರಂಗ ಸನ್ಮಾನ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತದೆ. ಗ್ರಾಮೀಣ ಭಾಗದ ಕಲಾವಿದರಿಗೆ ರಾಜ್ಯಮಟ್ಟದ ಪ್ರತಿಷ್ಠಿತ ವೇದಿಕೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸುವುದು ಈ ಉತ್ಸವದ ಪ್ರಮುಖ ಉದ್ದೇಶವಾಗಿದೆ.ಎರಡು ದಿನ, ಮೂರು ನಾಟಕಗಳ ಪ್ರದರ್ಶನ: ಅ. 24ರಂದು ಸಂಜೆ 6 ಗಂಟೆಗೆ ನಾಟಕೋತ್ಸವಕ್ಕೆ ಚಾಲನೆ ದೊರೆಯಲಿದ್ದು, ಜಗದಾಳದ ಶ್ರೀ ಮಲ್ಲಿಕಾರ್ಜುನ ನಾಟ್ಯ ಸಂಘದ ಕಲಾವಿದರು ‘ವೀರ ಸಿಂಧೂರ ಲಕ್ಷ್ಮಣ’ ನಾಟಕ ಪ್ರದರ್ಶಿಸಲಿದ್ದಾರೆ. ಅ. 25ರಂದು ಬೆಳಗ್ಗೆ 11 ಗಂಟೆಗೆ ಹನುಮಸಾಗರದ ನಿಸರ್ಗ ರಂಗ ಕಲಾವಿದರು ರಂಗಕರ್ಮಿ ವಿರೂಪಾಕ್ಷಪ್ಪ ಧುತ್ತರಗಿ ಅವರ ನಿರ್ದೇಶನದಲ್ಲಿ ‘ಚಿಕ್ಕ ಸೊಸೆ’ ನಾಟಕ ಪ್ರಸ್ತುತಪಡಿಸಲಿದ್ದಾರೆ. ಅದೇ ದಿನ ಸಂಜೆ 6 ಗಂಟೆಗೆ ಕಮತಗಿಯ ಶ್ರೀ ಹೊಳೆ ಹುಚ್ಚೇಶ್ವರ ನಾಟ್ಯ ಸಂಘದ ಕಲಾವಿದರು ‘ಸಂಪತ್ತಿಗೆ ಸವಾಲ್’ ನಾಟಕ ಪ್ರದರ್ಶಿಸಲಿದ್ದಾರೆ.
ರಂಗಭೂಮಿಯ ಉಳಿವು, ಬೆಳವಣಿಗೆ ಮತ್ತು ಜನಪ್ರಿಯತೆಗಾಗಿ ಶ್ರಮಿಸಿದ ಕಲಾವಿದರು ಹಾಗೂ ರಂಗಸಾಧಕರ ಸೇವೆ ಗುರುತಿಸಿ, ಗೌರವಿಸುವ ಉದ್ದೇಶದಿಂದ ‘ಶ್ರೀ ಪಿ.ಬಿ. ಧುತ್ತರಗಿ ರಂಗ ಸನ್ಮಾನ ಪ್ರಶಸ್ತಿ’ ಪ್ರದಾನ ಮಾಡಲಾಗುತ್ತಿದೆ.
ರಾಜಧಾನಿಯಲ್ಲಿ ಹನುಮಸಾಗರದ ಕಲಾಪತಾಕೆ: ಹನುಮಸಾಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ರಂಗಭೂಮಿಯ ಚಟುವಟಿಕೆ ಹಲವು ವರ್ಷಗಳಿಂದ ಸಕ್ರಿಯವಾಗಿವೆ. ಸ್ಥಳೀಯ ಕಲಾವಿದರು ನಾಟಕಗಳ ಮೂಲಕ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಮಾನವೀಯ ಮೌಲ್ಯಗಳನ್ನು ಜನರಿಗೆ ತಲುಪಿಸುತ್ತಿದ್ದಾರೆ. ಇಂತಹ ಕಲಾವಿದರಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಂತಹ ಪ್ರತಿಷ್ಠಿತ ರಂಗಮಂದಿರದಲ್ಲಿ ಪ್ರದರ್ಶನ ನೀಡುವ ಅವಕಾಶ ದೊರೆತಿರುವುದು ಹನುಮಸಾಗರದ ಸಾಂಸ್ಕೃತಿಕ ವಲಯಕ್ಕೆ ಹೆಮ್ಮೆಯ ಸಂಗತಿಯಾಗಿದೆ.