ಸಿರಿಗೆರೆ: ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳ ಮಾದರಿಯಲ್ಲಿ ಉನ್ನತೀಕರಿಸಿ ಉತ್ತಮ ಶಿಕ್ಷಣ ನೀಡುವ ಗುರಿ ಇದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಉನ್ನತೀಕರಿಸಿದ ಶಾಲೆಗಳಲ್ಲಿ ಸಂಗೀತ, ನೃತ್ಯ, ದೈಹಿಕ ಶಿಕ್ಷಣ ತರಬೇತಿ, ಇಂಗ್ಲಿಷ್ ಜ್ಞಾನವನ್ನು ಕಲಿಸುವಂತಹ ಶಿಕ್ಷಣವನ್ನು ಜಾರಿಗೆ ತರುವ ಉದ್ದೇಶ ಇದೆ. ಜೊತೆಗೆ ಕರ್ನಾಟಕ ಪಬ್ಲಿಕ್ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸುವ ಗುರಿ ಇದೆ ಎಂದರು.
ರಾಜ್ಯದಲ್ಲಿ 75 ಸಾವಿರ ಶಾಲೆಗಳು ಇವೆ. ಅವುಗಳಲ್ಲಿ 1 ಕೋಟಿ 20 ಲಕ್ಷ ಮಕ್ಕಳು ಓದುತ್ತಿದ್ದಾರೆ. ಅವರಿಗೆ ಉತ್ತಮ ರೀತಿಯ ಶಿಕ್ಷಣ ನೀಡುವುದು ಇಲಾಖೆಯ ಹೊಣೆಗಾರಿಕೆಯಾಗಿದೆ ಎಂದರು.ಶಿಕ್ಷಣ ಇಲಾಖೆಯ ಸಮಸ್ಯೆಗಳನ್ನು ಬಗೆಹರಿಸಲು ಅನುಭವ ಇರುವ ತರಳಬಾಳು ಶ್ರೀಗಳ ಮಾರ್ಗದರ್ಶನ ಬೇಕಾಗಿದೆ. ವಿಶ್ವವಿದ್ಯಾಲಯದ ರೀತಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಅವರ ಸಂಸ್ಥೆಯೇ ಒಂದು ಸರ್ಕಾರ ಇದ್ದಂತೆ ಇದೆ. ಈಗಾಗಲೇ ಶಿಕ್ಷಣ ಇಲಾಖೆಯ ಸಮಸ್ಯೆಗಳ ಬಗ್ಗೆ ಅವರೊಂದಿಗೆ ಚರ್ಚಿಸಿದ್ದೇನೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಮೊದಲಿನಿಂದಲೂ ತರಳಬಾಳು ಮಠದ ಮೇಲೆ ವಿಶ್ವಾಸ ಹೊಂದಿದ್ದರು. ಆ ದಾರಿಯಲ್ಲಿ ನಾನೂ ಕೂಡ ನಡೆಯುತ್ತಿದ್ದೇನೆ ಎಂದು ಮಧು ಬಂಗಾರಪ್ಪ ಹೇಳಿದರು.
ಮುಳಗುಂದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ, ಕ್ರೀಡಾಮೇಳದ ಅಂಗವಾಗಿ ನಡೆದ ನೃತ್ಯ, ಸಂಗೀತ, ಮಲ್ಲಿಹಗ್ಗ ನಮಗೆ ಅದ್ಭುತವಾಗಿ ಕಂಡವು. ಇಂತಹ ಚಟುವಟಿಕೆಗಳನ್ನು ಬೇರೆ ಯಾವುದೇ ವಿದ್ಯಾಸಂಸ್ಥೆಯಲ್ಲಿ ತಾವು ಕಂಡಿದ್ದಿಲ್ಲ. ಅಂತಹ ಆಶ್ಚರ್ಯ ನಮಗಾಯಿತು. ಕ್ರೀಡೆ ಮನಸ್ಸನ್ನು ಅರಳಿಸುತ್ತದೆ. ಮಕ್ಕಳು ದೈಹಿಕ ಸ್ವಾಸ್ಥ್ಯ ಕಾಪಾಡಿಕೊಂಡು ಆರೋಗ್ಯವಂತರಾಗಿ ಇರಬೇಕು ಎಂದರು.
ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರವಿಶಂಕರ್ ರೆಡ್ಡಿ, ಬಿಇಓ ನಾಗಭೂಷಣ್, ಮಾಜಿ ಸಚಿವ ಎಚ್.ಆಂಜನೇಯ, ಪ್ರೊ.ಎಸ್.ಬಿ.ರಂಗನಾಥ್ ಮುಂತಾದವರು ವೇದಿಕೆಮೇಲಿದ್ದರು.