ಉಡುಪಿ: ಆನಂದ ಪಡೆಯುವುದೇ ಎಲ್ಲರ ಜೀವನದ ಉದ್ದೇಶ. ಆದರೆ ಆನಂದ ಪಡೆಯಲು ಮಾದಕ ಪದಾರ್ಥಗಳ ಮೊರೆ ಹೋದರೆ ಜೀವನವೇ ನಾಶವಾದಂತೆ ಎಂದು ಬ್ರಹ್ಮಕುಮಾರಿಸ್ ಮಣಿಪಾಲ ಪಟಕದ ಧ್ಯಾನ ಶಿಕ್ಷಕಿ ಬಿ.ಕೆ.ಸೌರಭ ಹೇಳಿದ್ದಾರೆ.
ಮಾದಕ ಪದಾರ್ಥ ಸೇವನೆಯನ್ನು ಯಾವುದೇ ಕಾರಣಕ್ಕಾಗಿ ಆರಂಬಿಸಿದರೂ ಕ್ರಮೇಣ ಅದು ಚಟವಾಗಿ ಬೆಳೆದು ಅದರ ಸೇವನೆಯ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗಿ ಆ ವ್ಯಕ್ತಿಯ ಜೀವನವನ್ನೆ ಸರ್ವನಾಶ ಮಾಡುತ್ತದೆ ಹಾಗಾಗಿ ಧ್ಯಾನ ಹಾಗೂ ಇನ್ನಿತರ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಇಂತಹ ದುಶ್ಚಟಗಳಿಂದ ಪಾರಾಗಬೇಕು ಎಂಬುದಾಗಿ ಅವರು ತಿಳಿಸಿದರು.
ಮದ್ಯ ಹಾಗೂ ಮಾದಕ ದ್ರವ್ಯ ವ್ಯಸನಿಗಳಾಗದಂತೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದ ಅವರು, ಸ್ವದೇಶಿ ವಸ್ತುಗಳನ್ನು ಮಾತ್ರ ಉಪಯೋಗಿಸುವೆವೆಂಬುದಾಗಿಯೂ ಸಹ ವಿದ್ಯಾರ್ಥಿಗಳಿಂದ ಪ್ರತಿಜ್ಞೆ ಮಾಡಿಸಿದರು.ಉಡುಪಿಯ ಖ್ಯಾತ ಜಾದೂಗಾರರಾದ ಪ್ರೊಫೆಸರ್ ಶಂಕರ್ ಜಾದೂ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳಲ್ಲಿ ಮಾದಕ ದ್ರವ್ಯಗಳ ದುಪ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿದರು.